Advertisement

ತಪ್ಪು ಮಾಹಿತಿ ನೆರೆ ಪರಿಹಾರಕ್ಕೆ ಬೋಗಸ್‌ ಕಾಟ!

08:47 AM Sep 19, 2019 | sudhir |

ಬೆಂಗಳೂರು: ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾದ ನಷ್ಟದ ನೈಜತೆ ಪರಿಶೀಲನೆ ಬಳಿಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಮನೆಗಳ ಸಂಖ್ಯೆ 2.50 ಲಕ್ಷದಿಂದ 1.50 ಲಕ್ಷಕ್ಕೆ ಇಳಿದಿದೆ. ಬೆಳೆ ನಷ್ಟ ಪ್ರಮಾಣವೂ 8.88 ಲಕ್ಷ ಹೆಕ್ಟೇರ್‌ಗಳಿಂದ 6.5 ಲಕ್ಷ ಹೆಕ್ಟೇರ್‌ಗಳಿಗೆ ಇಳಿಯುವ ಸಾಧ್ಯತೆ ಇದೆ!

Advertisement

ಇದಕ್ಕೆ ಕಾರಣ ಪ್ರವಾಹ ಪೀಡಿತ ಪ್ರದೇಶಗಳಲ್ಲಿ “ಬೋಗಸ್‌’ ಮನವಿಗಳ ಹಾವಳಿ. ಮನೆ ಕುಸಿತ, ಬೆಳೆ ನಷ್ಟ, ಜಾನುವಾರು ನಷ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಬೋಗಸ್‌ ಮನವಿಗಳು ಸಲ್ಲಿಕೆಯಾಗಿವೆ. ಇದೇ ಕಾರಣಕ್ಕೆ ಬೆಳಗಾವಿ ಭಾಗದಲ್ಲಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂ. ತುರ್ತು ಪರಿಹಾರ ನೀಡುವ 1,200 ಅರ್ಜಿಗಳ ಇತ್ಯರ್ಥಕ್ಕೆ “ಬ್ರೇಕ್‌’ ಬಿದ್ದಿದೆ ಎನ್ನಲಾಗಿದೆ. ಜತೆಗೆ ಜಾನುವಾರು ಸಾವಿನ ಬಗ್ಗೆಯೂ ವ್ಯತ್ಯಾಸದ ಅಂಕಿ- ಅಂಶ ನೀಡಿ ಪರಿಹಾರ ಕೊಡಿಸುವುದಾಗಿ ಕೆಲವು ಮಧ್ಯವರ್ತಿಗಳು ಅಮಾಯಕ ಜನರ ಬಳಿ ಆಧಾರ್‌ ಕಾರ್ಡ್‌ ಸೇರಿ ದಾಖಲಾತಿ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ನಿಗಾ ತಂಡ ರಚನೆ
ಬೋಗಸ್‌ ಅರ್ಜಿಗಳಿಗೆ ಕಡಿವಾಣ ಹಾಕಲು ಕಂದಾಯ, ಕೃಷಿ, ತೋಟಗಾರಿಕೆ, ಸಹಕಾರ, ಪಶು ಸಂಗೋಪನ ಇಲಾಖೆ ಅಧಿಕಾರಿಗಳ ನಿಗಾ ತಂಡ ರಚನೆಗೆ ಸರಕಾರ ನಿರ್ಧರಿಸಿದ್ದು, ಅಧಿಕಾರಿಗಳ ಪರಿಶೀಲನೆ ಬಳಿಕವಷ್ಟೇ ಪರಿಹಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿ, ಬಾಗಲಕೋಟೆ ಭಾಗದಲ್ಲಿ ಬೋಗಸ್‌ ಅರ್ಜಿಗಳ ಹಾವಳಿ ಹೆಚ್ಚಾಗಿದೆ.

ಕೇಂದ್ರಕ್ಕೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಕೆ
ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು 35,160.81 ಕೋಟಿ ರೂ.ಗಳ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಈ ಹಿಂದೆ 38,451.11 ಕೋಟಿ ರೂ. ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಖಾಸಗಿ ಕಟ್ಟಡಗಳ ನಷ್ಟ ಹೊರತುಪಡಿಸಿ ನಷ್ಟದ ಅಂದಾಜು ಸಲ್ಲಿಸಲು ಸೂಚನೆ ನೀಡಿದ್ದ ಮೇರೆಗೆ ಈಗ 35,160.81 ಕೋಟಿ ರೂ. ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 3,891 ಕೋಟಿ ರೂ. ಪರಿಹಾರ ಕೇಂದ್ರದಿಂದ ಬರುವ ನಿರೀಕ್ಷೆಯಿದೆ. ಇದನ್ನು ಹೊರತುಪಡಿಸಿ ವಿಶೇಷ ಆನು ದಾನಕ್ಕೂ ರಾಜ್ಯ ಸರಕಾರ ಮನವಿ ಸಲ್ಲಿಸಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next