Advertisement

ಪ್ರವಾಹ ಎಫೆಕ್ಟ್: ಸಿನಿಮಾ ಬಿಡುಗಡೆ ಮುಂದಕ್ಕೆ

10:20 AM Aug 27, 2019 | Lakshmi GovindaRaj |

ಕನ್ನಡ ಚಿತ್ರರಂಗಕ್ಕೆ ಹೆಚ್ಚು ಆದಾಯ ತಂದುಕೊಡುವ ಏರಿಯಾ ಅಂದರೆ, ಅದು ಉತ್ತರ ಕರ್ನಾಟಕ ಎಂಬ ಮಾತಿದೆ. ಇದು ಅಕ್ಷರಶಃ ನಿಜ ಎಂಬುದು ಸಿನಿಪಂಡಿತರ ಮಾತು. ಹೌದು, ಅತೀ ಹೆಚ್ಚು ಕನ್ನಡ ಸಿನಿಪ್ರೇಮಗಳು ಇರೋದೇ ಉತ್ತರ ಕರ್ನಾಟಕ ಭಾಗದಲ್ಲಿ. ಕನ್ನಡದ ಪ್ರತಿಯೊಬ್ಬ ಸ್ಟಾರ್‌ ನಟರಿಗೂ ಹೆಚ್ಚು ಅಭಿಮಾನಿ ಹೊಂದಿರುವ ಭಾಗ ಉತ್ತರ ಕರ್ನಾಟಕ ಎಂದರೆ ಅತಿಶಯೋಕ್ತಿಯಲ್ಲ. ಅಂತಹ ಆಡಿಯನ್ಸ್‌ ಹೊಂದಿರುವ ಭಾಗದಲ್ಲೇ ಈಗ ಚಿತ್ರ ಬಿಡುಗಡೆ ಮಾಡಲು ಹಿಂದೇಟು ಹಾಕುವಂತಾಗಿದೆ!

Advertisement

ಹೌದು, ಅದಕ್ಕೆ ಬಲವಾದ ಕಾರಣ ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ. ಮಳೆಯ ಅಬ್ಬರಕ್ಕೆ ಉತ್ತರ ಕರ್ನಾಟಕದ ಕೆಲ ಭಾಗ ಸಂಪೂರ್ಣ ಕೊಚ್ಚಿ ಹೋಗಿದೆ. ಬದುಕು ಉಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರುವ ಮಂದಿ, ಬಣ್ಣದಲೋಕದ ಮಂದಿಯ ಚಿತ್ರಗಳನ್ನು ನೋಡುವುದೆಲ್ಲಿ? ರೆಹಾವಳಿಯಿಂದಾಗಿ, ಮನೆ, ಹೊಲ, ಜನ, ಜಾನುವಾರುಗಳನ್ನು ಕಳೆದುಕೊಂಡ ಅಕ್ಷರಶಃ ಬೀದಿಗೆ ಬಂದಿದ್ದಾರೆ.

ಅವರ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತಿರುವ ಹೊತ್ತಲ್ಲಿ, ತಮ್ಮ ಪ್ರೀತಿಯ ಹೀರೋಗಳ ಸಿನಿಮಾವನ್ನು ಯಾವ ಖುಷಿಯಿಂದ ಕಣ್ತುಂಬಿಕೊಳ್ಳಲು ಸಾಧ್ಯ? ಎಲ್ಲೆಂದರಲ್ಲಿ ನೀರು ಹರಿದಿದೆ. ಇದಕ್ಕೆ ಆ ಭಾಗದ ಚಿತ್ರಮಂದಿರಗಳೂ ಹೊರತಲ್ಲ. ದುಃಖದ ಮಡುವಿನಲ್ಲಿರುವ ಉತ್ತರಕರ್ನಾಟಕ ಮಂದಿ, ಇಂತಹ ಪರಿಸ್ಥಿತಿಯಲ್ಲಿ ಮನರಂಜನೆಗಾಗಿ ಸಿನಿಮಾ ನೋಡುತ್ತಾರಾ? ಖಂಡಿತಾ ಇಲ್ಲ. ಇವೆಲ್ಲಾ ಕಾರಣಗಳಿಂದಾಗಿ, ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದ ಕನ್ನಡದ ಕೆಲವು ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ.

ಕಳೆದ ಒಂದೂವರೆ, ಎರಡು ವರ್ಷಗಳ ಕಾಲ ಶ್ರಮಪಟ್ಟು ಸಿನಿಮಾ ಮಾಡಿ, ಈಗ ಏಕಾಏಕಿ, ಬಿಡುಗಡೆಗೆ ಹೊರಟರೆ, ಮೊದಲು ಪೆಟ್ಟು ಬೀಳುವುದು ಉತ್ತರ ಕರ್ನಾಟಕ ಭಾಗದಲ್ಲಿ. ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ, ಇಂದಿಗೂ, ಕನ್ನಡದ ಅಷ್ಟೂ ಚಿತ್ರಗಳನ್ನು ಅತೀ ಹೆಚ್ಚು ಪ್ರೋತ್ಸಾಹಿಸುತ್ತಿರುವ ಉತ್ತರ ಕರ್ನಾಟಕದ ಮಂದಿ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರ ವೀಕ್ಷಿಸುವುದು ಕಷ್ಟ. ಇದನ್ನರಿತ ಕೆಲ ನಿರ್ಮಾಪಕ, ನಿರ್ದೇಶಕರು ತಮ್ಮ ಚಿತ್ರ ಬಿಡುಗಡೆಯನ್ನು ಒಂದು, ಎರಡು ತಿಂಗಳು ಮುಂದಕ್ಕೆ ಹಾಕಿವೆ.

ಒಂದೆರಡು ತಿಂಗಳು ಮುಂದಕ್ಕೆ: ಈಗಾಗಲೇ ಬಿಡುಗೆಯನ್ನು ಘೋಷಿಸಿರುವ ಚಿತ್ರಗಳು ಆಯಾ ದಿನಾಂಕದಂದು ಬರುತ್ತಿವೆಯಾದರೂ, ಮುಂದಕ್ಕೆ ಹೋಗುವ ಯೋಚನೆ ಮಾಡಿಲ್ಲ. ಕಾರಣ, ಪ್ರಚಾರ ಮಾಡಿದ್ದಾಗಿದೆ. ಹಾಗೇನಾದರೂ ಬಂದರೂ, ಉತ್ತರ ಕರ್ನಾಟಕ ಭಾಗದಲ್ಲಿ ಸ್ವಲ್ಪ ಗಳಿಕೆ ವಿಚಾರದಲ್ಲಿ ಪೆಟ್ಟು ಬೀಳಬಹುದೇ ಹೊರತು, ಬೇರೆಲ್ಲೂ ಸಮಸ್ಯೆ ಆಗಲ್ಲ ಎಂಬ ಗಟ್ಟಿಧೈರ್ಯದಿಂದ ಕೆಲವು ಚಿತ್ರಗಳು ಬಿಡುಗಡೆಯಾಗುತ್ತಿವೆ. “ಭರಾಟೆ’, “ಪೈಲ್ವಾನ’, ಹಿಂದಿಯ “ಸಾಹೋ’ ಚಿತ್ರಗಳು ಚಿತ್ರಮಂದಿರಕ್ಕೆ ಅಪ್ಪಳಿಸುತ್ತಿವೆ.

Advertisement

ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಎಷ್ಟರಮಟ್ಟಿಗೆ ಪೂರಕ ವಾತಾವರಣ ಇರುತ್ತೆ ಎಂಬುದನ್ನು ಹೇಳುವುದು ಕಷ್ಟ. ಏನೇ ಆದರೂ, ಸೆಪ್ಟೆಂಬರ್‌, ಮೊದಲ ಅಥವಾ ಎರಡನೇ ವಾರ ಇಲ್ಲವೇ ಮೂರು, ನಾಲ್ಕನೆ ವಾರಗಳಲ್ಲಿ ಬಿಡುಗಡೆ ಮಾಡಬೇಕು ಅಂತ ನಿರ್ಧರಿಸಿದ್ದ ಚಿತ್ರಗಳು ಸಹ ಈಗ ಹಿಂದೇಟು ಹಾಕುತ್ತಿವೆ. ಕಾರಣ, ಮತ್ತದೇ ಗಳಿಕೆ ಭಯ. ಹಾಗೆ ಹಿಂದಕ್ಕೆ ಹೋದ ಚಿತ್ರಗಳೆಂದರೆ, “ಮನೆ ಮಾರಾಟಕ್ಕಿದೆ’, “ಅಧ್ಯಕ್ಷ ಇನ್‌ ಅಮೆರಿಕ’ ಚಿತ್ರಗಳ ನಿರ್ಮಾಪಕ, ನಿರ್ದೇಶಕರು ತಮ್ಮ ಚಿತ್ರಗಳನ್ನು ತಿಂಗಳ ಬಳಿಕ ಬಿಡುಗಡೆ ಮಾಡಲು ಯೋಚಿಸಿದ್ದಾರೆ.

ಮೊದಲೇ ಹೇಳಿದಂತೆ, ಕನ್ನಡದ ಯಾವುದೇ ಚಿತ್ರವಿರಲಿ, ಉತ್ತರ ಕರ್ನಾಟಕ ಭಾಗವನ್ನೇ ಹೆಚ್ಚು ನಂಬಿಕೊಂಡಿದೆ. ಸ್ಟಾರ್‌ ಚಿತ್ರಗಳಿಗಂತೂ ಆ ಭಾಗದಲ್ಲಿ ಸಿಗುವಂತಹ ಸಹಕಾರ, ಪ್ರೋತ್ಸಾಹ ಬೇರೆಲ್ಲೂ ಹೆಚ್ಚಾಗಿ ಸಿಗಲ್ಲ. ಈ ಸತ್ಯ ಅರಿತ ಕೆಲವರು, ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿವೆ. ಅಲ್ಲಿ ಈಗ ಹೆಚ್ಚಿರುವ ಪ್ರವಾಹ ಸಮಸ್ಯೆ ಮೆಲ್ಲನೆ ತಣ್ಣಗಾದ ಬಳಿಕ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರೆ.

ಇನ್ನು, ಇದರ ನಡುವೆಯೇ, ಚಿತ್ರಮಂದಿರಗಳ ಸಮಸ್ಯೆ ಎದುರಾಗಬಹುದು ಎಂಬ ಕಾರಣಕ್ಕೆ, ಒಂದಷ್ಟು ಹೊಸಬರ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಮುಂದಾಗಿದ್ದು, ಈ ವಾರ ಬರೋಬ್ಬರಿ ಐದು ಪ್ಲಸ್‌ ಒಂದು ಚಿತ್ರ ಬಿಡುಗಡೆಯಾಗುತ್ತಿವೆ. ಪ್ರವಾಹ ಸಮಸ್ಯೆ ಅಂತ ಯೋಚಿಸಿತ್ತ ಕುಳಿತರೆ, ಮುಂದಿನ ದಿನಗಳಲ್ಲಿ ಸ್ಟಾರ್‌ಗಳ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತವೆ ಎಂಬ ಉದ್ದೇಶದಿಂದ, ಸಿಕ್ಕಷ್ಟು ಚಿತ್ರಮಂದಿರಗಳು ಸಿಗಲಿ, ನೋಡಿದಷ್ಟು ಜನ ನೋಡಲಿ ಅಂತ ಸಿನಿಮಾ ಬಿಡುಗಡೆಗೆ ಸಿದ್ಧರಾಗಿದ್ದಾರೆ.

“ಮನೆ ಮಾರಾಕ್ಕಿದೆ’ ಚಿತ್ರ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಆಗಸ್ಟ್‌ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವುದು ಬೇಡ ಅಂತ ನಿರ್ಮಾಪಕರು ನಿರ್ಧರಿಸಿ, ಸೆಪ್ಟೆಂಬರ್‌ ಅಂತ್ಯದಲ್ಲಿ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರೆ. ಕನ್ನಡ ಚಿತ್ರಗಳಿಗೆ ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು ಮೆಚ್ಚುಗೆ ಸಿಗುತ್ತದೆ. ಈಗ ಅಲ್ಲಿ ಅಂತಹ ಸಮಸ್ಯೆ ಇದ್ದಾಗಲೂ, ನಾವು ಬಿಡುಗಡೆ ಮಾಡಿದರೆ, ಅದು ನಮ್ಮ ಸ್ವಾರ್ಥ ಎನಿಸುತ್ತೆ. ಕಷ್ಟದಲ್ಲಿರುವ ಮಂದಿಗೆ ಮನರಂಜನೆ ಕೊಟ್ಟರೆ ಸರಿ ಇರುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ನಾವು ಬಿಡುಗಡೆ ಮಾಡುತ್ತಿಲ್ಲ. ಹಾಗಂತ, ಅಲ್ಲಿ ಚಿತ್ರಮಂದಿರಗಳ ಸಮಸ್ಯೆ ಎದುರಾಗುತ್ತೆ, ಗಳಿಕೆ ಭಯ ಇತ್ಯಾದಿ ಕಾರಣಗಳಿಗೆ ಸಿನಿಮಾ ಬಿಡುಗಡೆ ಮುಂದೆ ಹೋಗುತ್ತಿಲ್ಲ. ಇಂತಹ ಸಮಯದಲ್ಲಿ ಮನರಂಜನೆ ಬೇಡ ಎನಿಸಿ ಈ ನಿರ್ಧಾರ ಮಾಡಲಾಗಿದೆ.
-ಮಂಜು ಸ್ವರಾಜ್‌, ನಿರ್ದೇಶಕರು

ನಾವು ಕೂಡ “ಅಧ್ಯಕ್ಷ ಇನ್‌ ಅಮೆರಿಕ’ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದೇವೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ನಾವು ಸೆಪ್ಟೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಸುಮಾರು ಎರಡು ವರ್ಷದ ಶ್ರಮ ಚಿತ್ರಕ್ಕಿದೆ. ಈಗ ಬಿಡುಗಡೆಗೆ ಸಮಸ್ಯೆ ಏನೂ ಇರಲಿಲ್ಲ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡ ಚಿತ್ರಗಳಿಗೆ ಸಾಕಷ್ಟು ಬೆಂಬಲ ಸಿಗುತ್ತಿತ್ತು. ಈಗ ಅಲ್ಲಿ ಸಮಸ್ಯೆ ಹೆಚ್ಚಿದೆ. ಈ ವೇಳೆ ಬಿಡುಗಡೆ ಸರಿಯಲ್ಲ. ಅದರಲ್ಲೂ ಮನರಂಜನೆ ವಿಷಯ ಕಷ್ಟದ ಸಮಯದಲಿ ಬೇಡ ಎನಿಸಿತು. ಅದರಿಂದ ಗಳಿಕೆಗೂ ಸಮಸ್ಯೆ ಆಗಬಹುದು ಎಂಬ ನಿರ್ಧಾರ ಮಾಡಿ ಬಿಡುಗಡೆ ಮುಂದಕ್ಕೆ ಹಾಕಿದ್ದೇವೆ.
-ಯೋಗಾನಂದ್‌ ಮುದ್ದಾನ್‌, ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next