Advertisement
ಬುಧವಾರ ಸಂಜೆ ಹೊತ್ತಿಗೆ 7 ಮೀ.ಗೆ ಇಳಿದಿದ್ದ ನೆರೆ ನೀರು ಗುರುವಾರ ಬೆಳಗ್ಗೆ ಏರಿಕೆ ಕಂಡಿತು. ಜಕ್ರಿಬೆಟ್ಟು ರಾಯರಚಾವಡಿ, ಬಂಟ್ವಾಳ ಬಸ್ತಿಪಡ್ಪು, ಬಂಟ್ವಾಳ ಬಡ್ಡಕಟ್ಟೆ, ಕಂಚುಗಾರ ಪೇಟೆ, ಪಾಣೆ ಮಂಗಳೂರು ಆಲಡ್ಕ, ನಂದಾವರ ಸೇತುವೆ, ಪಾಣೆಮಂಗಳೂರು ಅಕ್ಕರಂ ಗಡಿ, ಜೈನರಪೇಟೆ, ಗೂಡಿನಬಳಿ, ಪಾಣೆಮಂಗಳೂರು ಸುಣ್ಣದಗೂಡು ಪ್ರದೇಶಗಳು ಜಲಾವೃತ ಆಗಿವೆ.
ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದ ಸುತ್ತು ವಠಾರಕ್ಕೆ ನೀರು ಬಂದಿದೆ. ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದೇವಸ್ಥಾನದ ಹೊರಾಂಗಣ ರಸ್ತೆಯ ಮಟ್ಟಕ್ಕೆ ನೀರು ಏರಿಕೆಯಾಗಿದೆ. ಬಂಟ್ವಾಳದ ಅಗ್ನಿ ಶಾಮದ ಠಾಣೆ ನೀರಿನಿಂದ ಆವೃತ್ತವಾಗಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ದೋಣಿ ಬಳಸಿ ಅಲಡ್ಕದಲ್ಲಿ ಮನೆಯೊಳಗೆ ಇದ್ದವರನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಲಾಗಿದೆ. ಡಿಸಿ ಶಶಿಕಾಂತ್ ಸೆಂಥಿಲ್ ಮತ್ತು ಹಿರಿಯ ಅಧಿಕಾರಿಗಳು ಮುಳುಗಡೆ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಶಾಲೆಗಳಿಗೆ ರಜೆ
ಭಾರೀ ಮಳೆ ಮತ್ತು ನೆರೆ ಸಾಧ್ಯತೆಯ ಮಾಹಿತಿ ಗುರುವಾರ ಬೆಳಗ್ಗೆ ಲಭ್ಯ ಆಗುತ್ತಿದ್ದಂತೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ಅವರು ಪ್ರಾಥಮಿಕ, ಪ್ರೌಢ, ಅಂಗನವಾಡಿ ಶಾಲೆಗಳಿಗೆ ರಜೆಯನ್ನು ಘೋಷಿಸಿ ತುರ್ತು ಆದೇಶ ರವಾನಿಸಿದರು.
Related Articles
ಡ್ಯಾಂ ನೀರು ಹೊರಕ್ಕೆ
ಶಂಭೂರು ಎಎಂಆರ್ ಡ್ಯಾಂನಲ್ಲಿ ಗುರುವಾರ ಬೆಳಗ್ಗಿನಿಂದ ಪ್ರತೀ 3 ಗಂಟೆಗಳಿಗೆ ಒಮ್ಮೆ ಸೈರನ್ ಮೊಳಗಿಸಿ ಮುನ್ನೆಚ್ಚರಿಕೆ ನೀಡಲಾಯಿತು. ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಕ್ರಸ್ಟ್ ಗೇಟ್‌ಗಳನ್ನು ತೆರೆದು ನೀರು ಹೊರಕ್ಕೆ ಹರಿಸಲಾಗುತ್ತಿದೆ. ಇಲ್ಲಿ ಗರಿಷ್ಠ ನೀರಿನ ಮಟ್ಟ 18.9 ಮೀಟರಾಗಿದ್ದು, ನೀರಿನ ಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ ಎಲ್ಲ ಗೇಟ್‌ಗಳನ್ನು ತೆರೆದಿರುವುದಾಗಿ ಮೂಲಗಳು ಹೇಳಿವೆ. ತುಂಬೆ ಡ್ಯಾಂನಲ್ಲಿಯೂ ಎಲ್ಲ ಗೇಟ್ ಗಳನ್ನು ಗರಿಷ್ಠ ಮಟ್ಟಕ್ಕೆ ಏರಿಸುವ ಮೂಲಕ ನೀರು ಸರಾಗ ಹರಿಯುವಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮನಪಾ ಮೂಲಗಳು ತಿಳಿಸಿವೆ.
Advertisement