Advertisement

ವಿಮಾನದಲ್ಲಿ ಪ್ರಯಾಣಿಸಲು ಜನರಿಗಿದೆ ಭಯ

05:55 PM May 21, 2020 | sudhir |

ನ್ಯೂಯಾರ್ಕ್‌: ಕೋವಿಡ್‌ ವೈರಸ್‌ನಿಂದ ಅತಿ ಹೆಚ್ಚು ಹಾನಿಗೊಳಗಾಗಿರುವ ಕ್ಷೇತ್ರಗಳ ಪೈಕಿ ವಾಯುಯಾನವೂ ಒಂದು. ಅಮೆರಿಕವೊಂದರಲ್ಲೇ ಶೇ. 90ರಷ್ಟು ವಿಮಾನ ಗಳು ಸಂಚಾರ ಸ್ಥಗಿತಗೊಳಿಸಿವೆ. ಉಳಿದ ದೇಶಗಳ ಪರಿಸ್ಥಿತಿಯೂ ಇದಕ್ಕಿಂತ ಉತ್ತಮವಾಗಿಲ್ಲ. ಇದರಿಂದ ಉಂಟಾಗಿರುವ ಆರ್ಥಿಕ ನಷ್ಟಗಳು ಒಂದೆಡೆಯಾದರೆ ಭವಿಷ್ಯದಲ್ಲಿ ಈ ಕ್ಷೇತ್ರದ ಭವಿಷ್ಯ ಹೇಗಿರಬಹುದು ಎಂಬ ಇನ್ನೊಂದು ದೊಡ್ಡ ಪ್ರಶ್ನೆಯೂ ಇದೆ.

Advertisement

ಆರಂಭದಲ್ಲಿ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ವಿಮಾನ ಯಾನ ಸಂಸ್ಥೆಗಳು ಮಾಸ್ಕ್, ಮುಖಗವಸಿನಂಥ ಸುರಕ್ಷಾ ಸಾಧನಗಳ ಉಚಿತ ಕೊಡುಗೆಯನ್ನು ನೀಡಬಹುದು. ವಿಮಾನಯಾನ ಸಂಸ್ಥೆಗಳು ಲಾಭದಾಯಕ ರೂಟ್‌ಗಳಲ್ಲಿ ಮಾತ್ರ ಸೇವೆಗಳನ್ನು ಪ್ರಾರಂಭಿ ಸುವ ಸಾಧ್ಯತೆಯಿದೆ. ಲಗೇಜ್‌ ಭಾರಕ್ಕೆ ಮಿತಿ ಯಿರುವುದರಿಂದ ಕಡಿಮೆ ದೂರದ ಪ್ರಯಾಣಕ್ಕೆ ಜನರು ಭೂಸಾರಿಗೆಯನ್ನು ಹೆಚ್ಚು ನೆಚ್ಚಿಕೊಳ್ಳುವ ಸಾಧ್ಯತೆಯಿದೆ.

ಹುಣ್ಣಿನ ಮೇಲೆ ಬರೆ
ವೈರಸ್‌ ಹಾವಳಿ ಶುರುವಾಗುವ ಮೊದಲೇ ವಿಮಾನ ಯಾನ ಕ್ಷೇತ್ರ ಕುಂಟತೊಡಗಿತ್ತು. ಹಲವು ದೇಶಗಳಲ್ಲಿ ಖಾಸಗಿ ವಿಮಾನ ಯಾನ ಸಂಸ್ಥೆಗಳು ನೆಲಕಚ್ಚಿದ್ದವು. ಕೋವಿಡ್‌ ಇದೀಗ ವಿಮಾನ ಯಾನ ಕ್ಷೇತ್ರವನ್ನು ಸಂಪೂರ್ಣ ಧರಾಶಾಯಿಯಾಗುವಂತೆ ಮಾಡಿದೆ.

ಸುರಕ್ಷೆತೆಯೇ ಸವಾಲು
ವಿಮಾನ ಯಾನ ಸಂಪೂರ್ಣ ಸುರಕ್ಷಿತ ಎಂದು ಜನರಲ್ಲಿ ನಂಬಿಕೆ ಹುಟ್ಟಿಸುವುದೇ ಸಂಸ್ಥೆಗಳ ಮುಂದೆ ಈಗ ಇರುವ ದೊಡ್ಡ ಸವಾಲು. ಎಪ್ರಿಲ್‌ನಲ್ಲಿ ಬ್ರಿಟನ್‌, ಅಮೆರಿಕ, ಆಸ್ಟ್ರೇಲಿಯ, ಜರ್ಮನಿ ಮತ್ತು ಭಾರತದಲ್ಲಿ ಈ ಕುರಿತು ಸಮೀಕ್ಷೆಯೊಂದನ್ನು ನಡೆಸಿದಾಗ ಶೇ. 40ರಷ್ಟು ಮಂದಿ ತಾವು ವೈರಸ್‌ ಹಾವಳಿ ಕೊನೆಗೊಳ್ಳುವ ತನಕ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದಾರೆ. ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಈ ತಿಂಗಳಲ್ಲಿ ಇದೇ ಮಾದರಿಯ ಇನ್ನೊಂದು ಸಮೀಕ್ಷೆ ನಡೆಸಿದಾಗ ಶೇ.65 ಜನರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಪೂರ್ಣವಾಗಿ ಮುಚ್ಚಿರುವ ವಿಮಾನಗಳಲ್ಲಿ ಪ್ರಯಾಣಿಸುವುದು ಬಹಳ ಅಪಾಯಕಾರಿ ಎಂದು ಅವರು ಭಾವಿಸಿದ್ದಾರೆ, ಈ ಭಯ ಹೋಗುವ ತನಕ ವಿಮಾನಗಳಿಗೆ ಪ್ರಯಾಣಿಕರು ಸಿಗುವುದು ಕಷ್ಟ.

ಸ್ಯಾನಿಟೈಸರ್‌, ಮಾಸ್ಕ್, ಗ್ಲೌಸ್‌, ಬಳಸಿದರೆ ಪ್ರಯಾಣ ಸುರಕ್ಷಿತವಾಗಬಹುದು ಎಂದು ಶೇ. 35 ಮಂದಿ ಮತ್ತು ಸಂಪೂರ್ಣ ಸುರಕ್ಷಾ ಉಡುಗೆ ಧರಿಸಿದ ಪ್ರಯಾಣ ಸುರಕ್ಷಿತ ಎಂದು ಶೇ. 26 ಮಂದಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಟಿಕೆಟ್‌ ದರ ಹೆಚ್ಚು
ಪ್ರಯಾಣಿಕರ ಸಂಖ್ಯೆಯನ್ನು ಕಡಿಮೆ ಮಾಡುವ ಅನಿವಾರ್ಯತೆ ಇರುವುದರಿಂದ ಟಿಕೆಟ್‌ ದರ ಹೆಚ್ಚಾಗಬಹುದು. ದುಬಾರಿ ದರ ಪಾವತಿಸಿ ಪ್ರಯಾಣಿಸಲು ಮುಂದಾಗುತ್ತಾರೆಯೇ ಎಂಬ ಆತಂಕ ಇದೆ.

Advertisement

Udayavani is now on Telegram. Click here to join our channel and stay updated with the latest news.

Next