Advertisement

ಕುಂಜೂರು‌ ದೇವಳ ಜಲಾವೃತ್ತ: ‘ನೆರೆನೀರು’ನೆನಪಿಸಿದ “ಪುರಾಣ”

05:53 PM Sep 20, 2020 | sudhir |

ಕಾಪು : ಇಂತಹ ಸತತ ಮಳೆ ಸುರಿಯುವ ಸಂದರ್ಭಗಳಲ್ಲಿ ಎಲ್ಲೂರು ಗ್ರಾಮದ ಕುಂಜೂರು ಶ್ರೀದುರ್ಗಾ ದೇವಸ್ಥಾನವು ನೆರೆ ನೀರು ಏರಿ ಜಲಾವೃತವಾಗುವುದು ಸಹಜ .

Advertisement

ದೇವಳದ ಒಳಾಂಗಣದಲ್ಲಿ ಒಂದು ಅಡಿಯಷ್ಟು ನೀರು ತುಂಬಿದರೆ , ಹೊರ ಅಂಗಣದಲ್ಲಿ ಮೂರು ಅಡಿ ಎತ್ತರಕ್ಕೆ ನೀರು. ಇಂತಹ ನಿರಂತರ ಮಳೆ ಸುರಿಯುವ ವೇಳೆ ನಮ್ಮ ಜಿಲ್ಲೆಯ ಹಲವು ದೇವಳಗಳು ಜಲಾವೃತ್ತವಾಗುವುದು .ಮೂಲಸ್ಥಾನ ಬಿಂಬದ ಪಾದದವರೆಗೆ ನೀರು ಎತ್ತರಿಸುವುದನ್ನು ನಾವು ಕೇಳುತ್ತೇವೆ , ದೂರದರ್ಶನದಲ್ಲಿ ಕಾಣುತ್ತೇವೆ ,ಪತ್ರಿಕೆಗಳಲ್ಲಿ ಓದುತ್ತೇವೆ .

ಹಾಗಾದರೆ ಹೀಗೇಕೆ ? ಉತ್ತರ ಸರಳ, ಅವು ತಗ್ಗು ಪ್ರದೇಶ. ಹಾಗಾಗಿಯೇ ಬೇಗನೆ ನೆರೆ ನೀರಿನ ಮಟ್ಟ ಹೆಚ್ಚುತ್ತದೆ . ಆಯಾ ದೇವಳಗಳ ನಿರ್ಮಾಣ ಕಾಲದ ದಂತಕತೆಯೋ , ಪುರಾಣಕತೆಯೋ ಈ ಸಂದರ್ಭಕ್ಕೆ ಅಂದರೆ ತಗ್ಗುಪ್ರದೇಶದಲ್ಲಿ ಯಾವ ಕಾರಣಕ್ಕೆ ದೇವಾಲಯ ನಿರ್ಮಾಣವಾಯಿತು ಎಂಬ ಮಾಹಿತಿಯನ್ನು ನೀಡುತ್ತವೆ .ಆದರೆ ಕೇಳುವ ಮನಃಸ್ಥಿತಿಬೇಕು‌.

ಭೌಗೋಳಿಕ ಸ್ವರೂಪ ಪರಿವರ್ತನೆಯನ್ನು ಗಮನಿಸಬೇಕು . ಈ ಕುರಿತ ವಿಸ್ತಾರವಾದ ಕತೆಗೆ ಉದಾಹರಣೆ ಉಡುಪಿ ಜಿಲ್ಲೆ ,ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕುಂಜೂರು ದೇವಳಕ್ಕೆ ಸಂಬಂಧಿಸಿದ ಪೌರಾಣಿಕ ಉಲ್ಲೇಖವನ್ನು (ಮುದ್ರಿತ ಪುಸ್ತಕಗಳಿವೆ ) ಗಮನಿಸಿದರೆ ಒಂದು ಪುರಾಣವು ತೆರೆದುಕೊಳ್ಳುತ್ತದೆ , ಮತ್ತಷ್ಟು ಓದಿದರೆ ಪುರಾಣವನ್ನು ಸಮರ್ಥಿಸಬಹುದಾದಷ್ಟು ವಿವರಗಳು ಲಭಿಸುತ್ತವೆ .

Advertisement

ಎಲ್ಲೂರು ವಿಶ್ವೇಶ್ವರ ದೇವಾಲಯದ ವತಿಯಿಂದ 1919 ನೇ ಇಸವಿಯಲ್ಲಿ (ಇಂದಿಗೆ 101ವರ್ಷ ಹಿಂದೆ) ಮುದ್ರಣಗೊಂಡ ಸಂಸ್ಕೃತ ಶ್ಲೋಕಗಳಲ್ಲಿರುವ “ಯೆಲ್ಲೂರು ಮಹಾತ್ಮ್ಯಂ” ಎಂಬ ಸಣ್ಣ ಪುಸ್ತಕದಲ್ಲಿ ಬಹಳಷ್ಟು ಮಾಹಿತಿಗಳು ಲಭಿಸುತ್ತವೆ .ಈ ಶ್ಲೋಕಗಳ ತಾತ್ಪರ್ಯ ಸಹಿತದ ಪುಸ್ತಕ ಮೂರು ಮುದ್ರಣವಾಗುತ್ತದೆ .

ಕತೆ ಹೀಗೆ ಶಿವ – ಪಾರ್ವತಿಯರ ಸಂವಾದಿಂದ ಆರಂಭವಾಗುತ್ತದೆ : ಪಾರ್ವತಿಯು ಮಾಹಾದೇವನನ್ನು ಕೇಳುತ್ತಾಳೆ ..”ನೀನು ಯೆಲ್ಲೂರು ಕ್ಷೇತ್ರಕ್ಕೆ ಹೋಗಲು ಕಾರಣವೇನು” ಎಂದು ; ಆಗ ಪೂರ್ವದ ಸಂದರ್ಭವೊಂದರ ವಿಸ್ತಾರವಾದ ಕತೆಯನ್ನು ವಿಶ್ವೇಶ್ವರನು ಪಾರ್ವತಿಗೆ ಹೇಳುತ್ತಾ…. ಭಾರ್ಗವನೆಂಬ ಮಹರ್ಷಿಯು ಸಂಕಲ್ಪಿಸಿದ ಹತ್ತು ಕ್ಷೇತ್ರಗಳ ನಡುವೆ ಎಲ್ಲೂರು ಕ್ಷೇತ್ರವಿದೆ . ಆ ಹತ್ತು ಕ್ಷೇತ್ರಗಳಲ್ಲಿ ಕುಂಜೂರು ಒಂದು . ಈ ಕುಂಜೂರು ಕ್ಷೇತ್ರದ ಕುರಿತು “ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ” ಎಂದು ಮಹಾದೇವನು ಉದ್ಗರಿಸುತ್ತಾನೆ .

ಎಲೈ ಪಾರ್ವತಿಯೇ… ರಹಸ್ಯವಾದುದನ್ನು ಹೇಳುತ್ತೇನೆ ಎನ್ನುತ್ತಾ..” ಎಲ್ಲೂರಿನಿಂದ ಪಶ್ಚಿಮದಲ್ಲಿ ವಾರುಣೀ ಎಂಬ ನದಿಯೊಂದು ಹರಿಯುತ್ತಿದೆ . ಅದು ಬಹುದೇಶಗಳನ್ನು ಕ್ರಮಿಸುತ್ತಾ ಅಂಕುಡೊಂಕಾಗಿ ಹರಿದು ಪಶ್ಚಿಮ ಸಮುದ್ರವನ್ನು ಸೇರುತ್ತದೆ (ಈಗ ಕುಂಜೂರು ದೇವಾಲಯ ಇರುವಲ್ಲಿ‌ ನದಿ ಹರಿಯುತ್ತಿತ್ತು) . ನದಿ ಬಹಳ ಅಗಲವಾಗಿಯೂ ಇತ್ತು. ಇಲ್ಲಿ ಭಾರ್ಗವ ಮಹರ್ಷಿಯು ನದಿಯನ್ನು ಮುಚ್ಚಿ ಭೂಮಿಯನ್ನಾಗಿ ಮಾಡಿ ವಿಚಿತ್ರವಾದ ಯಜ್ಞವನ್ನು ಮಾಡಿದನು ( ಯಾಗ ಮಾಡಿದ ಸ್ಥಳವೊಂದು ಇವತ್ತಿಗೂ ಜಾಗ , ಯಾಜ ಎಂದು ಗುರುತಿಸಲ್ಪಡುತ್ತದೆ).

ಈ ರೀತಿಯಲ್ಲಿ ಯಜ್ಞಮಾಡಿದ ಪ್ರದೇಶದಲ್ಲಿ ದುರ್ಗಾ ಶಕ್ತಿಯನ್ನು ಸಂಕಲ್ಪಿಸಿದ ಮಹರ್ಷಿ ಕ್ಷೇತ್ರಾಟನೆಗೆ ತೆರಳುತ್ತಾನೆ . ಕಾಲ ಉರುಳುತ್ತದೆ , ಭಾರ್ಗವ ಮಹರ್ಷಿಯಿಂದ ನಿರ್ಮಾಣವಾದ ಹೊಸ ಭೂಪ್ರದೇಶದಲ್ಲಿ ಮರ ,ಗಿಡಗಳು ಬೆಳೆಯುತ್ತವೆ ಆ ಪರಿಸರವು ‘ಕುಂಜ’ ಎಂದು ಗುರುತಿಸಲ್ಪಡುತ್ತದೆ …..ಹೀಗೆ ಕತೆ ಮುಂದುವರಿಯುತ್ತದೆ . ಮುಂದೆ ‘ಕುಂಜೂರು’ ಎಂದು ಜನಜನಿತವಾಗುತ್ತದೆ ‘ಮಹತೋಭಾರ ಯೆಲ್ಲೂರು ವಿಶ್ವನಾಥ’ ಮತ್ತು ‘ಕುಂಜೂರು ಶ್ರೀದುರ್ಗಾ’ ಪುಸ್ತಕಗಳನ್ನು ಓದಬಹುದು .

ಮೇಲೆ ವಿವರಿಸಿದ ಕತೆ ಒಂದು ಪುರಾಣ ಕತೆ. ನದಿಯ ಪಥವು ತಗ್ಗಾಗಿಯೇ ಇರುತ್ತದೆ . ಇಂತಹ ತಗ್ಗು ಪ್ರದೇಶವನ್ನೆ ಮುಚ್ಚಿ ಮಹರ್ಷಿ ಯಾಗ ಮಾಡಿದ .

ಅಂದರೆ ಈ ಪ್ರದೇಶವೇ ತಗ್ಗಿನಲ್ಲಿತ್ತು . ಕನಿಷ್ಠ 1200 ವರ್ಷಗಳಷ್ಟು ಪೂರ್ವದಲ್ಲಿ ಈ ಸಂಗತಿ ನಡೆದಿದೆ .ಹಾಗಾಗಿಯೇ ಈಗ ಸತತ ಮಳೆಯಾದಾಗ ನೆರೆನೀರು ಸಹಜವಾಗಿ ತುಂಬಿಕೊಳ್ಳುತ್ತದೆ .ಅಂದರೆ ಪುರಾಣದ ಉಲ್ಲೇಖವನ್ನು ಸಮರ್ಥಿಸಿದಂತೆ ಆಗುವುದಿಲ್ಲವೇ ?

ಈಗ ತಾನೆ ಕುಂಜೂರು ದೇವಳದ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ತುಂಬಿರುವ ನೆರೆ ನೀರನ್ನು ಕಂಡಾಗ , ಹಿಂದಿನ ಕೆಲವು ನೆರೆಯ ಸಂದರ್ಭಗಳು ನೆನಪಿಗೆ ಬಂದುವು .ಹಾಗೆ ಈ ನಿರೂಪಣೆ ಬರೆಯುವ ಪ್ರೇರಣೆಯಾಯಿತು . ಇಂತಹ ಹಲವು ಕ್ಷೇತ್ರಗಳು ನಮ್ಮ ಜಿಲ್ಲೆಯಲ್ಲಿವೆ .

– ಕೆ.ಎಲ್.ಕುಂಡಂತಾಯ

Advertisement

Udayavani is now on Telegram. Click here to join our channel and stay updated with the latest news.

Next