ಹೊನ್ನಾವರ: ದಶಕಕ್ಕೊಮ್ಮೆ ಲಿಂಗನಮಕ್ಕಿ ಆಣೆಕಟ್ಟು ತುಂಬಿ ತುಳುಕಿದಾಗ ಕೆಪಿಸಿ ತೂಕಡಿಸಿದರೆ ನೆರೆ ಬಂದದ್ದಿದೆ. ಈ ಸಂದರ್ಭದಲ್ಲಿ ಬರುವ ರಾಜಕಾರಣಿಗಳು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಭರವಸೆ ಕೊಟ್ಟು ಹೋಗುತ್ತಾರೆ. ಪಶ್ಚಿಮದಲ್ಲಿ ಇಳಿಜಾರಾಗಿರುವ ಕಾರಣ ಮಳೆ ನಿಂತೊಡನೆ ನೆರೆಇಳಿಯುತ್ತದೆ. ಜೊತೆಯಲ್ಲಿ ರಾಜಕಾರಣಿಗಳ ಭರವಸೆಗಳು ಇಳಿದು ಹೋಗುತ್ತಿವೆ. ಶಾಶ್ವತ ಪರಿಹಾರ ಕನಸಿನ ಮಾತಾಗಿದೆ.
ಪಶ್ಚಿಮ ಘಟ್ಟದ ಪಶ್ಚಿಮ ದಿಕ್ಕಿನಲ್ಲಿ ಕಾಡು ಬಹುಪಾಲು ನಾಶವಾದ ಕಾರಣ ರಭಸದ ಮಳೆಗೆ ಮರಗಳು ನೆಲದ ಮೇಲಿನ ತರಗೆಲೆಯ ಮೇಲೆ ಬಿದ್ದು ನಿಧಾನ ಇಂಗುವ ಬದಲು ಜರಜರನೆ ಇಳಿದು ಹಡಿನಬಾಳ, ಭಾಸ್ಕೇರಿ, ಮಾಗೋಡು, ಕಲ್ಕಟ್ಟೆ ಮೊದಲಾದ ಹೊಳೆಗಳಲ್ಲಿ ತುಂಬಿ ಹರಿಯುವ ಕಾರಣ ಇತ್ತೀಚಿನ ದಶಕದಲ್ಲಿ ನೆರೆ ಜೋರಾಗಿದೆ.
ಮಳೆಗಾಲದಲ್ಲಿ 400 ಮಿಮೀ ಮಳೆ ಬೀಳುತ್ತಿದ್ದರೂ ಇಂತಹ ಸಮಸ್ಯೆ ಇರಲಿಲ್ಲ. ಮೊದಲನೆಯದು ಕಾಡು ನಾಶವಾಗಿ ನೆರೆಯ ಕೆಂಪು ನೀರಿನೊಂದಿಗೆ ಮಣ್ಣು ಹರಿದುಬಂದು ಹಳ್ಳಗಳಲ್ಲಿ ಹೂಳು ತುಂಬಿದ್ದು ಒಂದು ಕಾರಣವಾದರೆ, ಎರಡನೆಯದು ಈ ಹೊಳೆಹಳ್ಳ, ನದಿಗಳ ಅಕ್ಕಪಕ್ಕದ ಜನ ಹೊಳೆಯನ್ನು ಆಕ್ರಮಿಸಿ ಭೂಮಿ ವಿಸ್ತರಿಸಿಕೊಂಡಿದ್ದಾಗಿದೆ. ಆದ್ದರಿಂದ ಈಗ ಪ್ರತಿ ಮಳೆಗಾಲದಲ್ಲಿ ನೆರೆ ಖಂಡಿತ ಬರುತ್ತದೆ.
80ರ ದಶಕದಲ್ಲಿ ಕೆಪಿಸಿ ನೀರು ಬಿಟ್ಟ ಕಾರಣ ನೆರೆ ಬಂದು ಶರಾವತಿಕೊಳ್ಳದ ಎಡಬಲದಂಡೆಯ 35ಕಿ.ಮೀ.ನ ಸಾವಿರಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಕೊಚ್ಚಿಹೋದವು. ಸರ್ಕಾರ ಸಾಂತ್ವನಪರ ಪರಿಹಾರ ನೀಡಿತು ಅಷ್ಟೇ. ಅಂದು ಬಿಷಪ್ ಆಗಿದ್ದ ಡಾ| ವಿಲಿಯಂ ಡಿಮೆಲ್ಲೋ ಎಲ್ಲ ಮನೆಗಳಿಗೂ ಹಂಚು ಕೊಟ್ಟರು. ಎತ್ತರ ಜಾಗದಲ್ಲಿ ಶಾಶ್ವತ ಮನೆ ಕಟ್ಟಿಸಿಕೊಡುವ ಭರವಸೆ ಹಾಗೆಯೇ ಉಳಿಯಿತು.
2000ನೇ ಸಾಲಿನಲ್ಲಿ ಮತ್ತೆ ನೆರೆ ಬಂದಾಗ ಮನೆ ಎತ್ತರದಲ್ಲಿದ್ದ ಕಾರಣ ನೀರು ನುಗ್ಗಿ ಹೋಯಿತು. ಆಗ ಶರಾವತಿ ಕೊಳ್ಳಕ್ಕೆ ಭೇಟಿ ನೀಡಿದ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮಿಗಳು ಎತ್ತರದಲ್ಲಿ ಸರ್ಕಾರ ಜಾಗಕೊಟ್ಟರೆ ಎಲ್ಲರಿಗೆ ಮನೆ ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಅದೂ ಹಾಗೆಯೇ ಉಳಿಯಿತು. ಒಂದು ಬಸ್ ತುಂಬ ವೈದ್ಯರನ್ನು ಕಳಿಸಿದ್ದರು. ಎಲ್ಲರಿಗೂ ಪ್ರಯೋಜನಸಿಗಲಿಲ್ಲ. ಇಸ್ಕಾನ್ ಹುಬ್ಬಳ್ಳಿಯಿಂದ ನಿರಾಶ್ರಿತರಿಗೆ ಬಿಸಿಬಿಸಿ ಊಟ ಕಳಿಸಿತ್ತು. ರಾಜಕಾರಣದಿಂದ ಅದು ಮರಳಿ ಹೋಯಿತು. ಜನ ಒದ್ದೆ ಬಟ್ಟೆಯಲ್ಲಿ ಸರ್ಕಾರದ ಗಂಜಿ ಉಂಡು ನೀರಿಳಿದ ಮೇಲೆ ಮನೆಗೆ ಹೋದರು. ಎಲ್ಲ ಹೊಳೆ, ಹಳ್ಳಗಳ ದಂಡೆಗಳಲ್ಲೂ ಅದೇ ಸ್ಥಿತಿ, ಅದೇ ಗತಿ. ಜೊತೆಯಲ್ಲಿ ಕೊಂಕಣ ರೇಲ್ವೆ ನೀರು ಹರಿಯಲು ರಚಿಸಿದ ರಾಜಾಕಾಲುವೆಗಳ ಹೂಳೆತ್ತದ ಕಾರಣ ಗದ್ದೆಗಳಲ್ಲೂ ನೀರು ತುಂಬಿ ಬೆಳೆಹಾಳಾಯಿತು. ಮನೆಗೆ ನೀರು ನುಗ್ಗಿ ಸಾಮಗ್ರಿಗಳೆಲ್ಲ ಒದ್ದೆಯಾದವು.
ಕಳೆದ ವರ್ಷ ನೆರೆ ನೋಡಲು ಬಂದ ಕಂದಾಯ ಸಚಿವ ಆರ್. ಅಶೋಕ 10 ಕೋಟಿ ರೂ.ಗಳಲ್ಲಿ ತಂಗುವ ವ್ಯವಸ್ಥೆ ಮಾಡುವುದಾಗಿ ಹೇಳಿ ಹೋಗಿದ್ದರು. ಒಂದು ಪೈಸೆಯೂ ಬರಲಿಲ್ಲ. ಇಲ್ಲಿ ಸರ್ಕಾರದ ಲೈಫ್ ಜಾಕೆಟ್, ನೈಟ್‌ಲ್ಯಾಂಪ್, ದೋಣಿ ಯಾವುದೂ ಲೆಕ್ಕಕ್ಕಿಲ್ಲ. ದಂಡೆ ಮೇಲಿಂದ ಕರೆಯುತ್ತಾರೆ ಯಾರೂ ನೀರಿಗಿಳಿಯುವುದಿಲ್ಲ. ಎಲ್ಲ ಪಕ್ಷದ ರಾಜಕಾರಣಿಗಳಿಗೂ, ಜನಕ್ಕೂ ಇದು ಅಭ್ಯಾಸವಾಗಿ ಹೋಗಿದೆ. ಶಾಶ್ವತ ಪರಿಹಾರ ಮಾತ್ರ ದೂರದ ಮಾತಾಗಿದೆ.