ಆಂಧ್ರ ಪ್ರದೇಶ : ಪುಲಿಚಿಂತಲ ಅಣೆಕಟ್ಟಿನ ಗೇಟ್ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಆಂಧ್ರದ ಕೃಷ್ಣಾ ಜಿಲ್ಲೆಯಲ್ಲಿ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಕೆಲವು ತಾಂತ್ರಿಕ ಸಮಸ್ಯೆಯಿಂದ ಗೇಟ್ ಅಣೆಕಟ್ಟಿನ ಒಳಹರಿವಿಗೆ ಕೊಚ್ಚಿ ಹೋಗಿದ್ದು, ಈಗ ಪ್ರವಾಹದ ಭೀತಿ ಎದುರಾಗಿದೆ.
ಕೃಷ್ಣಾ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗುವಸಾಧ್ಯತೆಯ ಹಿನ್ನೆಲೆಯಲ್ಲಿ ನದಿ ತೀರವಾಸಿಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಮೇಕೆದಾಟು ವಿಚಾರವಾಗಿ ಯಾರೇ ಪ್ರತಿಭಟನೆ ಮಾಡಿದರೂ ನಮಗೆ ಸಂಬಂಧವಿಲ್ಲ: ಬೊಮ್ಮಾಯಿ
ಈ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣಾ ಜಿಲ್ಲಾಧಿಕಾರಿ, ಜೆ. ನಿವಾಸ್, ಅಣೆಕಟ್ಟಿನ ಹದಿನಾರನೇ ಗೇಟ್ ನಲ್ಲಿ ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಗೇಟ್ ಕೊಚ್ಚಿ ಹೋಗಿದೆ. ತಡರಾತ್ರಿ 3.30 ರ ಹೊತ್ತಿಗೆ ಈ ಘಟನೆ ಸಂಭವಿಸಿದ್ದು, ಸ್ಟಾಪ್ ಲಾಕ್ ಗೇಟ್ ನಿಂದ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಈ ಉದ್ದೇಶಕ್ಕಾಗಿ, ಅಣೆಕಟ್ಟಿನಿಂದ ನೀರನ್ನು ಬಿಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎಂಟರಿಂದ 12 ಗಂಟೆಗಳಲ್ಲಿ ಸುಮಾರು ಐದು ಲಕ್ಷ ಕ್ಯೂಸೆಕ್ ನೀರು ಪ್ರಕಾಶಂ ಬ್ಯಾರೇಜ್ ತಲುಪಲಿದೆ. “ನದಿ ಪ್ರದೇಶದ ಬಳಿ ಜನರು ಜಾಗರೂಕರಾಗಿರಬೇಕು. ಅವರು ನದಿಗೆ ಹೋಗಬಾರದು. ಅವರು ತಮ್ಮ ಪ್ರಾಣಿಗಳು ಮತ್ತು ದೋಣಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ತಗ್ಗು ಪ್ರದೇಶಗಳಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಸೂಚಿಸಲು ಎಲ್ಲಾ ತಹಸೀಲ್ದಾರ್ ಗಳು ಮತ್ತು ಕಂದಾಯ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇಂದು (ಗುರುವಾರ, ಆಗಸ್ಟ್ 5) ಬೆಳಿಗ್ಗೆ ಪುಲಿಚಿಂತಲ ಅಣೆಕಟ್ಟೆಯಲ್ಲಿ ಹೊರಹರಿವು 2,00,804 ಕ್ಯೂಸೆಕ್ ಮತ್ತು ಒಳಹರಿವು 1,10,000 ಕ್ಯೂಸೆಕ್ ಗಳಷ್ಟಿದೆ. ಪ್ರಕಾಶಂ ಬ್ಯಾರೇಜ್ ನಲ್ಲಿ ಹೊರಹರಿವು 33,750 ಕ್ಯೂಸೆಕ್ ಇದ್ದರೆ ಒಳಹರಿವು 41,717 ಕ್ಯೂಸೆಕ್ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಸಂಪುಟದಲ್ಲಿ ಸಿಎಂ ಬೊಮ್ಮಾಯಿ ಬ್ಯಾಲೆನ್ಸ್: ಬಿಎಸ್ ವೈ- ಹೈಕಮಾಂಡ್ ಕೊಂಡಿ