ಬಾಗಲಕೋಟೆ : ಮಲಪ್ರಭಾ ನದಿ ನೀರಿನ ಹರಿವು ಹೆಚ್ಚಿದ್ದು, ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ ತ್ರಿವೇಣಿ ಸಂಗಮವಾದ ಕೂಡಲಸಂಗಮ ಮತ್ತೊಮ್ಮೆ ಜಲಾವೃತಗೊಂಡಿದೆ. ಸೋಮವಾರ ಸಂಗಮದ ಸಂಗಮೇಶ್ವರ ದೇವಾಲಯಕ್ಕೆ ಒಂದು ಅಡಿಯಷ್ಟು ನೀರು ನುಗ್ಗಿದೆ. ಇದರಿಂದ ಸಂಗಮನಾಥನ ದೇವಾಲಯಕ್ಕೆ ಹೋಗಬೇಕಾದ ಭಕ್ತರು, ಒಂದಡಿ ನೀರಿನಲ್ಲಿಯೇ ತೆರಳುತ್ತಿದ್ದಾರೆ.
ನಾರಾಯಣಪುರ ಜಲಾಶಯದ ಹಿನ್ನೀರ ವ್ಯಾಪ್ತಿ ಹಾಗೂ ಕೃಷ್ಣೆ, ಮಲಪ್ರಭೆ, ಘಟಪ್ರಭಾ ನದಿಗಳ ತ್ರಿವೇಣಿ ಸಂಗಮ ಸ್ಥಳವಾಗಿದ್ದು, ನಿತ್ಯವೂ ನೂರಾರು ಭಕ್ತರು ಬರುತ್ತಾರೆ. ಕಳೆದ ಆಗಸ್ಟ 8 ರಿಂದ ಸುಮಾರು ಒಂದು ವಾರಗಳ ಕಾಲ ಕೂಡಲಸಂಗಮ, ಸಂಗಮನಾಥ ದೇವಾಲಯ ಸಂಪೂರ್ಣ ಜಲಾವೃತವಾಗಿತ್ತು. ಆಗ 8 ಅಡಿಗೂ ಹೆಚ್ಚು ನೀರು, ದೇವಾಲಯದಲ್ಲಿ ಆವರಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಸಂಗಮನಾಥ ದೇವಾಲಯಕ್ಕೆ ಒಂದಡಿ ನೀರು ಹೊಕ್ಕಿದೆ.
ಕೃಷ್ಣಾ ಮತ್ತು ಘಟಪ್ರಭಾ ನದಿಗಳು, ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ ಸಂಗಮಗೊಂಡು, ಆಲಮಟ್ಟಿ ಜಲಾಶಯದ ಮೂಲಕ ನಾರಾಯಣಪುರ ಜಲಾಶಯಕ್ಕೆ ಹರಿಯುತ್ತವೆ. ಕೂಡಲಸಂಗಮದಲ್ಲಿ ಮಲಪ್ರಭಾ, ಕೃಷ್ಣಾ ನದಿ ಸಂಗಮಗೊಳ್ಳುತ್ತಿದ್ದು, ಮೂರು ನದಿಗಳ ನೀರಿನ ಹರಿವು ಕೂಡಲಸಂಗಮಕ್ಕೆ ಅಪಾರ ಪ್ರಮಾಣದಲ್ಲಿ ಬರುತ್ತದೆ. ಹೀಗಾಗಿ ಪ್ರವಾಹ ಪರಿಸ್ಥಿತಿ, ಕೂಡಲಸಂಗಮದಲ್ಲಿ ಹೆಚ್ಚುತ್ತದೆ.
ನಾರಾಯಣಪುರ ಜಲಾಶಯಕ್ಕೆ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಿಂದ ಒಟ್ಟು 2,60,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 2,62,280ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ನೀರಿನ ಒತ್ತಡ ಹೆಚ್ಚಾಗಿದ್ದರಿಂದ ಕೂಡಲಸಂಗಮ, ತಿಂಗಳಲ್ಲಿ 2 ನೇ ಬಾರಿ ಜಲಾವೃತಗೊಂಡಿದೆ.