Advertisement

ನೆರೆ ಪೀಡಿತ ಗ್ರಾಮ ದತ್ತು ಪಡೆದ ಸಿನೆಮಾ ತಂಡ

11:50 AM Jan 19, 2020 | Suhan S |

ಬಾಗಲಕೋಟೆ: ಕಳೆದ ವರ್ಷ ಆಗಸ್ಟ್‌ನಲ್ಲಿ ಜಿಲ್ಲೆಯ 105 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅಪ್ಪಳಿಸಿದ ಭಾರಿ ಪ್ರವಾಹಕ್ಕೆ ನಲುಗಿದ್ದ ಜಿಲ್ಲೆಯ ಗ್ರಾಮವನ್ನು ಸಿನೆಮಾ ತಂಡ ದತ್ತು ಪಡೆದು, ಸಮಗ್ರ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

Advertisement

ಮೊದಲ ಭಾಗವಾಗಿ ರವಿವಾರ ರಾತ್ರಿ ನಾಯಕ ನಟ-ನಟಿ ಸಹಿತ ಇಡೀ ಸಿನೆಮಾ ತಂಡ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದು, ಗ್ರಾಮಸ್ಥರೊಂದಿಗೆ ಬೆರೆತು ಸಮಸ್ಯೆ ಅರಿಯಲಿದೆ. ಹೌದು, ಕಳೆದ ವರ್ಷ ಮಲಪ್ರಭಾ ನದಿ ಪ್ರವಾಹಕ್ಕೆ ನಲುಗಿದ ಬಾದಾಮಿ ತಾಲೂಕು ಕರ್ಲಕೊಪ್ಪ ಗ್ರಾಮವನ್ನು 7ಹಿಲ್ಸ್‌ ಸ್ಟುಡಿಯೋ ಅಡಿ ನಿರ್ಮಾಣಗೊಂಡ 3ರ್ಡ್‌ ಕ್ಲಾಸ್‌ ಸಿನೆಮಾ ತಂಡ ದತ್ತು ಪಡೆದಿದೆ. ಈ ತಂಡ ಈಗಾಗಲೇ ಗಾಮಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಕುರಿತು ಅವಲೋಕನ ಮಾಡಿದ್ದು, ದತ್ತು ಗ್ರಾಮದಲ್ಲಿ ಮೊದಲ ಭಾಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ.

ಗ್ರಾಮ ವಾಸ್ತವ್ಯ: ಸಿನೆಮಾ ತಂಡವೊಂದು ಗ್ರಾಮ ವಾಸ್ತವ್ಯದ ಮೂಲಕ ಗ್ರಾಮೀಣ ಸಮಸ್ಯೆ ಅರಿತು, ಕೈಲಾದಷ್ಟು ಪರಿಹಾರ ಕಾರ್ಯ ಕೈಗೊಳ್ಳಲು ಕನ್ನಡ ಸಿನೆಮಾ ರಂಗದಲ್ಲಿ ಇದೇ ಮೊದಲ ಪ್ರಯತ್ನವಾಗಿ 3ರ್ಡ್‌ ಕ್ಲಾಸ್‌ ಚಿತ್ರ ತಂಡ ಹೆಜ್ಜೆ ಇಟ್ಟಿದೆ. ಸಿನೆಮಾದ ನಾಯಕ ನಟ ಹಾಗೂ ನಿರ್ಮಾಪಕ ನಮ್ಮ ಜಗದೀಶ, ನಟಿ ರೂಪಿಕಾ, ಸಹ ನಿರ್ಮಾಪಕ ನಂದನ್‌ ಸಹಿತ ಚಿತ್ರ ತಂಡದ ಹಲವು, ರವಿವಾರ ಸಂಜೆ 7ಕ್ಕೆ ಗ್ರಾಮಕ್ಕೆ ತೆರಳಿ ವಾಸ್ತವ್ಯ ಮಾಡಲಿದ್ದಾರೆ. ಅಂದು ಗ್ರಾಮದ ಶಾಲಾ ಮಕ್ಕಳ ಪ್ರತಿಭೆ ಅನಾವರಣ, ಹಳ್ಳಿಗರ ಸಂಸ್ಕೃತಿ, ಅಲ್ಲಿನ ಸಮಸ್ಯೆ ಕುರಿತು ಚರ್ಚೆ ಮಾಡಲಿದೆ. ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿ, ಸೋಮವಾರ ಬೆಳಗ್ಗೆ ಶಾಲಾ ಕಟ್ಟಡ ನಿರ್ಮಾಣದಲ್ಲಿ ಈ ತಂಡವೂ ಶ್ರಮದಾನ ಮಾಡಲಿದೆ. ಮುಖ್ಯವಾಗಿ ನಟ ನಮ್ಮ ಜಗದೀಶ ಅವರ ಸ್ನೇಹ ಬಳಗದಲ್ಲಿರುವ ಸುಮಾರು 25ಕ್ಕೂ ಹೆಚ್ಚು ಭಾರತೀಯ ಸೈನಿಕರು, ಮಾಜಿ ಸೈನಿಕರೂ ಶ್ರಮದಾನ ಮಾಡಲಿರುವುದು ವಿಶೇಷ.

ಮಾದರಿ ಗ್ರಾಮಕ್ಕೆ ನಿರ್ಧಾರ: ಪ್ರವಾಹದ ವೇಳೆ ಮನೆತುಂಬ ನೀರು ಹೊಕ್ಕು ತೀವ್ರ ಸಮಸ್ಯೆ ಅನುಭವಿಸಿದ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ, 3ರ್ಡ್‌ ಕ್ಲಾಸ್‌ ಚಿತ್ರ ತಂಡದ ನಡೆ, ಗ್ರಾಮದ ಕಡೆ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ಗ್ರಾಮ ದತ್ತು ಪಡೆದಿದ್ದು, ಎರಡುಶಾಲಾ ಕೊಠಡಿ, ಕಂಪೌಂಡ್‌, ಮಕ್ಕಳಿಗೆ ಆಟಿಗೆ ಸಾಮಗ್ರಿ, ಸ್ಮಾರ್ಟ್‌ ಕ್ಲಾಸ್‌ ಹೀಗೆ ಹಲವು ರೀತಿಯ ಸೌಲಭ್ಯವನ್ನು ಸರ್ಕಾರಿ ಶಾಲೆಗೆ ಒದಗಿಸಲು ನಿರ್ಧರಿಸಿದೆ.

ಲಾಭ ಗಳಿಸುವ ಒಂದೇ ಉದ್ದೇಶದಿಂದ ಸಿನೆಮಾ ಮಾಡಿಲ್ಲ. ಜನರಿಂದ ಬರುವ ದುಡ್ಡನ್ನು ಜನರಿಗೆ ಬಳಸಬೇಕೆಂಬುದು ನಮ್ಮಗುರಿ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಆಟೋ-ಕ್ಯಾಬ್‌ ಚಾಲಕರಿಗೆ ಆರೋಗ್ಯ ಮತ್ತು ಜೀವ ವಿಮೆ ಮಾಡಿಸಿದ್ದು, ರಾಜ್ಯದ ವಿವಿಧ ಭಾಗದ 150ಕ್ಕೂ ಹೆಚ್ಚು ಅಂಧ-ಅನಾಥ ಮಕ್ಕಳ ಶಾಲೆ ದತ್ತು ಪಡೆದು, ಸಿನೆಮಾದ ಮೊದಲ ದಿನದ ಮೊದಲ ಶೋನ ಹಣ, ಆ ಶಾಲೆಗಳಿಗೆ ನೀಡಲಾಗುವುದು. ಈಗ ಪ್ರವಾಹ ಪೀಡಿತ ಗ್ರಾಮ ದತ್ತು ಪಡೆದು, ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು, ಗ್ರಾಮಸ್ಥರು-ಜಿಲ್ಲಾಡಳಿತ ಬಹಳ ಸಹಕಾರ ನೀಡಿದೆ. ನಮ್ಮ ಜಗದೀಶ, ನಿರ್ಮಾಪಕ ಹಾಗೂ ನಾಯಕ ನಟ

Advertisement

 ಪ್ರವಾಹಕ್ಕೆ ಒಳಗಾದ ಕರ್ಲಕೊಪ್ಪ ಗ್ರಾಮಕ್ಕೆ ನಾನೂ ಭೇಟಿ ನೀಡಿದ್ದು, ಅಲ್ಲಿನ ಸಮಸ್ಯೆ ನೋಡಿ ಬೇಸರವೆನಿಸಿತು. ಒಂದು ದಿನ ಗ್ರಾಮಸ್ಥರೊಂದಿಗೆ ವಾಸ್ತವ್ಯವಿದ್ದು, ಮರುದಿನ ಶಾಲಾ ಕಟ್ಟಡ ನಿರ್ಮಾಣಕ್ಕೆ ನನ್ನ ಕೈಲಾದಷ್ಟು ಶ್ರಮದಾನ ಮಾಡಲು ನಿರ್ಧರಿಸಿದ್ದೇನೆ. ನಮ್ಮ ಚಿತ್ರ ತಂಡ, ಸಾಮಾಜಿಕ ಕಳಕಳಿಯೊಂದಿಗೆ ಹೆಜ್ಜೆ ಇಟ್ಟಿದ್ದು, ಈ ಕೆಲಸದಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯವೆಂದುಕೊಂಡಿದ್ದೇನೆ.  –ರೂಪಿಕಾ,ನಟಿ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next