ಮುಂಬಯಿ: ಮುಂಬೈನಲ್ಲಿ ಬಿರುಗಾಳಿ ಸಹಿತ ಅಕಾಲಿಕ ಮಳೆಯಾಗುತ್ತಿದ್ದು ಘಾಟ್‌ಕೋಪರ್ ಪ್ರದೇಶದ ಚೆಡ್ಡಾನಗರ ಜಂಕ್ಷನ್‌ನಲ್ಲಿ 100 ಅಡಿ ಎತ್ತರದ ಜಾಹೀರಾತು ಫಲಕ ಕಿತ್ತು ಪೆಟ್ರೋಲ್ ಪಂಪ್‌ನ ಮೇಲೆ ಬಿದ್ದ ಪರಿಣಾಮ 54 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಾಗರಿಕ ಸಂಸ್ಥೆ ನಡೆಸುವ ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಒಂದು ಗಂಟೆ ಸ್ಥಗಿತಗೊಳಿಸಲಾಗಿದೆ ಮತ್ತು ಸ್ಥಳೀಯ ರೈಲುಗಳು ವಿಳಂಬಗೊಂಡಿವೆ.
15 ವಿಮಾನಗಳನ್ನು ವಿವಿಧ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ರನ್‌ವೇಗಳ ಕಾರ್ಯಾಚರಣೆಯು ಸಂಜೆ 5.03 ಕ್ಕೆ ಪುನರಾರಂಭವಾಯಿತು ಎಂದು ವಿಮಾನ ನಿಲ್ದಾಣದ ನಿರ್ವಾಹಕರು ತಿಳಿಸಿದ್ದಾರೆ.
ನಗರದಲ್ಲಿನ ಪ್ರತಿಕೂಲ ಹವಾಮಾನ ಮತ್ತು ಬಿರುಗಾಳಿಯಿಂದಾಗಿ, ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (CSMIA) ಕಡಿಮೆ ಗೋಚರತೆಯಿಂದಾಗಿ ಸುಮಾರು 66 ನಿಮಿಷಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಸುರಕ್ಷಿತ ಮತ್ತು ಸುಗಮ ವಿಮಾನ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ವಿಮಾನ ನಿಲ್ದಾಣವು ಕಳೆದ ವಾರವಷ್ಟೇ ಮುಂಗಾರು ಪೂರ್ವ ರನ್‌ವೇ ನಿರ್ವಹಣೆಯನ್ನು ಪೂರ್ಣಗೊಳಿಸಿತ್ತು.
ಮಳೆಯು ವಿಪರೀತ ಸೆಕೆಯಿಂದ ಕಂಗಾಲಾಗಿದ್ದ ಮುಂಬೈ ಜನರಿಗೆ ಕೊಂಚ ರಿಲೀಫ್ ತಂದರೆ, ಬಿರುಗಾಳಿ ಆತಂಕ ಮತ್ತು ಹಾನಿಗೆ ಕಾರಣವಾಗಿದೆ.