Advertisement

ಕಪಿಲೆಗೆ ಪ್ರವಾಹ; ನಂಜನಗೂಡು ಶ್ರೀಕಂಠೇಶ್ವರನ ಸ್ನಾನಘಟ್ಟ ಮುಳುಗಡೆ

01:32 AM Aug 09, 2019 | Sriram |

ರಾಜ್ಯದ ಜೀವನಾಡಿಗಳಲ್ಲೊಂದಾದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗಿದ್ದು, ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಳೆದ 3 ದಿನದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಲಾಶಯದ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಯಾಗಿದೆ. ಇದಕ್ಕೂ ಮೊದಲು 2006ರಲ್ಲಿ ಜಲಾಶಯದಿಂದ 87 ಸಾವಿರ ಕ್ಯೂಸೆಕ್‌ ನೀರನ್ನು ಹರಿಸಲಾಗಿತ್ತು. ಅದು ಈವರೆಗಿನ ದಾಖಲೆಯಾಗಿತ್ತು. ಜಲಾಶಯದ ಮುಂಭಾಗದಲ್ಲಿರುವ ಮುಳುಗು ಸೇತುವೆ ಮುಚ್ಚಿ ಹೋಗಿದ್ದು, ಬಂಡೀಪುರ ಅರಣ್ಯದಂಚಿನ 20ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ 87 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಜಿಲ್ಲೆಯ ಪಿರಿಯಾಪಟ್ಟಣ,ಹುಣಸೂರು ಹಾಗೂ ಎಚ್‌.ಡಿ.ಕೋಟೆ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

Advertisement

ಜಿಲ್ಲೆಯ ತಾರಕ ಜಲಾಶಯ ಭರ್ತಿಯಾಗಿದ್ದು, ಡ್ಯಾಂಗೆಹರಿದು ಬರುತ್ತಿರುವ 13 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನದಿ ಪಾತ್ರದ ಎಚ್‌
.ಡಿ.ಕೋಟೆ, ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕಪಿಲೆಯಲ್ಲಿ ಪ್ರವಾಹ ಉಂಟಾಗಿದ್ದು, ನಂಜನಗೂಡಿನ
ಶ್ರೀಕಂಠೇಶ್ವರನ ಸ್ನಾನಘಟ್ಟ 16 ಕಾಲು ಮಂಟಪ, ಪರಶುರಾಮ ದೇವಾಲಯ, ಹಳ್ಳದಕೇರಿ, ಮಲ್ಲನ ಮೂಲೇ ಮಠಗಳು ಜಲಾವೃತವಾಗಿವೆ. ಶ್ರೀಕಂಠೇಶ್ವರನ ದೇವಾಲಯದ ಗಿರಿಜಾಕಲ್ಯಾಣಮಂದಿರ ಹಾಗೂ ಬೊಕ್ಕಳ್ಳಿಯಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ. ನಂಜನಗೂಡು-ಮೈಸೂರು ಮಧ್ಯದ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿದ್ದು, ಸಂಚಾರ ವ್ಯತ್ಯಯವಾಗಿದೆ.

ಕೆಆರ್‌ಎಸ್‌ ನೀರು
93.50 ಅಡಿಗೆ ಏರಿಕೆ:
ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದಲ್ಲದೆ, ಹಾರಂಗಿ ಹಾಗೂ ಗೊರೂರು
ಅಣೆಕಟ್ಟೆಯಿಂದಲೂ ನದಿಗೆ ನೀರು ಬಿಡುಗಡೆ ಮಾಡಿರುವುದರಿಂದ ಜಲಾಶಯಕ್ಕೆ ಕಳೆದ 4 ದಿನದಲ್ಲಿ 10 ಅಡಿಗಳಷ್ಟು ನೀರು ಹರಿದು ಬಂದಿದೆ. ಗುರುವಾರ ಸಂಜೆ ವೇಳೆಗೆ ಕೆಆರ್‌ ಎಸ್‌ನ ನೀರಿನ ಮಟ್ಟ 93.20 ಅಡಿ ದಾಖಲಾಗಿತ್ತು. ಒಳಹರಿವಿನ ಪ್ರಮಾಣ 37,375 ಕ್ಯುಸೆಕ್‌ಗೆ ಏರಿಕೆಯಾಗಿದ್ದು,ಅಣೆಕಟ್ಟೆಯಿಂದ 421 ಕ್ಯುಸೆಕ್‌ ನೀರನ್ನು ಮಾತ್ರ ಹೊರಬಿಡಲಾಗುತ್ತಿದೆ. ಹಾಸನದ ಹಾರಂಗಿ ಗೊರೂರು ಜಲಾಶಯಗಳೂ ಭರ್ತಿಯಾಗಿದ್ದು, ಹಾರಂಗಿಯಿಂದ 10 ಸಾವಿರ ಕ್ಯುಸೆಕ್‌ ಹಾಗೂ ಹೇಮಾವತಿಯಿಂದ 20 ರಿಂದ 30 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಅಲ್ಲದೆ, ಜಾನುವಾರುಗಳನ್ನು
ನೀರಿಗೆ ಇಳಿಸದಂತೆ ಎಚ್ಚರಿಕೆ ನೀಡಲಾಗಿದೆ.

ಸಕಲೇಶಪುರದ ಬಹುತೇಕ ಬಡಾವಣೆಗಳು ಜಲಾವೃತ
ಹಾಸನ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಹಾಸನ ತಾಲೂಕು ಶಂಖದ ಹೊಸಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಕೋಮಲಾ ಎಂಬುವರು ಗಾಯಗೊಂಡಿದ್ದಾರೆ. ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಕಲೇಶಪುರ ಪಟ್ಟಣದ ತಗ್ಗು ಪ್ರದೇಶದಲ್ಲಿರುವ ಬಹುತೇಕ ಬಡಾವಣೆಗಳು ಜಲಾವೃತಗೊಂಡಿವೆ.

ಇದರಿಂದಾಗಿ ಪಟ್ಟಣ ನೀರಿನಲ್ಲಿ ಮುಳುಗಿದಂತೆ ಕಾಣುತ್ತಿದೆ. ಮನೆಗಳಿಗೆ ನುಗ್ಗಿದ ನೀರಿನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ರಾಪ್ಟಿಂಗ್‌ ಬೋಟ್‌ ಮೂಲಕ 20ಕ್ಕೂ ಹೆಚ್ಚು ಕುಟುಂಬಗಳಜನರನ್ನು ರಕ್ಷಿಸಿ ಸ್ಥಳಾಂತರಿಸಿದ್ದಾರೆ. ಹೇಮಾವತಿ ನದಿಗೆ ಹೊಂದಿಕೊಂಡಂತೆ ಇರುವ ಹೊಳೆ ಮಲ್ಲೇಶ್ವರ ದೇವಾಲಯ ನೀರಿನಲ್ಲಿ ಮುಳುಗಿದೆ. ಮಾರನಹಳ್ಳಿ ಕಾಡುಮನೆ ರಸ್ತೆ, ವಳಲಹಳ್ಳಿ ಹಿರಿದನಹಳ್ಳಿ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು ಸಂಪರ್ಕ ಕಡಿತಗೊಂಡಿದೆ. ವಾಟೇಹೊಳೆ ಜಲಾಶಯ ಭರ್ತಿಯಾಗಿದ್ದು, ಮೂರು ಕ್ರಸ್ಟ್‌ಗೇಟ್‌ಗಳ
ಮೂಲಕ ನೀರು ಬಿಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next