Advertisement
ಕಾಂಬೋಡಿಯಾದಲ್ಲಿರುವ ಟಾನ್ಲ ಸಾಪ್ ಸರೋವರ ಆಗ್ನೇಯ ಏಷ್ಯಾದಲ್ಲೇ ಅತಿ ದೊಡ್ಡದು. 150 ಕಿ. ಮೀ. ಉದ್ದ 100 ಕಿ. ಮೀ. ಅಗಲ ಮತ್ತು ಸುಮಾರು 14 ಮೀ. ಆಳವಿರುವ ಈ ಸರೋವರಕ್ಕೆ ದೇಶದ ಸಂಸ್ಕೃತಿ ಮಾತ್ರವಲ್ಲ , ನಿತ್ಯದ ಜನಜೀವನದಲ್ಲೂ ವಿಶೇಷ ಸ್ಥಾನ. ಖೆರ್ ಭಾಷೆಯಲ್ಲಿ ಟಾನ್ಲ ಸಾಪ್ ಎಂದರೆ ದೊಡ್ಡ ಸಿಹಿನೀರಿನ ನದಿ ಎಂದರ್ಥ. ಟಿಬೆಟಿನ ಪ್ರಸ್ಥಭೂಮಿಯಿಂದ ಹುಟ್ಟಿ ಹರಿಯುವ ಮೆಕಾಂಗ್ ನದಿಯಿಂದ ನೀರನ್ನು ಪಡೆಯುವ ಈ ಸರೋವರದಲ್ಲಿ ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಾಗಿ ಕುಗ್ಗುತ್ತದೆ. ಮಳೆಗಾಲದಲ್ಲಿ ನದಿಯ ನೀರು ಮತ್ತು ಮಳೆಯಿಂದ ಐದು ಪಟ್ಟು ಹಿಗ್ಗಿ ಅಗಾಧವಾದ ಜಲರಾಶಿಯಾಗುತ್ತದೆ. ಹೀಗಾದಾಗ ಹೂಳು, ಸರೋವರದ ಅಡಿಯಲ್ಲಿ ಶೇಖರಣೆಯಾಗುತ್ತದೆ. ಬೇಸಿಗೆಯಲ್ಲಿ ನೀರಿನ ಪ್ರಮಾಣ ಇಳಿಮುಖವಾದಾಗ ಈ ಫಲವತ್ತಾದ ಜೌಗಿನಲ್ಲಿ ಭತ್ತ, ಹುರುಳಿಕಾಯಿ, ಕಲ್ಲಂಗಡಿಯನ್ನು ಬೆಳೆಯುವುದರಿಂದ ಅಲ್ಲೆಲ್ಲಾ ಹಸಿರು.ಇದಲ್ಲದೇ ಸಿಹಿನೀರಿನಲ್ಲಿ ಸುಮಾರು ಇನ್ನೂರು ಬಗೆಯ ಮೀನಿನ ಪ್ರಬೇಧಗಳು, ಹಾವು, ಮೊಸಳೆ, ಬೆಕ್ಕಿನ ಮುಖದ ಮೀನುಗಳು ಹಾಗೂ ನೂರಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಇರುವುದರಿಂದ ಈ ಸರೋವರ, ಜೀವವೈವಿಧ್ಯದ ತಾಣ.
ಕಾಂಬೋಡಿಯಾದ ಮುಖ್ಯ ನಗರ ಮತ್ತು ಪ್ರವಾಸೀ ತಾಣ ಸಿಯಾಮ್ ರೀಪ್‌ನಿಂದ ಸುಮಾರು ಇಪ್ಪತ್ತರಿಂದ ಐವತ್ತು ಕಿ. ಮೀ. ದೂರದಲ್ಲಿ ಅನೇಕ ತೇಲುವ ಹಳ್ಳಿಗಳನ್ನು ಕಾಣಬಹುದು.ಅವುಗಳಲ್ಲಿ ಒಂದು ಕಾಂಪಾಂಗ್ ಕ್ಲೀಂಗ್. ಕಾಂಬೋಡಿಯಾದ ದೇಗುಲ ಸಮುಚ್ಚಯಗಳ ಜತೆ ಈ ತೇಲುವ ಹಳ್ಳಿಗಳು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ. ನಗರದಿಂದ ಟುಕ್‌ಟುಕ್‌ಗಳಲ್ಲಿ (ರಿಕ್ಷಾ) ಬಂದು ದೋಣಿಗಳಲ್ಲಿ ಕಿರಿದಾದ ದಾರಿಯಲ್ಲಿ ಪಯಣಿಸುತ್ತಿದ್ದ ಹಾಗೆ ಕಣ್ಣಿಗೆ ಬೀಳುತ್ತದೆ ವಿಚಿತ್ರವೆನಿಸುವ ದೃಶ್ಯ.ಇಡೀ ಹಳ್ಳಿಗೆ ಹಳ್ಳಿಯೇ ನೀರಿನ ಮೇಲೆ ನಿಂತಿದೆ ! ಅಂದರೆ ಉದ್ದವಾದ ಮಣೆಗೋಲುಗಳ ಮೇಲೆ ಬಿದಿರಿನ ವೇದಿಕೆ ನಿರ್ಮಿಸಿ ಅದರ ಆಧಾರ ಪಡೆದು, ಗರಿಯ ಮಾಡು ಅಥವಾ ಶೀಟ್ ಹೊದಿಸಿ ಕಟ್ಟಿದ ನೂರಾರು ಮನೆಗಳಲ್ಲಿ ಜನರು ವಾಸವಾಗಿ¨ªಾರೆ. ಇವುಗಳಲ್ಲಿ ಕೆಲವು ಮಹಡಿ ಮನೆಗಳೂ ಇವೆ! ಸುಮಾರು ಐನೂರು ಕುಟುಂಬ ಗಳಿಗೆ ಇದೇ ಸರೋವರವೇ ಹಳ್ಳಿ, ಇವೇ ಮನೆ! ಹಳ್ಳಿಯೊಂ ದರಲ್ಲಿ ಜನರ ನಿತ್ಯ ಜೀವನಕ್ಕೆ ಬೇಕಾಗುವ ಎಲ್ಲಾ ವಸ್ತು, ನಡೆಯುವ ವ್ಯವಹಾರಗಳೂ ಇಲ್ಲಿ ನಡೆಯುತ್ತವೆ. ದೋಣಿಯ ಮೂಲಕ ಸಾಮಾನು ಮಾರಾಟ, ತೇಲುವ ಮನೆಗಳಲ್ಲಿ ಮಕ್ಕಳಿಗೆ ಶಾಲೆ, ಪ್ರಾರ್ಥನೆಗೆ ದೇಗುಲ, ಬಿಸಿ ಕರಿದ ತಿಂಡಿ ಮಾರುವ ಬೇಕರಿ, ಮಣಿಸರದ ಫ್ಯಾನ್ಸಿ ಶಾಪ್ ಎಲ್ಲವೂ! ಅದಕ್ಕೆ ಹೋಗುವ ಮಾರ್ಗ ದೋಣಿ ಅಥವಾ ಈಜು. ಅತಂತ್ರ ಬದುಕು
ತೇಲುವ ಹಳ್ಳಿಗಳಲ್ಲಿ ಈ ಜನರು ಇರುವುದು ಸರಿ;ಆದರೆ ನೆಲ ಬಿಟ್ಟು ಇಲ್ಲೇಕೆ ಈ ಸಾಹಸ ಎಂಬ ಸಂಶಯ ಮೂಡುತ್ತದೆ.ಆದರಿದು ಸಾಹಸವಲ್ಲ, ಅನಿವಾರ್ಯತೆ. 19 ನೆಯ ಶತಮಾನದ ಮಧ್ಯಭಾಗದಲ್ಲಿ ಕಾಂಬೋಡಿಯಾದಲ್ಲಿ ಫ್ರೆಂಚ್ ಆಳ್ವಿಕೆಯಿತ್ತು. ಆಗ ಆಡಳಿತದ ಕೆಲಸಕ್ಕಾಗಿ ಲಕ್ಷಾಂತರ ಜನರನ್ನು ಪಕ್ಕದ ದೇಶ ವಿಯೆಟ್ನಾಂನಿಂದ ಕಾಂಬೋಡಿಯಾಕ್ಕೆ ಕರೆತರಲಾಯಿತು. ಕೆಲಸ ಮಾಡುತ್ತ ಇಲ್ಲಿಯೇ ಅವರೆಲ್ಲಾ ನೆಲೆಯೂರಿದರು.ಮಕ್ಕಳು ಮೊಮ್ಮಕ್ಕಳು ಹೀಗೆ ಸಂಸಾರ ಬೆಳೆಯಿತು.ಆದರೆ 1975 ರಲ್ಲಿ ಖೆರ್ ಆಳ್ವಿಕೆ ಶುರುವಾದಾಗ ವಿಯೆಟ್ನಾಂ ಜನರನ್ನು ಬಲವಂತವಾಗಿ ಹೊರದೂಡಿದರು. ಸಾವಿರಾರು ಜನರ ಹತ್ಯೆಯೂ ನಡೆಯಿತು. ಆ ಸಂದಿಗ್ಧ ಸಮಯದಲ್ಲಿ ಕಾಗದಪತ್ರಗಳನ್ನು ನಾಶಪಡಿಸಲಾಗಿತ್ತು. 1980ರಲ್ಲಿ ಮತ್ತೆ ಅಳಿದುಳಿದ ವಿಯೆಟ್ನಾಮ್ ಜನರಿಗೆ ಮರಳಿ ಕಾಂಬೋಡಿಯಾಕ್ಕೆ ಬರಲು ಪರವಾನಿಗೆ ದೊರೆಯಿತು. ಆದರೆ ಅವರನ್ನು ವಲಸೆಗಾರರು ಎಂದು ನಿರ್ಣಯಿಸಲಾಯಿತು. ನಿವಾಸಿಗಳೆಂದು ತೋರಿಸುವ ಸರಿಯಾದ ಕಾಗದ ಪತ್ರಗಳಿಲ್ಲದೇ ಕಾಂಬೋಡಿಯಾದಲ್ಲಿ ಯಾರೂ ನೆಲ ಖರೀದಿಸುವಂತಿಲ್ಲ. ಮೂಲತಃ ವಿಯೆಟ್ನಾಮ್ ದೇಶದವರು ನಿಜ,ಆದರೆ ಹುಟ್ಟಿದ್ದು ಬೆಳೆದಿದ್ದು ಇಲ್ಲಿಯೇ. ಬಿಟ್ಟು ಹೋಗುವುದೆಲ್ಲಿ, ಇದ್ದು ಮಾಡುವುದೇನು ಎಂದು ತಿಳಿಯದ ಅತಂತ್ರ ಸ್ಥಿತಿ ! ಕಡೆಗೆ ಕಂಡುಕೊಂಡ ದಾರಿ, ಇರಲು ಮುಕ್ತವಾದ, ಯಾವ ತೆರಿಗೆಯೂ ಇಲ್ಲದ ಸರೋವರದಲ್ಲಿ ಮನೆ ಕಟ್ಟಿ ವಾಸ, ಮೀನು ಮಾರಿ ಜೀವನ ನಿರ್ವಹಣೆ.
Related Articles
ಕೃತಕ ಹೂವುಗಳು, ಒಣಗಲು ಹರವಿದ ಬಣ್ಣ ಬಣ್ಣದ ಬಟ್ಟೆ, ವಿವಿಧ ವಿನ್ಯಾಸದ ಪಾತ್ರೆ, ಕರಿದ-ಹುರಿದ ಪರಿಮಳ, ಮಕ್ಕಳ ನಗು-ಅಳುವಿನ ಸದ್ದು ಹೀಗೆ ದೂರದಿಂದ ಆಕರ್ಷಕವಾಗಿ ಈ ಮನೆಗಳು ಕಾಣುತ್ತವೆ. ಹತ್ತಿರ ಬಂದಂತೆ ಮನೆಗಳ ಮುಂದೆ ಬಿದಿರಿನ ಗಳಕ್ಕೆ ಕಟ್ಟಿದ ಉಯ್ನಾಲೆಯಲ್ಲಿ ಜೀಕುವ ಮಕ್ಕಳು, ಹುಕ್ಕಾ ಸೇದುವ ಮುದುಕರು, ಅತ್ತಿತ್ತ ಓಡಾಡುವ ಕೋಳಿ-ಹಂದಿಗಳು, ಮೀನು ಹಿಡಿಯುವ ಯುವಕರು,ಬಾಣಲೆಯಿಟ್ಟು ಕರಿಯುವ ಹೆಂಗಸರು, ಅಗಲ ಮುಖದಲ್ಲಿ ಸದಾ ಅರಳಿದ ನಗೆಮಲ್ಲಿಗೆ ಒಂದೇ ಎರಡೇ ! ಸಂಜೆಯ ಹೊತ್ತಿಗೆ ಅಸ್ತಮಿಸುವ ಸೂರ್ಯನ ಬೆಳಕಿನ ಜತೆ ಮನೆಗಳ ಬಣ್ಣ ಬಣ್ಣದ ದೀಪಗಳೂ ನೀರಿನಲ್ಲಿ ಪ್ರತಿಫಲಿಸಿ ಮಾಯಾಲೋಕ ಸೃಷ್ಟಿಯಾಗುತ್ತದೆ. ಆದರೆ, ಸ್ಥಳೀಯರೊಂದಿಗೆ ಮಾತನಾಡುತ್ತ ಹೋದಂತೆ ಕಣ್ಣಿಗೆ ಬೀಳದ ಪ್ರಪಂಚ ಭಯ ಮೂಡಿಸುತ್ತದೆ. ಜೋರಾಗಿ ನೆರೆ ಬಂದರೆ ಮನೆ-ಹಳ್ಳಿ ಎಲ್ಲವೂ ನೀರುಪಾಲು. ಎಲ್ಲವೂ ಸರಿ ಇದ್ದಾಗಲೂ ಮೀನು ಸಿಕ್ಕು, ಮಾರಾಟವಾದಾಗ ಮಾತ್ರ ಹೊಟ್ಟೆಗಿಷ್ಟು ಗಂಜಿ. ಪ್ರವಾಸಿಗರನ್ನು ಕರೆತಂದು ಕೈತುಂಬ ದುಡ್ಡು ಗಿಟ್ಟಿಸುವ ವ್ಯಾಪಾರಿಗಳಿಂದ ಸಿಗುವುದು ಪುಡಿಗಾಸು. ಅದೂ ಇಲ್ಲದಿದ್ದರೆ ನೀರೇ ಗತಿ. ಸಾಧಾರಣವಾಗಿ 4-5 ಜನರಿರುವ ಮನೆಯಲ್ಲಿ ಎರಡು ಕೋಣೆ ಒಂದು ಅಡುಗೆ ಮನೆಯಿದೆ. ಅಣ್ಣ- ತಮ್ಮ, ಮಕ್ಕಳು ಸಂಸಾರ ಬೆಳೆದಂತೆ ಪಕ್ಕಪಕ್ಕದಲ್ಲೇ ಮನೆ ಕಟ್ಟಿ ವಾಸಿಸುತ್ತಾರೆ. ಒಂದಕ್ಕೊಂದು ತಾಗಿರುವ ಮನೆಗಳಲ್ಲಿ ಶೌಚಾಲಯಕ್ಕೆ ಪ್ರತ್ಯೇಕ ಕೋಣೆ ಇದ್ದರೂ ಅಲ್ಲಿಂದ ಎಲ್ಲವೂ ಸೇರುವುದು ಸರೋವರದ ನೀರಿಗೆ ! ಹೀಗಾಗಿ, ಸದಾ ಒಂದಲ್ಲ ಒಂದು ರೋಗದ ಹಾವಳಿ, ಸಾಂಕ್ರಾಮಿಕ ರೋಗದ ಭೀತಿ. ಮಕ್ಕಳ ಭವಿಷ್ಯದ ಬಗ್ಗೆ ಏನೂ ತಿಳಿದಿಲ್ಲ. ಸರ್ಕಾರ ಯಾವಾಗ ತಮಗೆ ಮಾನ್ಯತೆ ನೀಡುತ್ತದೋ ಎನ್ನುವುದು ಇಲ್ಲಿನ ಜನರ ನಿರಂತರ ಅಳಲು. ದೋಣಿಯಲ್ಲಿ ಕುಳಿತು ಈ ತೇಲುವ ಹಳ್ಳಿ ನೋಡಿ ಮರಳಿ ಬರುವಾಗ ಯಾಕೋ ಅಡಿಗರ ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ ನೆನಪಾಗಿತ್ತು. ತೇಲುವ ಹಳ್ಳಿಯ ಈ ಮುಗ್ಧ ಜನರ ಬದುಕು ಮುಳುಗದಿರಲಿ !
Advertisement
ಕೆ. ಎಸ್. ಚೈತ್ರಾ