Advertisement

ಪರಿಹಾರಕ್ಕಾಗಿ ಕೇಂದ್ರದ ಮೊರೆ; ಪ್ರವಾಹ ಹಾನಿ ಸಮಗ್ರ ವರದಿ ಶೀಘ್ರ ಸಲ್ಲಿಕೆ: ಸಿಎಂ BSY

01:33 AM Aug 26, 2020 | mahesh |

ಬೆಳಗಾವಿ/ಬಾಗಲಕೋಟೆ/ವಿಜಯಪುರ: ಕಳೆದ ವರ್ಷದ ಪ್ರವಾಹ ಸ್ಥಿತಿಯ ಕಹಿನೆನಪು ಮಾಸುವ ಮುನ್ನವೇ ಮತ್ತೂಂದು ಪ್ರವಾಹ ಎದುರಿಸಿರುವ ಉತ್ತರ ಕರ್ನಾಟಕದಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸಂಕಷ್ಟ ಎದುರಿಸುತ್ತಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

Advertisement

ಮಂಗಳವಾರ ಅವರು ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧ್‌ಗಂಗಾ ನದಿಗಳ ಆರ್ಭಟಕ್ಕೆ ಕೊಚ್ಚಿಹೋದ ಬದುಕಿನ ಪರಿಶೀಲನೆ ನಡೆಸಿದರು. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದರು.

ಹಾನಿಯ ಸಮಗ್ರ ವರದಿಯನ್ನು ಶೀಘ್ರದಲ್ಲೇ ಕೇಂದ್ರಕ್ಕೆ ಕಳುಹಿಸಲಾಗುವುದು. ಅಲ್ಲದೆ ನೆರೆ ನಿರ್ವಹಣೆಗಾಗಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಮುಂದಿನ ವಾರ ದಿಲ್ಲಿಗೆ ತೆರಳಿ ಮನವಿ ಮಾಡಲಾಗುವುದು ಎಂದು ಹೇಳಿದರು.

ಶೀಘ್ರವೇ ಎಲ್ಲ ಶಾಸಕರ ಸಭೆ ಕರೆದು ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡಲು ಯೋಜನೆ ರೂಪಿಸಲಾಗುವುದು. ಅಲ್ಲದೆ ಎಲ್ಲ ಮಾಹಿತಿಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು. ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತತ್‌ಕ್ಷಣ ಸರಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ, ಪ್ರವಾಹ ನಿರ್ವಹಣೆ ಮತ್ತಿತರ ತುರ್ತು ಕೆಲಸಗಳಿಗೆ ಬೆಳಗಾವಿ ಜಿಲ್ಲೆಯಲ್ಲಿ 412 ಕೋಟಿ ರೂ. ಅನುದಾನ ಲಭ್ಯವಿದೆ. ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ 174 ಕೋಟಿ ರೂ. ಲಭ್ಯವಿದೆ. ಮನೆ ಕಳೆದುಕೊಂಡ 44,156 ಫಲಾನುಭವಿಗಳಿಗೆ 488 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ಇದೇ ರೀತಿ ಉಳಿದ ಜಿಲ್ಲೆಗಳಲ್ಲಿ ಸಾಕಷ್ಟು ಹಣ ಲಭ್ಯವಿದೆ. ಆಯಾ ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತತ್‌ಕ್ಷಣ ಸರಕಾರಕ್ಕೆ ಕಳುಹಿಸಬೇಕು ಎಂದರು.

Advertisement

2-3 ತಿಂಗಳಲ್ಲಿ ಆರ್ಥಿಕತೆ ಸುಧಾರಣೆ
ಇನ್ನೆರಡು-ಮೂರು ತಿಂಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲವಾದರೂ ಯಾವುದೇ ಅಗತ್ಯ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿಲ್ಲ. ಸರಕಾರಿ ನೌಕರರಿಗೆ ವೇತನ ನೀಡಲಾಗಿದೆ ಎಂದು ನೆರೆ ಹಾನಿ ವೀಕ್ಷಣೆಗೆ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಹೇಳಿದರು. ಕಳೆದ ವರ್ಷ ಪ್ರವಾಹ ಮತ್ತು ಅತಿವೃಷ್ಟಿಯಿಂದ ಹಾನಿಗೆ ಒಳಗಾಗಿರುವ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಸಂತ್ರಸ್ತರ ಖಾತೆಗೆ ಹಂತ ಹಂತವಾಗಿ ಪರಿಹಾರ ನೀಡಲಾಗುತ್ತಿದೆ. ಈ ವರ್ಷದ ಹಾನಿ ಸಮೀಕ್ಷೆ ಪ್ರಗತಿಯಲ್ಲಿದೆ. ಈ ಬಾರಿಯೂ ಅತಿವೃಷ್ಟಿಯಿಂದ ರಸ್ತೆ, ಸೇತುವೆ, ಬೆಳೆ ಮತ್ತು ಮನೆಗಳಿಗೆ ಅಪಾರ ಹಾನಿಯಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಬೆಳೆ ಹಾನಿ ಪರಿಹಾರ ಕಲ್ಪಿಸಲಾಗುವುದು. ಈ ಸಂಬಂಧ ಸದ್ಯದಲ್ಲೇ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಹಾನಿಯ ಸಂಪೂರ್ಣ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.

ಸೆಪ್ಟಂಬರ್‌ನಲ್ಲಿ ಮೋದಿ ಭೇಟಿ
ಕೃಷ್ಣಾ ಮೇಲ್ದಂಡೆ ಯೋಜನೆಗೆ ಆರ್ಥಿಕ ನೆರವು ನೀಡುವಂತೆ ಮುಂದಿನ ತಿಂಗಳು ಪ್ರಧಾನಿ ಭೇಟಿ ಮಾಡಿ ಮನವಿ ಮಾಡುತ್ತೇನೆ. ರಾಜ್ಯದ ಪಾಲಿನ ಜಿಎಸ್‌ಟಿ ಹಣ ನೀಡುವಂತೆ ಸಚಿವರಾದ ನಿರ್ಮಲಾ ಸೀತಾರಾಮನ್‌, ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಶೀಘ್ರ
ಆ ಹಣ ಬರಲಿದೆ ಎಂದು ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next