Advertisement

ಕಲಬುರಗಿಯಲ್ಲಿ ವಿಮಾನ ಬಿಡಿ ಭಾಗ ತಯಾರಿಕೆ ಘಟಕ

11:10 AM Nov 01, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೋದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ವಿಮಾನಗಳ ಬಿಡಿಭಾಗ ಉತ್ಪಾದನಾ ಘಟಕ ಮತ್ತು ದುರಸ್ತಿಗೊಳಿಸುವ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ರವಿವಾರ ನಗರದ ಬಿಜೆಪಿ ಕಚೇರಿಗೆ ರವಿವಾರ ಸಂಜೆ ಭೇಟಿ ನೀಡಿ ಗ್ರಾಮಾಂತರ ಜಿಲ್ಲಾ ಮತ್ತು ಮಹಾನಗರ ಜಿಲ್ಲಾ ಘಟಕದ ಪದಾಧಿಕಾರಿಗಳ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ಕಲಬುರಗಿಯಲ್ಲಿ ವಿಮಾನ ಬಿಡಿ ಭಾಗಗಳ ಉತ್ಪಾದನಾ ಘಟಕ ಹಾಗೂ ಸೆಮಿಕಂಡಕ್ಟರ್‌ಗಳ ಉತ್ಪಾದನ ವಲಯ ಆರಂಭಗೊಂಡರೆ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಬೆಂಗಳೂರು ಸಿಲಿಕಾನ್‌ ಸಿಟಿ ಆದಂತೆ, ಕಲಬುರಗಿ ಸೆಮಿ ಕಂಡಕ್ಟರ್‌ ಹಬ್‌ ಆಗಲಿದೆ. ಜತೆಗೆ ಸಾಕಷ್ಟು ಪ್ರಗತಿ ಸಹ ಆಗಲಿದೆ ಎಂದರು.

ಜಿಲ್ಲೆಯಲ್ಲಿ ಮತ್ತು ಈ ವಿಭಾಗದ ಜಿಲ್ಲೆಗಳಲ್ಲಿ ಹೆಚ್ಚು ಉದ್ಯಮಗಳನ್ನು ಸ್ಥಾಪನೆ ಮಾಡಲು ಹಲವು ಕಂಪನಿಗಳಿಗೆ ಆಹ್ವಾನಿಸುವ ಮೂಲಕ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಇಲ್ಲಿನವರಿಗೆ ಉದ್ಯೋಗ ಕಲ್ಪಿಸಲು ಕ್ರಮ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡಲಾಗುವುದು ಎಂದು ಸಚಿವರು ಪ್ರಕಟಿಸಿದರು.

ದೇಶದಲ್ಲಿಯೇ ಮೊದಲು ಎನ್ನುವಂತೆ “ಸೆಮಿಕಂಡಕ್ಟರ್‌ ಪಾಲಿಸಿ’ (ಅರೆವಾಹಕ ನೀತಿ)ಯನ್ನು (ವಾಹಕಗಳು ಮತ್ತು ಅವಾಹಕಗಳ ನಡುವಣ ವಿದ್ಯುತ್‌ ವಾಹಕತೆ ಹೊಂದಿರುವ ಘನ ವಸ್ತುಗಳು ಅರೆವಾಹಕ) ರಾಜ್ಯದಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಹೊಸ ನೀತಿಯಡಿ ಕಲಬುರಗಿಯಲ್ಲಿ ಅರೆವಾಹಕ ಉತ್ಪಾದನಾ ವಲಯ ಸ್ಥಾಪಿಸಲು ಕೆಲವು ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ. ಅಲ್ಲದೇ ಸೆಮಿಕಂಡಕ್ಟರ್‌ಗಳನ್ನು ಹಾಗೂ ವಿಮಾನ ಬಿಡಿ ಭಾಗಗಳನ್ನು ಉತ್ಪಾದನೆ ಮಾಡಲು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ 500 ಎಕರೆ ಜಮೀನು ನೀಡಲು ಉದ್ಯಮಿಗಳು ಬೇಡಿಕೆಯಿಟ್ಟಿದ್ದಾರೆ. ಅಲ್ಲಿ ಜಮೀನು ಸಿಗುವುದು ಕಷ್ಟ. ಹೀಗಾಗಿ ಕಲಬುರಗಿಗೆ ಬರಲು ಆಹ್ವಾನಿಸಿದ್ದೇನೆ. ಬೇಕಾದಷ್ಟು ಜಮೀನು ನೀಡುವುದರ ಜತೆಗೆ ಹಲವು ಸಬ್ಸಿಡಿ ಸಹ ನೀಡುವುದಾಗಿ ಭರವಸೆ ನೀಡಿ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಬೆಳಗಾವಿ ಮತ್ತು ಹುಬ್ಬಳ್ಳಿ ನಡುವೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೂರು ಸಾವಿರ ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿ ವಿಮಾನ ಬಿಡಿ ಭಾಗಗಳ ಉತ್ಪಾದನೆ ಮಾಡಲು ಘಟಕಗಳನ್ನು ಸ್ಥಾಪಿಸಲು ಹಲವು ವಿದೇಶಿ ಕಂಪನಿಗಳು ಮುಂದೆ ಬಂದಿವೆ. ಆದರೆ, ಕಲಬುರಗಿಗೆ ಮೊದಲ ಆದ್ಯತೆ ನೀಡಿದ ನಂತರ ಹುಬ್ಬಳ್ಳಿ-ಧಾರವಾಡಕ್ಕೆ ಎಂದು ಹೇಳಿದರು.

Advertisement

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಿದ್ಧಾಜಿ ಪಾಟೀಲ ಸ್ವಾಗತಿಸಿದರು. ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕರ್ತರ ಬೇಡಿಕೆ ಮಂಡಿಸಿದರು. ಶಾಸಕರಾದ ಬಸವರಾಜ ಮತ್ತಿಮಡು, ಶಶೀಲ್‌ ನಮೋಶಿ, ಡಾ| ಅವಿನಾಶ ಜಾಧವ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ, ಅಮರನಾಥ ಪಾಟೀಲ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಧರ್ಮಣ್ಣ ದೊಡ್ಡಮನಿ, ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ಗುನ್ನಾಪುರ, ಪ್ರಮುಖರಾದ ಲಿಂಗರಾಜ ಬಿರಾದಾರ, ಪರಸರಡ್ಡಿ, ಡಾ| ಮಹೇಂದ್ರ ಕೋರಿ, ಸಿದ್ಧು ಪಾಟೀಲ ಮುಂತಾದವರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಬಗಲಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next