ಚಿಂಚೋಳಿ: ಕಾಳಗಿ ಮತ್ತು ಚಿಂಚೋಳಿ ತಾಲೂಕಿನಲ್ಲಿ ಎಡೆಬಿಡದೇ ಸುರಿದ ಮಳೆಯಿಂದಾಗಿ ನಾಶವಾದ ಬೆಳೆ ಹಾಗೂ ಮನೆಗಳಿಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪುರ ಮಾತನಾಡಿ, ಜೂನ್ ತಿಂಗಳಲ್ಲಿ ಮುಂಗಾರು ಮಳೆ ಆಗದೇ ಇರುವುದರಿಂದ ಬಿತ್ತನೆಗಾಗಿ ಖರೀದಿಸಿದ ಗೊಬ್ಬರ, ಬೀಜ ಹಾಳಾಗಿವೆ. ಜುಲೈ ತಿಂಗಳಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮವಾಗಿ ಬೆಳೆಗಳಲ್ಲಿ ಮಳೆ ನೀರು ನಿಂತು ಕೊಳೆತು ಹೋಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ತೇಗಲಮತಿ, ಹಲಚೇರಾ, ಗಡಿಕೇಶ್ವಾರ, ಸುಂಠಾಣ, ರುದನೂರ ಹಲವು ಗ್ರಾಮಗಳಲ್ಲಿ ಬಸವನ ಹುಳುಗಳ ಕಾಟದಿಂದ ಸೋಯಾಬಿನ್, ಹೆಸರು, ಉದ್ದು ಬೆಳೆಗಳು ಮೊಳಕೆಯಲ್ಲಿಯೇ ಹಾನಿಯಾಗಿವೆ. ಸರ್ಕಾರ ಬೆಳೆ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಮಾತನಾಡಿ, ಮಳೆಯಿಂದ ಅನೇಕರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ದಿನಬಳಕೆ ವಸ್ತುಗಳು, ಆಹಾರ ಧಾನ್ಯಗಳಿಗೆ ಹಾನಿಯಾಗಿದ್ದು, ಸರಕಾರ ಕಂದಾಯ ಇಲಾಖೆಯಿಂದ ಪರಿಹಾರ ಮತ್ತು ಆಹಾರ ಧಾನ್ಯದ ಕಿಟ್ ವಿತರಿಸಬೇಕೆಂದು ಒತ್ತಾಯಿಸಿದರು.
ಸೈಯದ್ ನಿಯಾಜ ಅಲಿ, ನಾಗೇಂದ್ರಪ್ಪ ಗುರಂಪಳ್ಳಿ, ಬಸವರಾಜ ಶಿರಸಿ, ಹಣಮಂತ ಪೂಜಾರಿ, ವಿಶ್ವನಾಥ ಮೂಲಗೆ, ಹಣಮಂತರೆಡ್ಡಿ ಬಕ್ಕಾ, ರಾಜಕುಮಾರ ದೋಟಿಕೊಳ, ರಾಧಾಕೃಷ್ಣ ಹೊಸಮನಿ, ಎಸ್. ಕೆ.ಮುಕ್ತಾ, ಶರಣಪ್ಪ ಮಾಳಗಿ, ಲಕ್ಷ್ಮೀಕಾಂತ ಸಿಂಧೆ, ರಮೇಶ, ಗುಂಡಪ್ಪ, ಬಕ್ಕಪ್ರಭುಗೌಡ, ಮಲ್ಲಿಕಾರ್ಜುನ ಪೂಜಾರಿ, ಸನ್ನಿ ಜಾಬಶೆಟ್ಟಿ, ರಾಹುಲ್ ಯಾಕಾಪುರ ಇನ್ನಿತರರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪುರ, ಅಧ್ಯಕ್ಷ ರವಿಶಂಕರ ಮುತ್ತಂಗಿ, ಗ್ರೇಡ್-2 ತಹಶೀಲ್ದಾರ್ ವೆಂಕಟೇಶ ದುಗ್ಗನ್ ಅವರಿಗೆ ಸಲ್ಲಿಸಿದರು.