ಬನಹಟ್ಟಿ (ಬಾಗಲಕೋಟೆ): ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ ಮಹಾಬಳೇಶ್ವರ, ನೌಜಾ, ಕೋಯ್ನಾ, ರಾಧಾನಗರಿ, ದೂಧಗಂಗಾ, ವಾರಣಾ ಪ್ರದೇಶಗಳಲ್ಲಿ ಧಾರಾಕಾರ ಪ್ರಮಾಣದ ಮಳೆಯಾಗುತ್ತಿರುವುದರಿಂದ ಕೊಯ್ನಾ ಜಲಾಶಯ ಹಾಗೂ ರಾಜಾಪೂರ ಡ್ಯಾಂಗಳಿಂದ ನೀರು ರಭಸವಾಗಿ ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಇಂದು ಗುರುವಾರ ಒಂದೇ ದಿನದಲ್ಲಿ ಭಾರಿ ಪ್ರಮಾಣದ ನೀರು ಹರಿದು ಬಂದಿದೆ.
ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಅನೇಕ ನಗರ ಮತ್ತು ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಸಂಖ್ಯೆಯ ಜನ ಮತ್ತು ಜಾನುವಾರುಗಳಿಗೆ ಹಿಪ್ಪರಗಿ ಜಲಾಶಯ ಸಂಜೀವಿನಿಯಾಗಿದ್ದು, ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜಲಾಶಯ ನೋಡುಗರನ್ನು ಸೆಳೆಯುತ್ತಿದೆ.
ಕೋವಿಡ್ ಸಂಕಷ್ಟದ ನಡುವೆಯೂ ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿಯ ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮತ್ತಷ್ಟು ಭಯ ಪಡುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರವಾಹ ಭೀತಿ ಅಷ್ಟಾಗಿ ಇಲ್ಲದಿದ್ದರೂ ಮಹಾರಾಷ್ಟ್ರದಲ್ಲಿ ಮಳೆ ಈಗ ಪ್ರಾರಂಭವಾಗಿದ್ದು, ಅದು ಯಾವ ರೀತಿ ಬರುತ್ತದೆ ಅನ್ನುವುದರ ಮೇಲೆ ಪ್ರವಾಹದ ಸ್ಥಿತಿ ಗತಿ ನಿರ್ಧಾರವಾಗುತ್ತದೆ.
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಬಾರಿ ಪ್ರಮಾಣದ ಮಳೆಯಾಗುತ್ತಿರುವುದರಿಂದ ಇಂದು ಹಿಪ್ಪರಗಿ ಜಲಾಶಯಕ್ಕೆ ಒಟ್ಟು 87500 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಅದೇ ರೀತಿಯಾಗಿ ಜಲಾಶಯದಿಂದ 87500 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಮುಂದೆ ಹರಿ ಬೀಡಲಾಗುತ್ತದೆ. ಜಲಾಶಯದ ನೀರಿನ ಮಟ್ಟ 520.70 ಮೀ ಆಗಿದೆ ಎಂದು ರಬಕವಿ ಬನಹಟ್ಟಿ ತಹಸೀಲ್ದಾರ ಪ್ರಶಾಂತ ಚನಗೋಂಡ ತಿಳಿಸಿದ್ದಾರೆ.