ದೇವದುರ್ಗ: ನಾರಾಯಣಪುರ ಜಲಾಶಯದಿಂದ ಶುಕ್ರವಾರ ಕೃಷ್ಣಾ ನದಿಗೆ 2.35 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆ ಮತ್ತೆ ಪ್ರವಾಹ ಆತಂಕ ಆವರಿಸಿದೆ. ನದಿ ತೀರದ ಗ್ರಾಮಗಳಲ್ಲಿ ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ.
ಪದೇ-ಪದೇ ಪ್ರವಾಹ ನೆರೆ ಸಂತ್ರಸ್ತರ ಜೀವ ಹಿಂಡುತ್ತಿದೆ. ನದಿ ತೀರಕ್ಕೆ ಜನ-ಜಾನುವಾರುಗಳು ಹೋಗದಂತೆ ಗ್ರಾಪಂ ಮೂಲಕ ಡಂಗೂರ ಸಾರಲಾಗಿದೆ. ಗಡ್ಡೆಗೊಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳಗಿದೆ. ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಹೆಚ್ಚಿದೆ.
ಆಲಮಟ್ಟಿ ಜಲಾಶಯ ಭರ್ತಿಯಾಗುತ್ತಿದ್ದಂತೆ ಏಕಕಾಲದಲ್ಲಿ ನದಿಗೆ ನೀರು ಹರಿಸುವುದರಿಂದ ರಾತ್ರೋರಾತ್ರಿ ಪ್ರವಾಹ ಏರ್ಪಟ್ಟ ಸಾಕಷ್ಟು ನಿದರ್ಶಗಳಿವೆ. ಪ್ರವಾಹದಲ್ಲಿ ಕೈಗೊಳ್ಳಬಹುದಾದ ಎಲ್ಲ ಮುನ್ನೆಚ್ಚರಿಕೆ ತಾಲೂಕು ಆಡಳಿತ ಈ ಬಾರಿ ಕೈಗೊಂಡಿದೆ. ತಿಂಥಿಣಿ ಬ್ರಿಜ್‌ನಿಂದ ಗೂಗಲ್‌ವರೆಗೆ ಸುಮಾರ 56 ಕಿ.ಮೀ. ಕೃಷ್ಣಾ ನದಿ ತೀರದಲ್ಲಿರುವ ಸಾವಿರಾರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ.
ಬಿತ್ತನೆಗಾಗಿ ಲಕ್ಷಾಂತರ ರೂ. ವೆಚ್ಚ ಭರಿಸಿದ ನೂರಾರು ರೈತರು ಪ್ರವಾಹ ಆತಂಕ ಕಾಡಲಾರಂಭಿಸಿದೆ. ಹೂವಿನಹೆಡಗಿ, ಜೋಳದಹೆಡಗಿ, ಗಾಗಲ್, ಗೂಗಲ್ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಅತಿ ಹೆಚ್ಚು ಗದ್ದೆಯಲ್ಲಿ ಭತ್ತ ನಾಟಿ ಮಾಡಲಾಗಿದೆ. ಆದರೀಗ ಪ್ರವಾಹ ಆತಂಕ ಆವರಿಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ನದಿ ತೀರದಲ್ಲಿ ಬಿಡು ಬಿಟ್ಟಿದ್ದಾರೆ. ನದಿ ಹತ್ತಿರಕ್ಕೆ ಒಬ್ಬರೂ ಹೋಗದಂತೆ ಎಚ್ಚರಕೆ ವಹಿಸಲಾಗಿದೆ.
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.35 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆ ತಾಲೂಕಾಡಳಿತ ವತಿಯಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ನದಿ ತೀರಕ್ಕೆ ಜನ-ಜಾನುವಾರುಗಳು ಹೋಗದಂತೆ ಗ್ರಾಪಂ ಮೂಲಕ ಡಂಗೂರು ಸಾರಲಾಗಿದೆ.
-ಶ್ರೀನಿವಾಸ ಚಾಪಲ್, ತಹಶೀಲ್ದಾರ್