ಹೊಸದಿಲ್ಲಿ: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಮಂಗಳವಾರ ‘ಕೂಡಲೇ ಸ್ವದೇಶಕ್ಕೆ ಆಗಮಿಸಿ” ಎಂದು ಉಕ್ರೇನ್ ನಲ್ಲಿರುವ ತನ್ನ ಪ್ರಜೆಗಳಿಗೆ ತಿಳಿಸಿದೆ. ಆದರೆ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉಕ್ರೇನ್ ನಿಂದ ಭಾರತಕ್ಕೆ ಬರುವ ಕೆಲವು ವಿಮಾನಗಳು ರದ್ದಾಗಿದೆ. ವಿಮಾನ ಪ್ರಯಾಣ ದರವೂ ವಿಪರೀತವಾಗಿದೆ ಎಂದು ಹಲವು ವಿದ್ಯಾರ್ಥಿಗಳು ಅವಲತ್ತುಕೊಂಡಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
“ಪರಿಸ್ಥಿತಿ ನಿಜವಾಗಿಯೂ ಉದ್ವಿಗ್ನವಾಗಿದೆ. ಕೆಲವು ವಿದ್ಯಾರ್ಥಿಗಳು ಈಗಾಗಲೇ ತಮ್ಮ ವಿಮಾನಗಳನ್ನು ಬುಕ್ ಮಾಡಿದ್ದಾರೆ, ಆದರೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ” ಎಂದು ಉಕ್ರೇನ್‌ನಲ್ಲಿರುವ ವಿದ್ಯಾರ್ಥಿ ಹರ್ಷ್ ಗೋಯಲ್ ಹೇಳಿದ್ದಾರೆ.
“ಭಾರತ ಸರ್ಕಾರವು ವಿದ್ಯಾರ್ಥಿಗಳನ್ನು ಹೊರಹೋಗುವಂತೆ ಕೇಳಿದೆ ಆದರೆ ಪ್ರಯಾಣ ಬೆಲೆಗಳು ನಿಜವಾಗಿಯೂ ಹೆಚ್ಚಿವೆ. ಇಲ್ಲಿನ ಕೆಲವು ವಿದ್ಯಾರ್ಥಿಗಳಿಗೆ ಅದನ್ನು ಭರಿಸಲಾಗುವುದಿಲ್ಲ. ಸರ್ಕಾರವು ಅವರ ಸುರಕ್ಷತೆಯನ್ನು ಹೇಗೆ ಖಚಿತಪಡಿಸುತ್ತದೆ?” ಎಂದು ಅವರು ಹೇಳಿದರು.
“ನಾವು ಇಮೇಲ್‌ಗಳು ಮತ್ತು ದೂರವಾಣಿ ಕರೆಗಳ ಮೂಲಕ ರಾಯಭಾರ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನೀವೆಲ್ಲರೂ ಇಲ್ಲಿ ಸುರಕ್ಷಿತವಾಗಿರುತ್ತೀರಿ ಎಂದು ಅವರು ಹೇಳಿದ್ದಾರೆ. ಏನಾದರೂ ಸಂಭವಿಸಿದರೆ, ಅವರು ನಮ್ಮನ್ನು ಸ್ಥಳಾಂತರಿಸುತ್ತಾರೆ” ಎಂದು ಗೋಯಲ್ ಹೇಳಿರುವುದನ್ನು ಎನ್ ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ಭಾರತದಿಂದ ಚೀನಕ್ಕೆ ಕಳ್ಳಸಾಗಣೆಯಾಗುತ್ತೆ ಕೂದಲು!
“ನಮ್ಮ ಕುಟುಂಬವು ತುಂಬಾ ಚಿಂತಿತವಾಗಿದೆ. ಫೆಬ್ರವರಿ 20 ರವರೆಗೆ ಯಾವುದೇ ಟಿಕೆಟ್‌ಗಳು ಲಭ್ಯವಿಲ್ಲ. ಹೆಚ್ಚಿನ ಟಿಕೆಟ್‌ಗಳು ಕಾಯ್ದಿರಿಸಲಾಗಿದೆ ಮತ್ತು ಲಭ್ಯವಿರುವವುಗಳು ತುಂಬಾ ದುಬಾರಿಯಾಗಿದೆ, ಅವುಗಳನ್ನು ನಮಗೆ ಭರಿಸಲಾಗುವುದಿಲ್ಲ” ಎಂದು ಮತ್ತೊಬ್ಬ ವಿದ್ಯಾರ್ಥಿ ಆಶಿಶ್ ಗಿರಿ ಹೇಳಿದರು.
ಪ್ರಸ್ತುತ ಉಕ್ರೇನ್‌ನಲ್ಲಿ ವಾಸಿಸುವ ಭಾರತೀಯರ ಸಂಖ್ಯೆ ತಕ್ಷಣಕ್ಕೆ ಲಭ್ಯವಿಲ್ಲ. 2020 ರ ಅಧಿಕೃತ ದಾಖಲೆಯ ಪ್ರಕಾರ, ಉಕ್ರೇನ್ ತುಲನಾತ್ಮಕವಾಗಿ ಸಣ್ಣ ಭಾರತೀಯ ಸಮುದಾಯವನ್ನು ಹೊಂದಿತ್ತು. ಸುಮಾರು 18,000 ಭಾರತೀಯ ವಿದ್ಯಾರ್ಥಿಗಳು ಆ ದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.