Advertisement

ತಗ್ಗಿದ ಮಳೆ, ಇಳಿಯದ ನೆರೆ : ಮೂರು ದಿನಗಳಲ್ಲಿ 9 ಸಾವು, ಅಪಾರ ಪ್ರಮಾಣದ ಬೆಳೆ ಹಾನಿ

07:24 AM Jul 25, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಮಳೆ ಕಡಿಮೆಯಾದರೂ ಪ್ರವಾಹ ಇಳಿದಿಲ್ಲ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮತ್ತು ಪ್ರವಾಹಗಳಿಂದ ಆಗಿರುವ ಹಾನಿಯ ತೀವ್ರತೆ ಬೆಳಕಿಗೆ ಬರಲಾರಂಭಿಸಿದೆ. ಇದುವರೆಗೆ 9 ಮಂದಿ ಮೃತಪಟ್ಟಿದ್ದು, 11 ಜಿಲ್ಲೆಗಳ 45 ತಾಲೂಕುಗಳಲ್ಲಿ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

Advertisement

ಪ್ರವಾಹದಿಂದಾಗಿ ರಾಜ್ಯದಲ್ಲಿ 58,960 ಎಕರೆಯಲ್ಲಿ ಬೆಳೆದ ಬೆಳೆ ಹಾನಿ ಆಗಿದ್ದು, 1962 ಎಕರೆ ಪ್ರದೇಶ ದಲ್ಲಿ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಸುಮಾರು 555 ಕಿ.ಮೀ. ರಸ್ತೆ ಮತ್ತು 123 ಸೇತುವೆ, 213 ಶಾಲೆ, 33 ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದೆ.

ಜಿಲ್ಲೆಯಲ್ಲೇ ಇರಿ
ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರವಿವಾರ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲೇ ವಾಸ್ತವ್ಯ ಹೂಡಿ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.

ಪ್ರವಾಹದಿಂದ ತೊಂದರೆಗೆ ಈಡಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಯಡಿಯೂರಪ್ಪ ಅವರು ಶನಿವಾರ ಮಾತನಾಡಿ ಮಾಹಿತಿ ಪಡೆದರು. ಪ್ರವಾಹ ಪೀಡಿತ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಂಪರ್ಕ ಸಾಧಿಸಿ ತುರ್ತು ಪರಿಹಾರ ಕಾರ್ಯ, ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ, ಆಶ್ರಯ ಕೇಂದ್ರಗಳ ಸ್ಥಾಪನೆಗಳ ಬಗ್ಗೆ ನಿಗಾ ಇರಿಸುವಂತೆ ಸೂಚಿಸಿದ್ದಾರೆ.

ಪ್ರವಾಹ ಸ್ಥಿತಿ ಎದುರಿಸಲು ಸಜ್ಜು
ಪ್ರವಾಹ ಪರಿಸ್ಥಿತಿ ಎದುರಿಸಲು ಸುಮಾರು 950 ಕೋಟಿ ರೂ. ಮೀಸಲಿರಿಸಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ. ಸಂಪೂರ್ಣವಾಗಿ ಮನೆ ಹಾನಿಯಾದ ಸಂತ್ರಸ್ತರಿಗೆ 5 ಲಕ್ಷ ರೂ. ನೀಡಲಾಗುವುದು ಮತ್ತು ತಾತ್ಕಾಲಿಕವಾಗಿ 10 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಪೂರ್ಣ ಹಾನಿಗೊಂಡಿರುವ ಮನೆಗಳಿಗೆ ತತ್‌ಕ್ಷಣ 1 ಲಕ್ಷ ರೂ. ಬಿಡುಗಡೆ ಮಾಡುವುದನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದರು.

Advertisement

ಏನೇನು ನಷ್ಟ ?
– 11 ಜಿಲ್ಲೆಗಳ 45 ತಾಲೂಕುಗಳಲ್ಲಿ ಮಳೆ ಹಾವಳಿ
– 283 ಗ್ರಾಮಗಳಿಗೆ ಭಾರೀ ಹಾನಿ
– ಪ್ರವಾಹದಿಂದ 36,498 ಜನರಿಗೆ ತೊಂದರೆ
– ಮೂವರು ನಾಪತ್ತೆ
– 134 ಮನೆಗಳಿಗೆ ಸಂಪೂರ್ಣ, 2,480 ಮನೆಗಳಿಗೆ ಭಾಗಶಃ ಹಾನಿ
– ಪ್ರವಾಹಕ್ಕೆ ಸಿಲುಕಿದ್ದ 31,360 ಜನರ ಸ್ಥಳಾಂತರ
– 237 ಕಡೆಗಳಲ್ಲಿ ಕಾಳಜಿ ಕೇಂದ್ರ, 22,417 ಜನರಿಗೆ ಆಶ್ರಯ
– 3502 ವಿದ್ಯುತ್‌ ಕಂಬ, 341 ಟ್ರಾನ್ಸ್‌ ಫಾರ್ಮರ್‌ಗಳಿಗೆ ಹಾನಿ

ಶನಿವಾರ ಶಾಂತ

ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ, ಮಲೆನಾಡುಗಳಲ್ಲಿ ಶನಿವಾರ ಮಳೆ ತಗ್ಗಿದೆ. ಆದರೆ ಪ್ರವಾಹ ಇಳಿದಿಲ್ಲ. ಕೃಷ್ಣಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿವೆ. ಈ ನದಿಗಳ ಪಾತ್ರದಲ್ಲಿರುವ ಹಳ್ಳಿಗಳಲ್ಲಿ ಇನ್ನೂ ಪ್ರವಾಹ ಭೀತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next