Advertisement
ಹವಾಮಾನ ತಜ್ಞರ ಪ್ರಕಾರ ಒಂದೆರಡು ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗಲಿದೆ. ಒಂದು ವೇಳೆ ರಾಜ್ಯದಲ್ಲಿ ಮಳೆ ಮುಂದುವರಿದರೆ ಇಲ್ಲವೇ ಮಹಾರಾಷ್ಟ್ರದಲ್ಲಿ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಿದರೂ ಪ್ರವಾಹ ಸ್ಥಿತಿ ಎದುರಿಸಲು ಸಜ್ಜಾಗಬೇಕಾಗುತ್ತದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಆಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಇನ್ನಷ್ಟು ಮುಂದುವರಿದರೆ ಅಲ್ಲಿನ ಜಲಾಶಯಗಳಿಂದ ಹೊರಬೀಳುವ ನೀರು ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಸಲಿದೆ. ಕಳೆದೊಂದು ದಶಕದಿಂದ ಪ್ರವಾಹ ಸ್ಥಿತಿ ಗಮನಿಸಿದರೆ, ಸಾಮಾನ್ಯವಾಗಿ ಸೆಪ್ಟೆಂಬರ್ -ಅಕ್ಟೋಬರ್ ವೇಳೆಗೆ ಕಂಡು ಬರುತ್ತಿದ್ದ ಪ್ರವಾಹ ಈ ಬಾರಿ ಜೂನ್‌ನಲ್ಲಿಯೇ ಗೋಚರಿಸ ತೊಡಗಿದೆ.
Related Articles
Advertisement
15 ದಿನದ ಮಳೆ ಮೂರೇ ದಿನದಲ್ಲಿ: ಬೆಳಗಾವಿಯ ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಬೆಳಗಾವಿ, ಖಾನಾಪುರ ತಾಲೂಕು, ಧಾರವಾಡ ಜಿಲ್ಲೆಯ ಆಳ್ನಾವರ, ಕಲಘಟಗಿ ತಾಲೂಕು, ಹಾವೇರಿ ಜಿಲ್ಲೆ ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳಲ್ಲಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅತಿಯಾದ ಮಳೆಯಾಗಿದೆ. ಕೆಲವೊಂದು ಕಡೆ 15 ದಿನಗಳಲ್ಲಿ ಬೀಳಬೇಕಾದ ಮಳೆ ಕೇವಲ ಮೂರೇ ದಿನದಲ್ಲಿ ಬಿದ್ದಿದೆ. ಕಲ್ಯಾಣ ಕರ್ನಾಟಕದ ವಿವಿದ ಜಿಲ್ಲೆ, ಮುಂಬೈ ಕರ್ನಾಟಕದ ವಿಜಯಪುರ, ಬಾಗಲಕೋಟೆಗಳಲ್ಲಿ ಮುಂಗಾರು ಬಿತ್ತನೆಗೆ ಪೂರಕವೆನ್ನುವ ರೀತಿಯಲ್ಲಿ ಮಳೆಯಾಗಿದೆ.
ಬಿದ್ದ ಮಳೆ ಮುಂಗಾರು ಬಿತ್ತನೆಗೆ ಅನುಕೂಲವಾಗಿದೆ. ಒಂದೆರಡು ದಿನಗಳಲ್ಲಿ ಮಳೆ ಕಡಿಮೆಯಾದರೆ ಬೆಳೆಗಳಿಗೆ ತೊಂದರೆ ಇಲ್ಲ. ಇಲ್ಲವಾದರೆ ಈಗಾಗಲೇ ಬಿತ್ತನೆಯಾಗಿ ಮೊಳಕೆ ಬಂದಿರುವ, ಒಂದಿಷ್ಟು ಚಿಗುರು ಬಿಟ್ಟಿರುವ ಹೆಸರು, ಸೋಯಾಬೀನ್, ಮೆಕ್ಕೆಜೋಳ ಇನ್ನಿತರ ಬೆಳೆಗಳಿಗೆ ಹಾನಿಯುಂಟಾಗಿ ಮತ್ತೂಮ್ಮೆ ಬಿತ್ತನೆ ಮಾಡಬೇಕಾದ ಸ್ಥಿತಿ ಬಂದೀತು ಎಂಬುದು ರೈತರ ಆತಂಕವಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ? : ಉತ್ತರ ಕರ್ನಾಟಕದ 13 ಜಿಲ್ಲೆಗಳ ಪೈಕಿ ಜೂ. 1ರಿಂದ 17ರವರೆಗೆ 9 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದರೆ, ಮೂರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚಿನದಾಗಿದೆ. ಒಂದು ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಅಲ್ಪ ಪ್ರಮಾಣದ ಕೊರತೆ ಉಂಟಾಗಿದೆ. ಬೀದರ -159 ಮಿಮೀ (ವಾಡಿಕೆ 69 ಮಿಮೀ), ಕಲಬುರಗಿ-108 ಮಿಮೀ(63 ಮಿಮೀ), ವಿಜಯಪುರ-142 ಮಿಮೀ(79 ಮಿಮೀ), ರಾಯಚೂರು-78 ಮಿಮೀ(48 ಮಿಮೀ), ಬಾಗಲಕೋಟೆ-97 ಮಿಮೀ(57 ಮಿಮೀ), ಕೊಪ್ಪಳ-103 ಮಿಮೀ(50 ಮಿಮೀ), ಬೆಳಗಾವಿ-165 ಮಿಮೀ(74 ಮಿಮೀ), ಧಾರವಾಡ-157 ಮಿಮೀ(74 ಮಿಮೀ), ಬಳ್ಳಾರಿ-84 ಮಿಮೀ(48 ಮಿಮೀ) ವಾಡಿಕೆಗಿಂತ ಅತಿಹೆಚ್ಚಿನ ಮಳೆಯಾಗಿದೆ. ಈ ಜಿಲ್ಲೆಯಲ್ಲಿ ಶೇ.60ರಿಂದ ಶೇ.132 ಅಧಿಕ ಮಳೆಯಾಗಿದೆ. ಹಾವೇರಿ-84ಮಿಮೀ(68 ಮಿಮೀ), ಉತ್ತರ ಕನ್ನಡ -497 ಮಿಮೀ(348 ಮಿಮೀ)ಸಾಮಾನ್ಯಕ್ಕಿಂತ ತುಸು ಹೆಚ್ಚಿನ ಮಳೆಯಾಗಿದೆ. ಗದಗ-57 ಮಿಮೀ(59 ಮಿಮೀ), ಯಾದಗಿರಿ-52 ಮಿಮೀ(58 ಮಿಮೀ)ಈ ಎರಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ. 4 ಹಾಗೂ ಶೇ.11 ಮಳೆ ಕಡಿಮೆಯಾಗಿದೆ ಉತ್ತರ ಕರ್ನಾಟಕದಲ್ಲಿ ಜೂ. 20ರ ನಂತರದಲ್ಲಿ ಮಳೆ ಕುಗ್ಗಲಿದ್ದು, ಮೋಡ ಕವಿದ ವಾತಾವರಣ, ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ಆಗಬಹುದು.
ಮಹಾರಾಷ್ಟ್ರದ ಮಳೆ ಸ್ಥಿತಿ ಗಮನಿಸುತ್ತಿದ್ದೇವೆ. ಅಲ್ಲಿನ ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಿಲ್ಲ. ನಮ್ಮಲ್ಲಿ ಮಳೆ ನಿಂತ ನಾಲ್ಕೈದು ದಿನಗಳ ನಂತರ ಅಲ್ಲಿ ಹೆಚ್ಚಿನ ಮಳೆಯಾದರೂ ಪ್ರವಾಹ ಸ್ಥಿತಿ ಹೆಚ್ಚಿನದಾಗದು. ಆದರೆ, ನಮ್ಮಲ್ಲೂ ಮಳೆ ಮುಂದುವರಿದು ಅಲ್ಲಿಯೂ ಹೆಚ್ಚಿನ ಮಳೆಯಾದರೆ ಪ್ರವಾಹ ಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.- ಆರ್.ಎಚ್. ಪಾಟೀಲ, ಮುಖ್ಯಸ್ಥರು, ಉಕ ಕೃಷಿ ಹವಾಮಾನ ಮನ್ಸೂಚನೆ, ಸಂಶೋಧನಾ ಕೇಂದ್ರ
–ಅಮರೇಗೌಡ ಗೋನವಾರ