ಕಡಬ: ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ವೇಳೆ ಮಕ್ಕಂದೂರಿನ ಎಮ್ಮೆತ್ತಾಳು ಗ್ರಾಮದ ಕುಟುಂಬವೊಂದು ಕಡಬದಲ್ಲಿರುವ ನೆಂಟರ ಮನೆಗೆ ಬಂದಿದ್ದುದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಮನೆ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದೆ.
ಮಕ್ಕಂದೂರಿನ ಎಮ್ಮೆತ್ತಾಳು ಗ್ರಾಮದ ದಿ| ಮೋಹನ್‌ಕುಮಾರ್ ಮತ್ತು ಶಶಿಕಲಾ ದಂಪತಿಯ ಪುತ್ರಿ ಪೂಜಾ ಅವರನ್ನು ಕಡಬ ಬಳಿಯ ಕೆಂಚ ಭಟ್ರೆಯ ವಿನೋದ್‌ಕುಮಾರ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಕಳೆದ ವಾರ ಪೂಜಾ ಪ್ರಸವಿಸಿದ್ದು, ಶಶಿಕಲಾ ಅವರು ತನ್ನ ವೃದ್ಧ ತಾಯಿ ಗಿರಿಜಾ ಹಾಗೂ ಪುತ್ರ ವಿಷ್ಣುವಿನೊಂದಿಗೆ ಮೊಮ್ಮಗು ವನ್ನು ನೋಡುವುದಕ್ಕಾಗಿ ಕಡಬಕ್ಕೆ ಬಂದಿದ್ದರು.
ಅವರು ಕಡಬದಿಂದ ಮತ್ತೆ ಮಡಿ ಕೇರಿಗೆ ಹೊರಟಿದ್ದರೂ ವಿಪರೀತ ಮಳೆ ಯಿದ್ದುದರಿಂದ ಅಳಿಯ ಅವ ರನ್ನು ತಡೆದಿದ್ದರು. ಬಳಿಕ ಕೊಡಗಿ ನಲ್ಲಿ ಮಳೆ ಬಿರುಸಾಯಿತು. ಆ. 16ರಂದು ಮಕ್ಕಂದೂರಿನಲ್ಲಿ ಭೂ ಕುಸಿತ ಉಂಟಾಗಿ ಶಶಿಕಲಾ ಅವರಿಗೆ ಸೇರಿದ ಮನೆ ಸಂಪೂರ್ಣವಾಗಿ ನೆಲ ಸಮ ವಾಗಿದೆ. ಜೀವನಾಧಾರವಾಗಿ ಇದ್ದ ಅರ್ಧ ಎಕರೆ ಕಾಫಿ ತೋಟವೂ ನಾಶ ವಾಗಿದೆ. ಈಗ ಮನೆ ಹಾಗೂ ಕಾಫಿ ತೋಟ ಕಳೆದುಕೊಂಡಿರುವ ಕುಟುಂಬ ದಿಕ್ಕುತೋಚದೆ ಕಂಗಾಲಾಗಿ ಕುಳಿತಿದೆ.
ನಾವು ಮನೆಗೆ ಬೀಗ ಹಾಕಿ ಮಗಳ ಮಗುವನ್ನು ನೋಡುವುದಕ್ಕಾಗಿ ಕಡಬಕ್ಕೆ ಬಂದಿದ್ದೆವು. ಈಗ ನಮ್ಮ ಮನೆಯೂ ಇಲ್ಲ, ಜೀವನಾ ಧಾರ ವಾಗಿದ್ದ ಅರ್ಧ ಎಕರೆ ತೋಟವೂ ಇಲ್ಲ. ಮನೆ ಇದ್ದ ಜಾಗ ಯಾವುದೆಂದೇ ತಿಳಿಯದ ರೀತಿಯಲ್ಲಿ ಭೂಮಿ ಕುಸಿದು ಹೋಗಿದೆ. ನಮಗೆ ದಿಕ್ಕೇ ತೋಚುತ್ತಿಲ್ಲ.
–
ಶಶಿಕಲಾ, ಸಂತ್ರಸ್ತೆ