Advertisement

ಪರಿಹಾರಕ್ಕೆ ಅಹೋರಾತ್ರಿ ಧರಣಿ

06:00 AM Jun 19, 2020 | Suhan S |

ಬೆಳಗಾವಿ: ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ-ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಹಾಗೂ ಪ್ರವಾಹ ಪೀಡಿತರ ಹಿತರಕ್ಷಣಾ ಸಮಿತಿ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

Advertisement

ರಾಮದುರ್ಗ, ಚನ್ನಮ್ಮನ ಕಿತ್ತೂರು, ಬೆ„ಲಹೊಂಗಲ ತಾಲೂಕು ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರವಾಹದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ನೋವಿಗೆ ಯಾರೂ ಸ್ಪಂದಿಸುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಭರವಸೆ ನೀಡುತ್ತಿವೆ. ಇನ್ನೂ ಯಾವುದೇ ಪರಿಹಾರ ಸಂತ್ರಸ್ತರ ಕೈ ಸೆ„ರಿಲ್ಲ. ಒಂದು ವರ್ಷ ಕಳೆದರೂ ಪರಿಹಾರ ಸಿಗದೇ ಪರದಾಡುವಂತಾಗಿದೆ ಎಂದು ದೂರಿದರು.

ಪ್ರವಾಹ ಪೀಡಿತ ಅನೇಕ ಸಂತ್ರಸ್ತರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಕುರಿತು ಅನೇಕ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂತ್ರಸ್ತರಿಗೆ ಪರಿಹಾರ ವಿತರಿಸಬೇಕು. ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಅವರು ಪ್ರತಿಭಟನಾ ನಿರತರ ಅಹವಾಲು ಆಲಿಸಿದರು. ಈ ವೇಳೆ ಅರ್ಹರಿಗೆ ಸರಕಾರದಿಂದ ಸಿಗಬೇಕಾದ ಪರಿಹಾರ ಇನ್ನೂ ಸಂತ್ರಸ್ತರಿಗೆ ಸಿಕ್ಕಿಲ್ಲ. ಹೀಗಾಗಿ ಪರಿಹಾರ ನೀಡುವಂತೆ ಸಂತ್ರಸ್ತರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು, ಈಗಾಗಲೇ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತಿದೆ. ಕೆಲವರಿಗೆ ದಾಖಲೆ ಮತ್ತಿತರ ಕಾರಣದಿಂದ ಪರಿಹಾರ ಸಿಕ್ಕಿಲ್ಲ. ಜತೆಗೆ ಪಟ್ಟಿಯಿಂದ ಸಂತ್ರಸ್ತರನ್ನು ಕೈಬಿಟ್ಟಿರುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡುತ್ತೇನೆ. ಪ್ರತಿ ತಾಲೂಕು ಮಟ್ಟದ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು. ಸದ್ಯ ಪ್ರತಿಭಟನೆ ಹಿಂಪಡೆಯುವಂತೆ ಹೇಳಿದರು.

Advertisement

ಆದರೆ ಪ್ರತಿಭಟನಾಕಾರರು ಪರಿಹಾರ ಒದಗಿಸುವವರಿಗೆ ಪ್ರತಿಭಟನೆ ವಾಪಸ್ಸು ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ರೈತ ಮುಖಂಡರಾದ ಭೀಮಶಿ ಗದಾಡಿ, ಶಂಕರ ಮದ್ದಿಹಳ್ಳಿ, ಮಲ್ಲಿಕಾರ್ಜುನ ರಾಮದುರ್ಗ, ರಾಜು ಮರವೆ, ಕುಮಾರ ತಿಗಡಿ, ಮಾಲತೇಶ ಪೂಜಾರಿ, ರವಿ ಸಿದ್ದಣ್ಣಮ್ಮನ್ನವರ ಇತರರು ಇದ್ದರು.

ನೊಂದ ಮಹಿಳೆ ಕಣ್ಣೀರು ಪ್ರವಾಹ :  ಕಳೆದ ಪ್ರವಾಹದಲ್ಲಿ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮಹಿಳೆಯೋರ್ವಳು ಪ್ರತಿಭಟನಾ ಸ್ಥಳದಲ್ಲಿ ಕಣ್ಣೀರು ಸುರಿಸಿದರು. ಮನೆ ಬಿದ್ದಾಗಿನಿಂದ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿರುವ ಮಹಿಳೆಗೆ ಮನೆ ನಡೆಸುವುದು ಕಷ್ಟಕರವಾಗಿದೆ. ಅಡುಗೆ ಕೆಲಸಕ್ಕೆ ಹೋಗುವ ಮಹಿಳೆಗೆ ತಿಂಗಳಿಗೆ ಬರುವ ಸಂಬಳ ಸಾಲುತ್ತಿಲ್ಲ. ಇಷ್ಟು ಸಣ್ಣ ಸಂಬಳದಲ್ಲಿ ಮನೆ ನಡೆಸುವುದಾದರೂ ಹೇಗೆ ಎಂದು ಕಣ್ಣಿರು ಹಾಕಿದರು. ಪರಿಹಾರಕ್ಕಾಗಿ ಅನೇಕ ಅಧಿಕಾರಿ ಬಳಿ ಅಂಗಲಾಚಿದರೂ ಕೇವಲ ಭರವಸೆ ನೀಡಿ ಕಳುಹಿಸುತ್ತಿದ್ದಾರೆ. ಪರಿಹಾರ ಕೊಡದಿದ್ದರೆ ವಿಷ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next