Advertisement

ಇಳಿದ ನದಿಗಳ ನೆರೆ; ನೀಗದ ಸಮಸ್ಯೆಗಳ ಹೊರೆ

02:54 PM Aug 20, 2019 | Suhan S |

ಸೊರಬ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸಾಕಷ್ಟು ಹಾನಿಯಾಗಿದ್ದು, ವರದಾ-ದಂಡಾವತಿ ನದಿಗಳ ಪ್ರವಾಹ ಇಳಿಮುಖವಾದರೂ ಸಮಸ್ಯೆಗಳು ಮಾತ್ರ ಜನತೆಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತಾಲೂಕಿನಲ್ಲಿ ಸುಮಾರು 1 ಸಾವಿರ ಕೋಟಿ ರೂ.,ಗೂ ಅಧಿಕ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಕೃಷಿ ಇಲಾಖೆಯ ಅಂಕಿ ಅಂಶದಂತೆ ಸಮಾರು 16 ಸಾವಿರ ಎಕರೆ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು, 448 ಕೋಟಿ ರೂ., ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಉಳಿದಂತೆ ತಾಪಂ ವ್ಯಾಪ್ತಿಯ 41ಗ್ರಾಮಗಳಲ್ಲಿ 208 ಮನೆಗಳು ಹಾಗೂ 21 ಕೊಟ್ಟಿಗೆಗಳು ಧರೆಗೆ ಉರುಳಿದ್ದು, 112 ಕೋಟಿ ನಷ್ಟ ಸಂಭವಿಸಿದೆ. ಪಿಡಬ್ಲು ್ಯಡಿ ಇಲಾಖೆ ವ್ಯಾಪ್ತಿಯಡಿ 29 ರಸ್ತೆಗಳು ಹಾಗೂ 7 ಸೇತುವೆಗಳಿಗೆ ಹಾನಿಯಾಗಿದ್ದು, 13 ಕೋಟಿ ರೂ., ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 40 ಕೆರೆಗಳು, 10 ಪಿಕಪ್‌-ಬ್ಯಾರೇಜ್‌, 13 ನದಿ-ಹಳ್ಳಗಳಲ್ಲಿ ಹಾನಿ ಸಂಭವಿಸಿದ್ದು, ಸುಮಾರು 27 ಕೋಟಿ ರೂ. ನಷ್ಟ ಸಂಭವಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳ ಸುಮಾರು 160 ಕೊಠಡಿಗಳಿಗೆ ಹಾನಿಯಾಗಿದ್ದು, 6.45 ಕೋಟಿ ರೂ., ಹಾನಿ ಸಂಭವಿಸಿದ್ದರೆ, ಪಂಚಾಯತ್‌ ರಾಜ್‌ ಇಂಜಿನಿಯರ್‌ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 24 ಕೋಟಿ ರೂ., ಹಾನಿಯಾಗಿದ್ದರೆ, ಅಕ್ಷರ ದಾಸೋಹ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯ್ತಿ, ಶಿಶು ಅಭಿವೃದ್ಧಿ ಯೋಜನಾ ಕಲ್ಯಾಣ ಇಲಾಖೆ ಸೇರಿ ಸುಮಾರು 20 ಕೋಟಿ ರೂ. ಹಾನಿಯಾಗಿದೆ ಎಂದು ಇಲಾಖಾವಾರು ವರದಿ ಸಲ್ಲಿಸಲಾಗಿದೆ.

ಅಡಿಕೆ, ತೆಂಗು, ಬಾಳೆ ಸೇರಿ ತೋಟಗಾರಿಕೆ ಇಲಾಖೆಯ ಅಂಕಿ-ಅಂಶಗಳಂತೆ ಸುಮಾರು 1342 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾನಿಯಾಗಿದ್ದು, ಸುಮಾರು 190 ಕೋಟಿ ರೂ. ಹಾನಿಯಾದ ಕುರಿತು ವರದಿಯಾಗಿದೆ. ಉಳಿದಂತೆ ತಾಲೂಕು ಕಚೇರಿ, ಅರಣ್ಯ ಇಲಾಖೆ, ಮೆಸ್ಕಾಂ, ಪಶು ಸಂಗೋಪನ ಇಲಾಖೆ, ಪೊಲೀಸ್‌ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ ಒಟ್ಟು ಒಂದು ಸಾವಿರ ಕೋಟಿ ರೂ.ಗೂ ಅಧಿಕ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂಬುದು ತಾಲೂಕು ಆಡಳಿತದಿಂದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಆಸ್ತಿ-ಪಾಸ್ತಿ ಹಾನಿಯಾದ ಕ್ರೋಢೀಕೃತ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

Advertisement

ತಾಲೂಕಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾದರೂ ಜನತೆ ಮತ್ತೆ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳಲ್ಲಿ ವಿಷಜಂತುಗಳು ಸೇರಿವೆ. ಈಗಾಗಲೇ ತಾಲೂಕು ಆಡಳಿತ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಿದೆಯಾದರೂ, ಶಾಶ್ವತ ಪರಿಹಾರ ಒದಗಿಸುವುದು ತುರ್ತು ಅಗತ್ಯವಿದೆ.

 

•ಎಚ್.ಕೆ.ಬಿ. ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next