Advertisement

ನೆರೆಗೆ ಮೇಲೆ ನೆರೆಗೆ ನಲುಗಿದ ಜನತೆ

08:54 PM Oct 16, 2019 | Lakshmi GovindaRaju |

ಹುಣಸೂರು: ಕಳೆದ ತಿಂಗಳು ಸಂಭವಿಸಿದ್ದ ಪ್ರವಾಹದಿಂದ ತಾಲೂಕಿನ ಜನತೆ ಇನ್ನು ಚೇತರಿಸಿಕೊಂಡಿಲ್ಲ. ಇದರ ಬೆನ್ನಲೇ ನಿತ್ಯ ಸುರಿಯುತ್ತಿರುವ ಮಳೆ ಜೊತೆಗೆ ಮಂಗಳವಾರ ರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಗೆ ಹಲವಾರು ಮನೆಗಳು, ಬೃಹತ್‌ ಗಾತ್ರದ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಅಲ್ಲದೇ ತೆಂಗಿನ ಮರಗಳು, ಅಡಕೆ, ಬಾಳೆ ಬೆಳೆ ನೆಲಕಚ್ಚಿದ್ದು, ಜಮೀನುಗಳು ಜಲಾವೃತವಾಗಿವೆ.

Advertisement

ತಾಲೂಕಿನ ಕಸಬಾ, ಹನಗೋಡು, ಗಾವಡಗೆರೆ ಹೋಬಳಿಯಾದ್ಯಂತ ಮಂಗಳವಾರ ರಾತ್ರಿ ಸುರಿದ ಗುಡುಗು ಸಹಿತ ಬಿರುಗಾಳಿ ಮಳೆಗೆ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ, ಮರಗಳು, 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಕಳೆದ ಒಂದು ವಾರದಿಂದ ರಾತ್ರಿ ವೇಳೆಯೇ ಹೆಚ್ಚು ಮಳೆ ಬೀಳುತ್ತಿದ್ದು, ಮುಂಗಾರಿನಲ್ಲಿ ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಹೆಚ್ಚು ನಷ್ಟ ಉಂಟಾಗಿತ್ತು. ಮಂಗಳವಾರ ರಾತ್ರಿ ಸುರಿದ ಜೋರು ಮಳೆ-ಬಿರುಗಾಳಿಯಿಂದಾಗಿ ನಗರ ಸೇರಿದಂತೆ ತಾಲೂಕಿನ ಹಲವೆಡೆ ಮರಗಳು ಉರುಳಿ ಬಿದ್ದು ಹೆದ್ದಾರಿ ಸೇರಿದಂತೆ ಕೆಲವೆಡೆ ರಸ್ತೆ ಬಂದ್‌ ಆಗಿತ್ತು. ಮನೆಗಳು-ಶಾಲೆ ಮೇಲೆ ಮರ ಬಿದ್ದು ಸಾಕಷ್ಟು ಹಾನಿಯಾಗಿದೆ. ಕೆಲವೆಡೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಬೆಳೆಗಳು ಜಲಾವೃತ್ತವಾಗಿವೆ. ರಸ್ತೆಗಳು ಕೊಚ್ಚಿ ಹೋಗಿವೆ.

ಮನೆಗಳಿಗೆ ನುಗ್ಗಿದ ನೀರು: ನಗರದ ಮಂಜುನಾಥ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದ್ದು, ನಗರ ಸೇರಿದಂತೆ ಹಲವು ಗ್ರಾಮಗಳಲ್ಲಿ 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮುರಿದು ಬಿದ್ದು ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ.

ನೆಲಕಚ್ಚಿದ ತೆಂಗು, ಅಡಕೆ, ಬಾಳೆ: ಕಟ್ಟೆಮಳಲವಾಡಿಯಲ್ಲಿ 100 ಹೆಚ್ಚು ಫಸಲು ಭರಿತ ತೆಂಗಿನ ಮರಗಳು, 20 ಅಡಕೆ ಮರ, 100ಕ್ಕೂ ಹೆಚ್ಚು ತೇಗದ ಮರಗಳು ಬಿರುಗಾಳಿಗೆ ಸಿಲುಕಿ ಧರೆಗುರುಳಿದ್ದರೆ, ಹನಗೋಡಿನ ಹಿರಣ್ಣಶೆಟ್ಟರ 4 ಎಕರೆ ಭತ್ತದ ಗದ್ದೆ, ಹೆಬ್ಟಾಳದ ಪ್ರವಾಹದ ನೀರಿನಲ್ಲಿ ಮುಳುಗಿದೆ. ಅಲ್ಲದೇ ಈ ಭಾಗದ ಎಲ್ಲಾ ಹೊಲ, ಗದ್ದೆಗಳಲ್ಲಿ ನೀರು ತುಂಬಿದ್ದು, ಬೆಳೆಗಳು ಶೀತ ಹಿಡಿದು ಕೊಳೆಯುವ ಭೀತಿ ಎದುರಾಗಿದೆ. ದೊಡ್ಡೇಗೌಡನಕೊಪ್ಪಲು, ಮಂಟಿಕೊಪ್ಪಲು, ಹೊನ್ನಿಕುಪ್ಪೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಮುಸುಕಿನ ಜೋಳ ಮತ್ತಿತರ ಬೆಳೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

Advertisement

ಸಂಚಾರ ಬಂದ್‌: ಹನಗೋಡು ರಸ್ತೆಯ ಹಲವೆಡೆ, ನಗರದ ಅರಣ್ಯ ಇಲಾಖೆ ಕಚೇರಿ ಎದುರು ನಾಲ್ಕು ಬೃಹತ್‌ ಮರಗಳು, ಹಾಳಗೆರೆ ಜಂಕ್ಷನ್‌ ಬಳಿ ಹೆದ್ದಾರಿಗೆ ದೊಡ್ಡ ಮರ ಬಿದ್ದಿತ್ತು. ಕೆ.ಆರ್‌.ನಗರ ರಸ್ತೆ, ನಾಗನಹಳ್ಳಿ, ತಿಪ್ಪಲಾಪುರ ರಸ್ತೆಯಲ್ಲೂ ಹತ್ತಾರು ಮರಗಳು ಉರುಳಿ ಬಿದ್ದು ಸಂಚಾರ ಬಂದಾಗಿತ್ತು. ಇದರಿಂದಾಗಿ ಹುಣಸೂರು-ಕೆ.ಆರ್‌.ನಗರಕ್ಕೆ ಬಳಸುದಾರಿಯಲ್ಲಿ ವಾಹನಗಳು ಸಂಚರಿಸಿದವು. ಇನ್ನು ಮಡಿಕೇರಿ ಹೆದ್ದಾರಿಯ ಹಾಳಗೆರೆ ಬಳಿ ಲಾರಿ ಮೇಲೆ ಮರ ಬಿದ್ದಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಾತ್ರಿಯೇ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಎಲ್ಲೆಲ್ಲಿ ಎಷ್ಟು ಮನೆಗಳು ಹಾನಿ?: ತಾಲೂಕಿನ ಗಾವಡಗೆರೆ ಹೋಬಳಿಯ ಕಟ್ಟೆಮಳಲವಾಡಿಯೊಂದರಲ್ಲೇ 30 ಮನೆಗಳಿಗೆ ಹಾನಿಯಾಗಿದೆ. 4 ಮನೆಗಳ ಮೇಲೆ ಮರಗಳು ಬಿದ್ದಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಅಡುಗೆ ಕೋಣೆ ಹಾಗೂ ಎರಡು ಕೊಠಡಿಗಳ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದು ಹಾನಿಯಾಗಿದ್ದರೆ, ಬಿರುಗಾಳಿಗೆ ಹೆಂಚುಗಳಿಗೆ ಹಾರಿ ಹೋಗಿವೆ.

ಬಿಳಿಕೆರೆಯಲ್ಲಿ 2 ಮನೆ, ಕಸಬಾ ಹೋಬಳಿಯ ಎಮ್ಮೆಕೊಪ್ಪಲಿನಲ್ಲಿ ನಾಲ್ಕು ಮನೆ, ಮಂಟಿಕೊಪ್ಪಲಿನಲ್ಲಿ 2 ಮನೆ, ಸೋಮನಹಳ್ಳಿಯಲ್ಲಿ 2 ಮನೆಗಳಿಗೆ ಹಾನಿಯಾಗಿದೆ, ಹನಗೋಡು ಹೋಬಳಿಯ ದೇವರಾಜ ಕಾಲೋನಿ ಸೇರಿದಂತೆ ಹಲವೆಡೆ ತಂಬಾಕು ಹದ ಮಾಡುವ ಬ್ಯಾರನ್‌ಗಳ ಗೋಡೆಗಳು ಕುಸಿದು ಬಿದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next