ಸಕಲೇಶಪುರ: ಅತಿವೃಷ್ಟಿ ಹಾನಿ ಪರಿಶೀಲನೆಗಾಗಿ ಬರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಭೇಟಿ ನೀಡುತ್ತಿದ್ದು, ತೀವ್ರ ಹಾನಿಗೊಳಗಾಗಿರುವ ಗ್ರಾಮಾಂತರ ಪ್ರದೇಶ ಗಳಲ್ಲಿ ವೀಕ್ಷಣೆಗೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.
ತಾಲೂಕಿನಲ್ಲಿ ಕಳೆದ ವಾರ ಸುರಿದ ಮಹಾಮಳೆಗೆ ವ್ಯಾಪಕ ಹಾನಿಯುಂಟಾಗಿದ್ದು ಪಟ್ಟಣ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಸಹ ಹೇಮಾವತಿ ನೀರು ಪ್ರವೇ ಶಿಸಿದ ಪರಿಣಾಮ ಹಲವು ಅಂಗಡಿಗಳು ಮನೆಗಳು ಜಲಾವೃತಗೊಂಡಿದ್ದವು. ಪಟ್ಟಣಕ್ಕೆ ಅತಿ ಸಮೀಪ ದಲ್ಲಿರುವ ಆನೆಮಹಲ್ ಗ್ರಾಮದಲ್ಲಿರು ಅಡ್ಡಾಣಿ ಗುಡ್ಡದಲ್ಲಿ ಸುಮಾರು 20 ಕುಟುಂಬಗಳು ವಾಸ ವಾಗಿದ್ದು ಇಲ್ಲಿ ಭೂಕುಸಿತದ ಭಯ ವ್ಯಾಪಿಸಿದ್ದರಿಂದ ಇಲ್ಲಿನ ಕುಟುಂಬಗಳನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ತಾಲೂಕಿನ ಹಾನು ಬಾಳ್, ಹೆತ್ತೂರು, ಕಸಬಾ, ಯಸಳೂರು ಹೋಬಳಿಗಳ ಹಲವು ಗ್ರಾಮಗಳಲ್ಲಿ ಭೂಕುಸಿತ ಉಂಟಾಗಿ ವ್ಯಾಪಕ ನಷ್ಟವುಂಟಾಗಿದೆ.
ಅಪಾರ ಪ್ರಮಾಣದ ಬೆಳೆ ಹಾನಿ: ಬಹುತೇಕ ಹೋಬಳಿಗಳಲ್ಲಿ ಭತ್ತದ ಗದ್ದೆಗಳು ಜಲಾವೃತಗೊಂಡಿ ರುವುದರಿಂದ ಅಪಾರ ನಷ್ಟ ಸಂಭವಿಸಿದೆ. ಕಾಫಿ, ಮೆಣಸು, ಏಲಕ್ಕಿ, ಬಾಳೆ ಸಂಪೂರ್ಣವಾಗಿ ನೆಲ ಕಚ್ಚಿದ್ದು, ರೈತನೊಬ್ಬ ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಡಾನೆಗಳ ಹಾವಳಿ ರೈತರನ್ನು ಮತ್ತಷ್ಟು ಆತಂಕಕಕ್ಕೆ ತಳ್ಳಿದೆ. ಹಲವಾರು ಸರ್ಕಾರಿ ಹಾಗೂ ಖಾಸಗಿ ಕೆರೆಗಳು ಒಡೆದು ಹೋಗಿದ್ದು ಹಲ ವಡೆ ರಸ್ತೆಗಳ ಸಂಪರ್ಕ ಇಲ್ಲದಂತಾಗಿದೆ. ನೂರಾರು ಕಿ.ಮೀ. ರಸ್ತೆಗಳು ಗುಂಡಿ ಬಿದ್ದಿದೆ. ನಡಹಳ್ಳಿ, ದೇಖ್ಲಾ ಸಮೀಪ ಭೂಕುಸಿತ ಉಂಟಾಗಿ ಎಕರೆಗಳಷ್ಟು ತೋಟ ಗದ್ದೆಗಳು ಮಾಯಾವಾಗಿದೆ. ಹಿರಿದನಹಳ್ಳಿ, ಕಾಡು ಮನೆ ಸಮೀಪ ರಸ್ತೆ ಮೇಲೆ ಭೂಕುಸಿತ ಉಂಟಾಗಿದೆ. ಶಿರಾಡಿ ಘಾಟ್ ರಸ್ತೆಯಲ್ಲಿ ಸಹ ಭೂಕುಸಿತ ಸಂಭವಿಸುತ್ತಿದೆ.
ರಸ್ತೆ, ರೈಲು ಮಾರ್ಗಕ್ಕೆ ಹಾನಿ: ಸಕಲೇಶಪುರ- ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಹಾಸನ ದಿಂದ ಮಾರನಹಳ್ಳಿಯವರೆಗಿನ ರಾಷ್ಟ್ರೀಯ ಹೆದ್ದಾರಿ 75 ಸಂಪೂರ್ಣವಾಗಿ ಗುಂಡಿ ಬಿದ್ದಿದೆ. ಆದರೆ ನೆರೆ ಹಾನಿ ವೀಕ್ಷಿಸಲು ಬರುವ ವಿವಿಧ ರಾಜಕೀಯ ಪಕ್ಷ ಗಳು ಮುಖಂಡರು ಕೇವಲ ಪಟ್ಟಣ ವ್ಯಾಪ್ತಿಯ ಆಜಾದ್ ರಸ್ತೆ ಹಾಗೂ ಆನೆಮಹಲ್ ನಿರಾಶ್ರಿತರ ಪುನರ್ವಸತಿ ಕೇಂದ್ರಗಳಿಗೆ ಮಾತ್ರ ಭೇಟಿ ನೀಡುತ್ತಿದ್ದು ಇದು ಗ್ರಾಮಾಂತರ ಪ್ರದೇಶಗಳ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಮೊದಲಿಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ತಾಲೂಕಿಗೆ ನೆರೆ ಹಾನಿ ವೀಕ್ಷಿಸಲು ಆಗಮಿಸಿದ್ದು ಇವರು ಜಲಾವೃತಗೊಂಡಿದ್ದ ಆಜಾದ್ ರಸ್ತೆಯನ್ನು ವೀಕ್ಷಿಸಿ ಹಿಂತಿರುಗಿದ್ದರು. ನಂತರ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಎಚ್.ಡಿ ರೇವಣ್ಣ ನೆರೆ ಹಾನಿ ವೀಕ್ಷಿಸಲು ತಾಲೂಕಿಗೆ ಆಗಮಿಸಿದ್ದು ಇವರೂ ಸಹ ಕೇವಲ ಆಜಾದ್ ರಸ್ತೆಯಲ್ಲಿ ಕೆಲ ಸಮಯ ನೆರೆ ವೀಕ್ಷಣೆ ಮಾಡಿ ತೆರಳಿದ್ದರು. ಇದಾದ ನಂತರ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇತೃತ್ವದ ಬಿಜೆಪಿ ತಂಡ ತಾಲೂಕಿಗೆ ಆಗಮಿಸಿದ್ದು ಈ ತಂಡ ಪಟ್ಟಣ ವ್ಯಾಪ್ತಿಯಲ್ಲಿ ಜಲಾವೃತಗೊಂಡ ಆಜಾದ್ ರಸ್ತೆಯನ್ನು ವೀಕ್ಷಿಸಿ ನಂತರ ಆನೆಮಹಲ್ ಗ್ರಾಮದಲ್ಲಿ ತೆರೆಯಲಾಗಿದ್ದ ತಾತ್ಕಾಲಿಕ ನಿರಾಶ್ರಿತರ ಪುರ್ನವಸತಿ ಕೇಂದ್ರಕ್ಕೆ ಭೇಟಿ ನೀಡಿ ನಂತರ ಬೇಲೂರು ಕಡೆಗೆ ತೆರಳಿತ್ತು. ಈ ನಡುವೆ ಕಾಂಗ್ರೆಸ್ ಮುಖಂಡರ ವಿಧಾನಸಭಾ ಸದಸ್ಯ ಗೋಪಾಲಸ್ವಾಮಿ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಆನೆಮಹಲ್ ತಾತ್ಕಾಲಿಕ ನಿರಾಶ್ರಿತರ ಪುರ್ನವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಮಾಜಿ ಸಚಿವ ಬಿ.ಶಿವರಾಂ ಆಜಾದ್ ರಸ್ತೆಯನ್ನು ವೀಕ್ಷಿಸಿ ಹಿಂತಿರುಗಿದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಾಲೂಕಿನ ಗಡಿ ಭಾಗವಾದ ಕೆರೋಡಿ ಸುತ್ತಮುತ್ತ ನೆರೆ ಹಾನಿ ವೀಕ್ಷಣೆ ಮಾಡುವ ಕಾರ್ಯಕ್ರಮವಿದ್ದರೂ ಅವರು ಕೊಡಗಿನಿಂದ ಆಗಮಿಸುವುದು ತಡವಾಗಿ ದ್ದರಿಂದ ಕೇವಲ ಕಾಟಾಚಾರಕ್ಕೆ ಕೆರೋಡಿಯಲ್ಲಿ ವೀಕ್ಷಣೆ ಮಾಡಿ ಆನೆಮಹಲ್ ತಾತ್ಕಾಲಿಕ ನಿರಾಶ್ರಿತರ ಪುರ್ನವಸತಿ ಕೇಂದ್ರಕ್ಕೆ ಭೇಟಿ ನೀಡಿ ನಂತರ ಆಜಾದ್ ರಸ್ತೆಗೆ ಭೇಟಿ ನೀಡಿದ್ದರು. ನಂತರ ಸಂಸದ ಪ್ರಜ್ವಲ್ ರೇವಣ್ಣ ಮತ್ತೂಮ್ಮೆ ತಾಲೂಕಿಗೆ ಭೇಟಿ ನೀಡಿದ್ದು ಇವರು ಮತ್ತೂಮ್ಮೆ ನೀರು ಸಂಪೂರ್ಣವಾಗಿ ಇಳಿದಿದ್ದ ಆಜಾದ್ ರಸ್ತೆಯನ್ನು ನೋಡಿ ಹಾನುಬಾಳ್ ಹೋಬಳಿಯ ಕೆಲವೆಡೆ ನೆರೆ ಹಾನಿ ವೀಕ್ಷಣೆ ಮಾಡಿ ದ್ದರು. ಇದಾದ ನಂತರ ಅಂತಿಮವಾಗಿ ಕೆಪಿಸಿಸಿ ರಾಜ್ಯಾ ಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದ ತಂಡ ಪಟ್ಟಣಕ್ಕೆ ಆಗಮಿಸಿ ನೀರೇ ಇಲ್ಲದ ಆಜಾದ್ ರಸ್ತೆ ಯನ್ನು ವೀಕ್ಷಣೆ ಮಾಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಹಿಂತಿರುಗಿತ್ತು. ಇನ್ನು ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ನೆರೆ ಹಾನಿ ಪರಿಶೀಲನೆಗೆ ಸಂಪೂರ್ಣವಾಗಿ ತಾಲೂಕು ಸುತ್ತಿಲ್ಲ.
ಕಾಟಾಚಾರದ ಪರಿಶೀಲನೆ: ಒಟ್ಟಾರೆಯಾಗಿ ತಾಲೂಕಿಗೆ ಆಗಮಿಸುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾಟಾಚಾರಕ್ಕೆಂಬಂತೆ ಆಜಾದ್ ರಸ್ತೆ, ಆನೆಮಹಲ್ ಪುನರ್ವಸತಿ ಕೇಂದ್ರಗಳಿಗೆ ಮಾತ್ರ ಭೇಟಿ ನೀಡಿ ಹೋಗುತ್ತಿರುವುದು ಹಾಸ್ಯಾಸ್ಪದವಾಗಿದೆ.
● ಸುಧೀರ್ ಎಸ್.ಎಲ್