ದೇವನಹಳ್ಳಿ: ಬಹುನಿರೀಕ್ಷಿತ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಎಲ್ಆರ್) ಟರ್ಮಿನಲ್ 2 (ಟಿ2) ಭಾನುವಾರ ಮಕರ ಸಂಕ್ರಾಂತಿ ಹಬ್ಬದ ದಿನದಂದು ತನ್ನ ಮೊದಲ ದೇಶಿಯ ವಿಮಾನ ಹಾರಾಟದ ಕಾರ್ಯಾಚರಣೆ ಪ್ರಾರಂಭಿಸಿದೆ.
ಸುಗಮವಾಗಿ ವರ್ಗಾವಣೆ: ಕಾರ್ಯಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಿಐಎಎಲ್‌ಎಂಡಿ ಹರಿಮರಾರ್ ಮಾತನಾಡಿ, ಟಿ2 ನಿಂದ ಹೊಸದಾಗಿ ಕಾರ್ಯಾಚರಣೆ ಆರಂಭಿಸಿರುವ ಸ್ಟಾರ್‌ಏರ್ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇನೆ. ಶೀಘ್ರದಲ್ಲೇ ಈ ನೂತನ ಟರ್ಮಿನಲ್ 2, ಇತರೆ ಎಲ್ಲಾ ವಿಮಾನಯಾನ ಪ್ರಯಾಣಿಕರನ್ನು ಸ್ವಾಗತಿಸಲಿದೆ. ಟಿ2 ನಲ್ಲಿನ ಕೆಲಸಗಳು ಪೂರ್ಣಗೊಂಡ ಬಳಿಕ ಟಿ1 ನಲ್ಲಿ ಕಾರ್ಯಾಚರಣೆಗೊಳ್ಳುತ್ತಿರುವ ಇತರೆ ವಿಮಾನಯಾನ ಸಂಸ್ಥೆಗಳನ್ನು ಹಂತ ಹಂತವಾಗಿ ಟಿ2ಗೆ ಸುಗಮವಾಗಿ ವರ್ಗಾಯಿಸಲಾಗುವುದು ಎಂದರು.
ಕನಸು ನನಸು: ಬೆಂಗಳೂರಿಗರು ಹಾಗೂ ವಿವಿಧ ನಗರಗಳಿಂದ ಪ್ರಯಾಣಿಸುವ ಪ್ರಯಾಣಿಕರೂ ಹೊಂದಿದ್ದರು. ಇದೀಗ ಪ್ರಯಾಣಿಕರಿಗೆ ಅತ್ಯುತ್ತಮ ಅನುಭವ ನೀಡಲು ವಿಮಾನಗಳ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಇದು ಪ್ರಯಾಣಿಕರ ಬಹುದಿನಗಳ ನಿರೀಕ್ಷೆಯನ್ನು ನನಸು ಮಾಡಿದೆ ಎಂದು ತಿಳಿಸಿದರು.
ಟರ್ಮಿನಲ್ ಬೌಲೆವಾರ್ಡ್ ರಸ್ತೆ ಪ್ರಾರಂಭ: ಪ್ರಯಾಣಿಕರು ಟಿ2 ಗೆ ಸುಲಭವಾಗಿ ಪ್ರವೇಶಿಸಲು, 4.4 ಕಿ.ಮೀ. ಉದ್ದದ ಟರ್ಮಿನಲ್ ಬೌಲೆವಾರ್ಡ್ ಹೆಸರಿನ ರಸ್ತೆಯನ್ನು ಈ ವಾರದ ಆರಂಭದಲ್ಲಿ ಉದ್ಘಾಟಿಸಲಾಗಿದೆ. ಈ ರಸ್ತೆಯು ಟಿ2 ನಿರ್ಗಮನದ ದಾರಿಗೆ ಸಂಪರ್ಕ ಕಲ್ಪಿಸಲಿದೆ. ಜತೆಗೆ ಟಿ2 ಆಗಮನಕ್ಕೂ ಸಂಪರ್ಕಿಸಲಿದೆ. ಈ ಮಾರ್ಗದಲ್ಲಿ ಯಾವುದೇ ಟ್ರಾಫಿಕ್ ಸಿಗ್ನಲ್ ಇಲ್ಲದೇ ಇರುವುದು ಆರಾಮದಾಯ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಟಿ2ನಲ್ಲಿ ಪ್ರಯಾಣಿಕರನ್ನು ಪಾರ್ಕಿಂಗ್ ಪ್ರದೇಶದಲ್ಲಿ ಕಾರುಗಳ ಮೂಲಕ ಕರೆದೊಯ್ಯುವ ವ್ಯವಸ್ಥೆ ಇದೆ. ಟಿ1 ಮತ್ತು ಟಿ2 ನಡುವೆ ಶಟಲ್ ಸೇವೆಗಳೂ ಲಭ್ಯವಿದೆ.
ಕಲಬುರ್ಗಿಗೆ ಹಾರಾಟ : ಹೊಸ ಟರ್ಮಿನಲ್‌ನಿಂದ ಹಾರಾಟ ಪ್ರಾರಂಭಿಸಿದ ಮೊದಲ ಏರ್‌ಲೈನ್ ಸ್ಟಾರ್‌ಏರ್ ಆಗಿದ್ದು, ಮೊದಲ ವಿಮಾನ ಬೆಳಗ್ಗೆ 8.40ಕ್ಕೆ ಟೇಕ್ ಆಫ್ ಆಗಿ ಕಲಬುರ್ಗಿಗೆ ಹಾರಾಟ ನಡೆಸಿದೆ. ಹಾಗೆಯೇ ಬೆಳಗ್ಗೆ 11.25ಕ್ಕೆ ಕಲಬುರ್ಗಿಯಿಂದ ಹಿಂತಿರುಗಿದೆ. ಮುಂದಿನ ಕೆಲ ತಿಂಗಳಲ್ಲಿಯೇ ಇತರೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳು ಹಂತ ಹಂತವಾಗಿ ಟಿ2ನಿಂದ ಕಾರ್ಯಾಚರಣೆ ಪ್ರಾರಂಭಿಸುವ ನಿರೀಕ್ಷೆ ಇದೆ.