Advertisement

ಇಂದಿರಾ ಗಾಜಿನಮನೆ ಆವರಣದಲ್ಲಿ ನೆರೆ ಛಾಯೆ

11:36 AM Oct 20, 2019 | Suhan S |

ಹುಬ್ಬಳ್ಳಿ: ಒಂದು ಉತ್ತಮ ಛಾಯಾಚಿತ್ರಕ್ಕೆ ಸಮರ್ಪಕವಾದ ಸಂದೇಶ ನೀಡುವ ತಲೆಬರಹ ಕೊಟ್ಟರೆ ಸಾಕು, ಅದು ನಾಲ್ಕೈದು ಪುಟಗಳಷ್ಟು ವಿವರ ಹೇಳುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಹುಬ್ಬಳ್ಳಿಯ ಪತ್ರಿಕಾ ಛಾಯಾಗ್ರಾಹಕರು ಇಲ್ಲಿನ ಮಹಾತ್ಮಾ ಗಾಂಧಿ ಉದ್ಯಾನವನದ ಇಂದಿರಾ ಗಾಜಿನಮನೆ ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ 9 ಜಿಲ್ಲೆಗಳ ಪತ್ರಿಕಾ ಛಾಯಾಗ್ರಾಹಕರ “ನೆರೆ ಛಾಯೆ’ ಛಾಯಾಚಿತ್ರ ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಛಾಯಾಚಿತ್ರ ಜೊತೆ ಅದಕ್ಕೆ ಸೂಕ್ತ ಸಂದೇಶ ಮುಖ್ಯ. ಅಂತಹ ಉತ್ತಮ ಸಂದೇಶ ನೀಡುವ ಕಲೆಯನ್ನು ವರದಿಗಾರರು ರೂಢಿಸಿಕೊಳ್ಳಬೇಕು. ಛಾಯಾಗ್ರಾಹಕರು ಪ್ರದರ್ಶಿಸಿದ ಚಿತ್ರಗಳು ಪ್ರವಾಹದ ಭೀಕರತೆ ತೋರಿಸುತ್ತವೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಛಾಯಾಗ್ರಾಹಕರು ತಮ್ಮ ಜೀವದ ಹಂಗು ತೊರೆದು, ಶ್ರಮಪಟ್ಟು ಚಿತ್ರಗಳನ್ನು ಸೆರೆ ಹಿಡಿದಿರುತ್ತಾರೆ. ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. ಅವರು ಕಷ್ಟಕ್ಕೊಳಗಾದವರ ಭಾವನೆಗೆ ಸ್ಪಂದಿಸಿ ಚಿತ್ರ ತೆಗೆದಿರುತ್ತಾರೆ. ಸಂಘದವರು ಉತ್ತಮ ಛಾಯಾಚಿತ್ರಗಳನ್ನು ಸಂಗ್ರಹಿಸಿ ಪ್ರತಿವರ್ಷ ಅವುಗಳ ಪ್ರದರ್ಶನ ಮಾಡಬೇಕು. ಆ ಮೂಲಕ ಹೊಸ ಛಾಯಾಗ್ರಾಹಕರಿಗೆ ಪ್ರೋತ್ಸಾಹ, ಬೆಂಬಲ ನೀಡಬೇಕು. ಛಾಯಾಗ್ರಹಣ ಕಲೆಯು ಸಹ ಗೌರವಾನ್ವಿತವಾದದ್ದು ಎಂಬುದನ್ನು ಬಿಂಬಿಸಬೇಕು ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಛಾಯಾಚಿತ್ರವು ಒಂದು ತಪಸ್ಸಾಗಿದ್ದು, ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದಾಗ ಮಾತ್ರ ಅದರಲ್ಲಿ ಯಶ ಕಾಣಲು ಸಾಧ್ಯ. ಮಾನವನ ವಿಕಾಸ, ಜೀವನದ ಅಂಗವಾಗಿದೆ. ಒಂದು ಛಾಯಾಚಿತ್ರವು ಅದರ ಹಿನ್ನೆಲೆ, ಇತಿಹಾಸ ತಿಳಿಸುತ್ತದೆ. ಇಲ್ಲಿ ಪ್ರದರ್ಶನಗೊಂಡಿರುವ ಛಾಯಾಚಿತ್ರಗಳನ್ನು ವೀಕ್ಷಿಸಿದಾಗ ಅತಿವೃಷ್ಟಿ, ನೆರೆ ಹಾವಳಿ ಕಣ್ಣೆದುರು ಮರುಕಳಿಸುತ್ತದೆ. ಛಾಯಾಚಿತ್ರಗಳಲ್ಲಿ ಅಂತಹ ಅದ್ಭುತ ಶಕ್ತಿ ಇದೆ ಎಂದು ಹೇಳಿದರು.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮೊದಲಾದವರಿದ್ದರು. ಹಿರಿಯ ಛಾಯಾಗ್ರಾಹಕ ಕಿರಣ ಬಾಕಳೆ ಸ್ವಾಗತಿಸಿದರು. ಗೌರಿ ನಿರೂಪಿಸಿದರು. ಛಾಯಾಚಿತ್ರ ಪ್ರದರ್ಶನದಲ್ಲಿ 9 ಜಿಲ್ಲೆಗಳ 40 ಛಾಯಾಗ್ರಾಹಕರ 170ಕ್ಕೂ ಅಧಿಕ ಚಿತ್ರಗಳು ಪ್ರದರ್ಶನಗೊಂಡಿವೆ. ಇವೆಲ್ಲವು ನೆರೆ ಹಾವಳಿಯಿಂದ ಹಾನಿಗೊಳಗಾದ ಪ್ರದೇಶಗಳು ಹಾಗೂ ಸಂತ್ರಸ್ತರಾದವರ ಬದುಕು, ಜೀವನ ತೆರೆದಿಡುತ್ತಿವೆ. ರವಿವಾರ ರಾತ್ರಿ 8 ಗಂಟೆ ವರೆಗೆ ಛಾಯಾಚಿತ್ರ ಪ್ರದರ್ಶನ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next