ಕಲಬುರಗಿ: ನೂತನ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆ ಆರಂಭಿಸುವ ಸಂಬಂಧ ಸುರಕ್ಷತಾ ಕ್ರಮ ಪರಿಶೀಲಿಸಲು ನಾಗರಿಕ ವಿಮಾನಯಾನ ಸಚಿವಾಲಯದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೊಸೈಟಿಯ ಹೈದ್ರಾಬಾದ್‌ನ ಪ್ರಾದೇಶಿಕ ನಿರ್ದೇಶಕ ಎಂ.ಟಿ. ಬೇಗ್ ನೇತೃತ್ವದ ಭದ್ರತಾ ಸಮಿತಿ ನಗರಕ್ಕೆ ಆಗಮಿಸಿದೆ.
ಜಿಲ್ಲಾಧಿಕಾರಿ ವೆಂಕಟೇಶಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಸಮಿತಿ ಸದಸ್ಯರು ಭದ್ರತೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೊಸೈಟಿಯ ಹೈದ್ರಾಬಾದ್‌ನ ಪ್ರಾದೇಶಿಕ ನಿರ್ದೇಶಕ ಎಂ.ಟಿ. ಬೇಗ್ ಅವರು, ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭದ್ರತಾ ಸಮಿತಿಯಿಂದ ನಿರಾಕ್ಷೇಪಣಾ ಪತ್ರ ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ಸಲ್ಲಿಸಿದ ನಂತರವೇ ವಾಣಿಜ್ಯ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ದಳ, ಶ್ವಾನ ದಳ, ಅಗ್ನಿಶಾಮಕ ದಳ, ಸ್ಫೋಟಕ ವಸ್ತುಗಳ ಪತ್ತೆ ಘಟಕ, ವಿಮಾನ ನಿಲ್ದಾಣದ ಸಮಗ್ರ ಭದ್ರತೆ ಸೇರಿದಂತೆ ಡಿ.ಜಿ.ಸಿ.ಎ. ಚೆಕ್‌ಲಿಸ್ಟ್‌ನಲ್ಲಿ ನಿಗದಿಪಡಿಸಿರುವ ಇನ್ನಿತರ ಎಲ್ಲ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲೇಬೇಕು. ವಿಮಾನ ನಿಲ್ದಾಣಕ್ಕೆ ಭದ್ರತೆ ಕಲ್ಪಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿರುತ್ತದೆ ಎಂದರು.
ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾತನಾಡಿ ವಿಮಾನ ಕಾರ್ಯಾಚರಣೆಗೆ ದಿನಾಂಕ ನಿಗದಿಪಡಿಸಿದಲ್ಲಿ ಭದ್ರತೆಯಲ್ಲದೆ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಕೈಗೊಳ್ಳಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಯಪ್ರಕಾಶ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅಮೀನ ಮುಕ್ತಾರ, ಕಲಬುರಗಿ ತಹಶೀಲ್ದಾರ ಅಶೋಕ ಹೀರೊಳ್ಳಿ ಸೇರಿದಂತೆ ಭದ್ರತಾ ಸಮಿತಿಯ ಸದಸ್ಯರು, ಇನ್ನಿತರ ಅಧಿಕಾರಿಗಳು ಹಾಜರಿದ್ದರು. ನಂತರ ಸಮಿತಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿತು.