ಪುಂಜಾಲಕಟ್ಟೆ: ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು ನದಿ ಬದಿಯ ಸ್ಥಳಗಳಲ್ಲಿ ನೀರು ಒಳ ನುಗ್ಗಿತು. ಅಜಿಲಮೊಗರು, ಸರಪಾಡಿ, ಪೆರ್ಲ, ಬೀಯಪಾದೆ ಮೊದಲಾದ ಕಡೆಗಳಲ್ಲಿ ನೀರು ರಸ್ತೆಗೆ ನುಗ್ಗಿ ಜಲಾವೃತಗೊಂಡು ಸಂಚಾರಕ್ಕೆ ಅಡಚಣೆಯಾಗಿತ್ತು. ಅಜಿಲಮೊಗರು ಮಸೀದಿಯ ಸುತ್ತಮುತ್ತ ನೀರು ತುಂಬಿ ದ್ವೀಪದಂತಾಗಿತ್ತು.
ಸರಪಾಡಿ ಗ್ರಾಮದ ಪೂಪಾಡಿಕಟ್ಟೆ, ಪೆರ್ಲ, ಬೀಯಪಾದೆ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ತೊಡಕುಂಟಾಗಿ ಸಂಪರ್ಕ ಕಡಿದಿತ್ತು. ಈ ಭಾಗದ ಹಲವು ಕಡೆ ತೋಟಗಳಿಗೆ ನೀರು ನುಗ್ಗಿ ಕೃಷಿಗೆ ಹಾನಿಯಾಗಿದೆ. ಎಎಂಆರ್ ಅಣೆಕಟ್ಟಿನಿಂದಾಗಿ ನೀರು ನಿಲುಗಡೆಗೊಂಡು ಈ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.