ನರಗುಂದ: ಮಲಪ್ರಭಾ ನದಿ ಪ್ರವಾಹ ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಪ್ರಭಾವ ಬೀರಿದ್ದು, ತಾಲೂಕಿನ ಬೂದಿಹಾಳ ಗ್ರಾಮ ಸ್ಥಳಾಂತರ ಮಾಡಲಾಗಿದ್ದ ನವಗ್ರಾಮಕ್ಕೂ ಆಗಮಿಸಿದೆ. ಪ್ರವಾಹ ನೀರು ಆವರಿಸಿದ್ದರಿಂದ ನವಗ್ರಾಮದಲ್ಲಿದ್ದ ಸಂತ್ರಸ್ತರನ್ನು ಮತ್ತೂಂದು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.
2007, 2009ರಲ್ಲಿ ಮಲಪ್ರಭಾ ನದಿ ಪ್ರವಾಹ ಪರಿಸ್ಥಿತಿಗೆ ಹಲವಾರು ಬಾರಿ ನಡುಗಡ್ಡೆಯಾಗಿದ್ದ ಬೂದಿಹಾಳ ಗ್ರಾಮವನ್ನು ನವಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿತ್ತು. ಗ್ರಾಮದಿಂದ ಸುಮಾರು 2 ಕಿಮೀ ದೂರದಲ್ಲಿ ಶಿರೋಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ನಿವೇಶನದಲ್ಲಿ ಸುಮಾರು 400ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನಿರ್ಮಿಸಲಾಗಿತ್ತು. ಕೆಲವು ಗ್ರಾಮಸ್ಥರು ಸ್ಥಳಾಂತರವಾಗಿದ್ದರೆ ಬಹುತೇಕ ಜನರು ಹಳೆ ಗ್ರಾಮದಲ್ಲೇ ಇದ್ದರು. ಪ್ರವಾಹ ಮುನ್ಸೂಚನೆಯಿಂದ ಬುಧವಾರವೇ ಗ್ರಾಮದ ಜನರನ್ನು ನವಗ್ರಾಮಕ್ಕೆ ಸ್ಥಳಾಂತರಗೊಳಿಸಿದ್ದರು.
ಮಕ್ಕಳು ಮರಿ ಹಾಗೂ ಜಾನುವಾರುಗಳೊಂದಿಗೆ ಸಾಮಾನು ಸರಂಜಾಮು ಹೊತ್ತುಕೊಂಡು ನವಗ್ರಾಮದಲ್ಲಿ ಬೀಡು ಬಿಟ್ಟಿದ್ದ ಬೂದಿಹಾಳ ಸಂತ್ರಸ್ತರು ಸುರಿವ ಮಳೆ, ಬೀಸುವ ಛಳಿಯಲ್ಲೇ ನವಗ್ರಾಮದಲ್ಲಿ ಜಾಗ ಪಡೆದಿದ್ದರು. ಆದರೆ ಇಲ್ಲೂ ಪ್ರವಾಹ ಬಂದಿದೆ. ಗುರುವಾರ ಬೆಳಗ್ಗೆ ಉಕ್ಕಿ ಹರಿದ ಮಲಪ್ರಭಾ ನದಿ ನೀರು ಶಿರೋಳ ಮುಖ್ಯರಸ್ತೆ ದಾಟಿಕೊಂಡು ನವಗ್ರಾಮ ಪ್ರವೇಶಿಸಿದೆ. ತೀವ್ರ ಕಂಗಾಲಾದ ಸಂತ್ರಸ್ತರನ್ನು ಟ್ರ್ಯಾಕ್ಟರ್‌ಗಳಲ್ಲಿ ಕೊಣ್ಣೂರ ಎಪಿಎಂಸಿ ಪ್ರಾಂಗಣಕ್ಕೆ ಕರೆತರಲಾಗಿದೆ. ಸುರಕ್ಷಿತ ಸ್ಥಳದಲ್ಲಿ ನಿರ್ಮಿಸಿದ ನವಗ್ರಾಮಕ್ಕೂ ಪ್ರವಾಹ ಕರಾಳ ಬಾಹು ಹಸ್ತ ಚಾಚಿದ್ದರಿಂದ ನದಿ ಪಾತ್ರದಲ್ಲಿ ಜನಜೀವನ ಅಸ್ತವ್ಯಸ್ತವಾಗಿರುವುದಕ್ಕೆ ನಿದರ್ಶನವಾಗಿದೆ.
2007, 2009ರಲ್ಲಿ ಮಲಪ್ರಭಾ ನದಿ ಪ್ರವಾಹ ಪರಿಸ್ಥಿತಿಗೆ ಹಲವಾರು ಬಾರಿ ನಡುಗಡ್ಡೆಯಾಗಿದ್ದ ಬೂದಿಹಾಳ ಗ್ರಾಮವನ್ನು ನವಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಬೆಣ್ಣಿಹಳ್ಳ ಸಮೀಪದ ತಾಲೂಕಿನ ಬನಹಟ್ಟಿ ಗ್ರಾಮಕ್ಕೂ ಪ್ರವಾಹ ಭೀತಿ ಆವರಿಸಿದೆ. ಗುರುವಾರ ಮಧ್ಯಾಹ್ನ ವೇಳೆಗೆ ಗ್ರಾಮದ ರುದ್ರಸ್ವಾಮಿ ಮಠದವರೆಗೂ ಪ್ರವಾಹ ಆವರಿಸಿದೆ ಎನ್ನಲಾಗಿದೆ. ಅಲ್ಲದೇ ಹದಲಿ ಗ್ರಾಮಕ್ಕೂ ಪ್ರವಾಹ ಕರಾಳ ಛಾಯೆ ಬೀರುತ್ತಿದೆ ಎಂದು ತಿಳಿದುಬಂದಿದೆ.
ಬೆಳ್ಳೇರಿ ಗ್ರಾಮದ ಸಂತ್ರಸ್ತರನ್ನು ಭೈರನಹಟ್ಟಿ ಸರಕಾರಿ ಶಾಲೆಗೆ, vಕುರ್ಲಗೇರಿ ಸಂತ್ರಸ್ತರನ್ನು ನರಗುಂದ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಲಖಮಾಪುರ, ಬೆಳ್ಳೇರಿ, ವಾಸನ ಗ್ರಾಮಗಳೂ ಪ್ರವಾಹಕ್ಕೆ ತತ್ತರಿಸಿವೆ.