ಬೆಂಗಳೂರು: ಸುಪ್ರಸಿದ್ಧ ಘಟಂ ಕಲಾವಿದ ವಿಕ್ಕು ವಿನಾಯಕರಾಮ್ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಯಶವಂತಪುರದ ಸುನಾದಂ ಟ್ರಸ್ಟ್ ಡಿ.10ರಂದು ನಗರದಲ್ಲಿ “ನಾದ ಪ್ರವಾಹ’ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನಾದಂ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸುಕನ್ಯಾ ರಾಮಗೋಪಾಲ್, ನಾದ ಪ್ರವಾಹ ಸಂಗೀತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಸಹಭಾಗಿತ್ವದಲ್ಲಿ
ಅಂದು ಸಂಜೆ 5 ಗಂಟೆಗೆ ಕೆ.ಆರ್.ರಸ್ತೆಯ ಗಾಯನ ಸಮಾಜದಲ್ಲಿ ಕಾರ್ಯಕ್ರಮ ನಡೆಯಲಿದೆ. ಪದ್ಮಭೂಷಣ ಮತ್ತು ಗ್ರಾಮಿ ಪ್ರಶಸ್ತಿ ವಿಜೇತ ವಿಕ್ಕು ವಿನಾಯಕರಾಮ್ ಅವರ 75ನೇ ಹುಟ್ಟು ಹಬ್ಬದ ಅಂಗವಾಗಿ ದೇಶದ ವಿವಿಧಡಗಳಿಂದ 75 ಹೆಸರಾಂತ ಘಟಂ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಕಲಾಶ್ರೀ ಡಾ.ಎಲ್.ಭೀಮಾಚಾರ್, ಸಂಗೀತ ಕಲಾರತ್ನ ಮೈಸೂರು ವಿ. ಸುಬ್ರಮಣ್ಯ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಡಾ.ದೀಪ್ತಿ ನವರತ್ನ, ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ ಪ್ರಸಾದ್ ಭಾಗವಹಿಸಲಿದ್ದಾರೆ.
ಇದೇ ವೇಳೆ ವಿಕ್ಕು ವಿನಾಯಕರಾಮ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕದ ಘಟಂ ಕಲಾವಿದರಾದ ಗಿರಿಧರ್ ಉಡುಪ, ಸುಕನ್ಯಾ ರಾಮಗೋಪಾಲ್, ರಂಗನಾಥ್ ಚಕ್ರವರ್ತಿ, ಶ್ರೀಶೈಲ ಸೇರಿ ಹಲವರು ಪಾಲ್ಗೊಳಲಿದ್ದಾರೆ ಎಂದು ಹೇಳಿದರು.