ಹೊಸದಿಲ್ಲಿ: ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಮಂಗಳವಾರ ಕೋವಿಡ್ ಭೀತಿಯ ಹೊರತಾಗಿಯೂ ವಿಮಾನ ಯಾನ ಶುರು ಮಾಡಲಾಗಿದೆ. 79 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಆಂಧ್ರದತ್ತ ಹೊರಟ ಮೊದಲ ವಿಮಾನ ಬೆಳಗ್ಗೆ 6.55ಕ್ಕೆ ವಿಜಯವಾಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಬೆಂಗಳೂರಿನಿಂದ ಹೊರಟಿದ್ದ ಮತ್ತೂಂದು ವಿಮಾನ ಬೆಳಗ್ಗೆ 7 ಗಂಟೆಗೆ ವಿಶಾಖಪಟ್ಟಣ ನಿಲ್ದಾಣ ತಲುಪಿದೆ. ಇನ್ನೊಂದೆಡೆ 68 ಪ್ರಯಾಣಿಕರನ್ನು ಒಳಗೊಂಡ ಸ್ಪೈಸ್ ಜೆಟ್ ವಿಮಾನವು ವಿಜಯವಾಡದಿಂದ ಬೆಂಗಳೂರಿಗೆ ಬಂದಿಳಿದಿದೆ.
ಪ್ರಸ್ತುತ ಆಂಧ್ರದಲ್ಲಿ ಸೇವೆ ಪುನರಾರಂಭಗೊಂಡಿದ್ದು, ವಿಜಯವಾಡ ಮತ್ತು ವಿಶಾಖಪಟ್ಟಣ ಏರ್‌ಪೋರ್ಟ್‌ಗಳಿಂದ ಪ್ರತಿ ದಿನ ಹಗಲು ವೇಳೆಯಲ್ಲಿ ತಲಾ ಎಂಟು ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿನ ಆತಂಕ: ತಮಿಳುನಾಡಿನಲ್ಲಿ ವಿಮಾನಯಾನ ಶುರುವಾಗಿದೆ. ಆದರೆ ಮೊದಲ ದಿನವೇ ಸೋಂಕಿನ ಆತಂಕ ಉಂಟಾಯಿತು. ಚೆನ್ನೈನಿಂದ ಕೊಯಮತ್ತೂರಿನಿಂದ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಸೋಂಕು ದೃಢಪಟ್ಟಿತು. ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
329 ಭಾರತೀಯರು ವಾಪಸ್: ಕೋವಿಡ್ ಸೋಂಕಿನಿಂದಾಗಿ ಜಾಗತಿಕ ಮಟ್ಟದಲ್ಲಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಸಿಲುಕಿದ್ದ ಮತ್ತಷ್ಟು ಭಾರತೀಯರು, ವಂದೇ ಭಾರತ್ ಮಿಷನ್ ಅಡಿ ನ್ಯೂಯಾರ್ಕ್‌ನಿಂದ ಬಂದ ಏರ್ ಇಂಡಿಯಾದ ನಾಲ್ಕನೇ ವಿಶೇಷ ವಿಮಾನದಲ್ಲಿ ದೇಶಕ್ಕೆ ಮರಳಿದ್ದಾರೆ. ಇಬ್ಬರು ಶಿಶುಗಳು ಸೇರಿ 329 ಜನರಿದ್ದ ವಿಮಾನ ಜೆಎಫ್‌ಕೆ ವಿಮಾನ ನಿಲ್ದಾಣದಿಂದ ಬೆಂಗಳೂರು ತಲುಪಿದ್ದಾರೆ. ಇಸ್ರೇಲ್‌ನಲ್ಲಿದ್ದ 115 ಭಾರತೀಯರು ಮಂಗಳವಾರ ದಿಲ್ಲಿ ತಲುಪಿದ್ದಾರೆ.
608 ಹಾರಾಟ: ಮಂಗಳವಾರ ಸಂಜೆ 5 ರವರೆಗೆ ದೇಶದ ಏರ್‌ಪೋರ್ಟ್‌ಗಳಲ್ಲಿ 325 ಟೇಕಾಫ್, 283 ಲ್ಯಾಂಡಿಂಗ್ ಆಗಿವೆ. 41,673 ಮಂದಿ ಪ್ರಯಾಣಿಸಿದ್ದಾರೆ ಎಂದು ಸಚಿವ ಹರ್‌ದೀಪ್‌ಸಿಂಗ್ ಪುರಿ ತಿಳಿಸಿದ್ದಾರೆ. ಎರಡನೇ ದಿನ ಕೂಡ ಹಲವಾರು ವಿಮಾನಗಳು ರದ್ದಾಗಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಯಾವುದೇ ವಿಮಾನ ಹಾರಾಟ ನಡೆಸಿಲ್ಲ.