ವಾಡಿ (ಚಿತ್ತಾಪುರ): ತಾಲೂಕಿನ ವ್ಯಾಪ್ತಿಯಲ್ಲಿ ಭೀಮಾನದಿ ಮತ್ತು ಕಾಗಿಣಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ನದಿ ದಂಡೆಯ ಹಲವು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಕಡಬೂರ ಗ್ರಾಪಂ ವ್ಯಾಪ್ತಿಯ ಚಾಮನೂರ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಪ್ರವಾಹ ಭೀತಿಯ ಈ ಹಳ್ಳಿಯಲ್ಲಿ ಜನರು ಕೆಸರುಗದ್ದೆಯ ರಸ್ತೆಯಲ್ಲಿ ಸಾಗಿ ನೀರು ತರುತ್ತಿದ್ದಾರೆ. ತುಂಬಿ ಹರಿಯುತ್ತಿರುವ ಭೀಮಾನದಿ ಪಾತ್ರಕ್ಕಿಳಿಯುತ್ತಿರುವ ಮಹಿಳೆಯರು, ಮಕ್ಕಳು, ವಯಸ್ಕರು ಹೂಳಿನಲ್ಲಿ ಸಾಗಿ ನೀರು ಪಡೆಯುತ್ತಿದ್ದಾರೆ.
ಇದನ್ನೂಓದಿ:ಕಾವೇರಿ ನದಿಗೆ KRSನಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ :ನದಿ ಪಾತ್ರದ ಜನರಿಗೆ ಎಚ್ಚರಿಕೆ
ಗ್ರಾಮದ ನೀರು ಸರಬರಾಜು ಮೋಟಾರು ಕೆಟ್ಟು ವಾರ ಕಳೆದರೂ ಅಧಿಕಾರಿಗಳು ರಿಪೇರಿಗೆ ಮುಂದಾಗದ ಕಾರಣ ಜಲ ಸಂಕಟ ಎದುರಾಗಿದೆ. ಹೊಲಗಳು ಮತ್ತು ಊರುಗಳು ಮುಳುಗುವಷ್ಟು ನದಿಯಲ್ಲಿ ನೀರಿದ್ದರೂ ಚಾಮನೂರು ಗ್ರಾಮಸ್ಥರಿಗೆ ಕುಡಿಯಲು ಹನಿ ನೀರು ಸಿಗದಂತಾಗಿದೆ.
ನರಕ ಸದೃಶ್ಯ ನದಿಯ ರಸ್ತೆಯಲ್ಲಿ ನೀರಿಗಾಗಿ ಏಳುಬೀಳು ನಡೆಸುತ್ತ ಜನಪ್ರತಿನಿಧಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ಕೂಡಲೇ ಕುಡಿಯುವ ನೀರಿನ ಗೋಳು ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.