Advertisement

ಮತ್ತೆ ಪ್ರವಾಹ ಭೀತಿ: ಹೆಚ್ಚಿದ ಆತಂಕ

03:30 PM Jul 18, 2022 | Team Udayavani |

ಜಮಖಂಡಿ: ನೆರೆ ಮಹಾರಾಷ್ಟ್ರ ಮತ್ತು ಕೃಷ್ಣಾ ಜಲಾನಯನದ ಎಡ-ಬಲದಂಡೆ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹ ಭೀತಿಯ ಆತಂಕ ಶುರುವಾಗಿದೆ.

Advertisement

ಕಳೆದ ಮೂರು ವರ್ಷಗಳಿಂದ ಕೃಷ್ಣಾನದಿ ಪ್ರವಾಹ ಭೀತಿಗೆ ಇಲ್ಲಿಯ ಜನರು ನಲುಗಿ ಹೋಗಿದ್ದು, ಪ್ರತಿವರ್ಷ ಸಾವಿರಾರು ರೈತರು ಬೆಳೆ, ಜಾನುವಾರು ಕಳೆದುಕೊಂಡು ಆರ್ಥಿಕ ವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರತಿ ವರ್ಷವೂ ಜು.25ರಿಂದ ಆ.25ರವರೆಗೆ ಪ್ರವಾಹ ಭೀತಿ ತಪ್ಪಿದ್ದಲ್ಲ. ಗ್ರಾಮೀಣ ಭಾಗದ ಜನರು ತಾವು ನೆಲೆಸಿರುವ ಜಾಗವನ್ನು ತೊರೆದು ಕನಿಷ್ಠ ಎರಡು ತಿಂಗಳ ಕಾಲ ಸರಕಾರದ ನಿಗದಿಪಡಿಸುವ ಕಾಳಜಿ ಕೇಂದ್ರ ಅಥವಾ ಸಂಬಂಧಿಕರ ಮನೆಗಳಲ್ಲಿ ಸಂಸಾರ ನೌಕೆ ಸಾಗಿಸುವ ಪರಿಸ್ಥಿತಿ ಪ್ರತಿ ವರ್ಷವೂ ಇದ್ದದ್ದೇ.

ಕೃಷ್ಣಾನದಿಗೆ 1.35 ಲಕ್ಷ ಕ್ಯೂಸೆಕ್‌ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಅಂದಾಜು 3ಲಕ್ಷ ಕ್ಯೂಸೆಕ್‌ ನೀರು ಹರಿದು ಬಂದರೆ ಮತ್ತೇ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆಯಿದೆ. ಗ್ರಾಮೀಣ ಭಾಗದ ಜನ-ಜಾನುವಾರುಗಳಿಗೆ ಸಂಕಷ್ಟ ಎದುರಾಗಲಿದೆ.

ಜುಲೈ ತಿಂಗಳಲ್ಲಿ ಕೃಷ್ಣಾನದಿಗೆ ಪ್ರವಾಹ ಎದುರಾದರೆ ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮ ಮೊಟ್ಟಮೊದಲ ಮುಳು ಗಡೆ ಗ್ರಾಮವಾಗಲಿದೆ. ಕಂಕಣವಾಡಿ, ಮೈಗೂರ, ಶಿರಗುಪ್ಪಿ, ಕಡಕೋಳ, ಕುಂಬಾರಹಳ್ಳ, ಆಲಗೂರ, ಚಿಕ್ಕಪಡಸಲಗಿ, ಹಿರೇಪಡಸಲಗಿ, ಬಿದರಿ ಸಹಿತ ತಾಲೂಕಿನ 23 ಗ್ರಾಮಗಳು ಮುಳುಗಡೆ ಭೀತಿ ಎದುರಿಸಲಿವೆ. ತಾಲೂಕಾಡಳಿತ ಪ್ರವಾಹ ಭೀತಿ ಅರಿತು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡಲ್ಲಿ ಮಾತ್ರ ಜನ-ಜಾನುವಾರುಗಳ ರಕ್ಷಣೆ ಆಗಲಿದೆ.

ಹಿಪ್ಪರಗಿ ಜಲಾಶಯದಲ್ಲಿ 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. 524.87 ಮೀಟರ್‌ ನೀರು ಸಂಗ್ರಹಿಸುವ ಜಲಾಯಶದಲ್ಲಿ ಈಗಾಗಲೇ 522.45 ಮೀ. ನೀರು ಸಂಗ್ರಹ ಆಗಿದೆ. ಹಿಪ್ಪರಗಿ ಜಲಾಶಯಕ್ಕೆ ಕೃಷ್ಣಾನದಿಯ ಒಳಹರಿವು 1.27 ಲಕ್ಷ ಕ್ಯೂಸೆಕ್‌ ಇದ್ದರೆ 1.26 ಲಕ್ಷ ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. 1989ರಲ್ಲಿ ರೈತರ ಬ್ಯಾರೇಜ್‌ ಪ್ರಸಿದ್ಧಿ ಪಡೆದ ದಿ.ಸಿದ್ದು ನ್ಯಾಮಗೌಡ ಶ್ರಮ ಬಿಂದು ಸಾಗರ ಬ್ಯಾರೇಜ್‌ ಕೂಡ ಮುಳುಗಡೆಯಾಗಲಿದೆ. ಅಂದಾಜು 3 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಹರಿದು ಬಂದಲ್ಲಿ ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಬರುವ ಚಿಕ್ಕಪಸಲಡಗಿ ಸೇತುವೆ ಕೂಡ ಜಲಾವೃತಗೊಂಡು ಸಂಚಾರ ಸ್ಥಗಿತಗೊಳ್ಳಲಿದೆ. ಈಗಾಗಲೇ ಎರಡು ಸೇತುವೆ ಜಲಾವೃತಗೊಂಡು ಶಿಥಿಲಗೊಂಡು ದುರಸ್ತಿ ಕೂಡ ಆಗಿದೆ.

Advertisement

ಅಂದಾಜು 123 ಟಿಎಂಸಿ ನೀರು ಸಂಗ್ರಹ ಹೊಂದಿರುವ ಆಲಮಟ್ಟಿ ಜಲಾಶಯದ ಕೃಷ್ಣಾನದಿಗೆ ಶೇ. 70.49 ಅಂದರೆ 86.74 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯಕ್ಕೆ ಒಳಹರಿವು 1.33 ಲಕ್ಷ ಕ್ಯೂಸೆಕ್‌ ಇದ್ದು, 1.48 ಲಕ್ಷ ಕ್ಯೂಸೆಕ್‌ ಪ್ರಮಾಣದಲ್ಲಿ ನೀರು ಹೊರಗೆ ಬಿಡಲಾಗುತ್ತಿದೆ. ಅಂದಾಜು 519.30 ಮೀ. ಎತ್ತರದ ಆಲಮಟ್ಟಿ ಜಲಾಶಯದಲ್ಲಿ ರವಿವಾರ 517.18 ಮೀ. ಸಂಗ್ರಹವಾಗಿದೆ. ನದಿಗೆ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಾಲೂಕಿನ ಜನತೆ ನದಿತೀರಕ್ಕೆ ಯಾರೂ ಹೋಗಬಾರದು. –ಸದಾಶಿವ ಮಕ್ಕೋಜಿ, ತಹಶೀಲ್ದಾರ್‌ರು ಜಮಖಂಡಿ

ಕೃಷ್ಣಾ ನದಿ ಪ್ರವಾಹದಿಂದ ತಾಲೂಕಿನ ಜನತೆ ಸಾಕಷ್ಟು ಪ್ರಮಾಣದ ಹಾನಿ ಅನುಭವಿಸುವ ಮೂಲಕ ಬಹಳಷ್ಟು ನೋವು, ತೊಂದರೆ ಸಹಿಸಿಕೊಂಡಿದ್ದಾರೆ. ಸಾವಿರಾರು ಕೋಟಿಗಳಷ್ಟು ಸಾರ್ವಜನಿಕರ ಆಸ್ತಿಗಳು, ರೈತರ ಬೆಳೆಗಳು, ಜಾನುವಾರುಗಳ ಪ್ರಾಣ ಹಾನಿ ಸಂಭವಿಸಿವೆ. ಸರಕಾರಿ ರಸ್ತೆಗಳು, ಸೇತುವೆಗಳು ಮತ್ತು ಸಂಘ-ಸಂಸ್ಥೆಗಳ, ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಮುಂಜಾಗ್ರತೆ ಕ್ರಮ ಅನುಸರಿಸುವ ಮೂಲಕ ಹೆಚ್ಚಿನ ಅನಾಹುತ ಆಗದಂತೆ ಎಚ್ಚರ ವಹಿಸಬೇಕು. ಕೃಷ್ಣಾನದಿ ತೀರದ ರೈತರು ತಾಲೂಕು ಆಡಳಿತ ನಿರ್ದೇಶನಗಳನ್ನು ಪಾಲಿಸುವ ಮೂಲಕ ಪ್ರವಾಹ ಎದುರಾದರೆ ಎಲ್ಲರೂ ಸಮರ್ಥವಾಗಿ ಎದುರಿಸೋಣ. –ಆನಂದ ನ್ಯಾಮಗೌಡ, ಶಾಸಕರು ಜಮಖಂಡಿ.

-ಮಲ್ಲೇಶ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next