ಕಲಬುರಗಿ: ನಗರದಿಂದ ಬೆಂಗಳೂರಿಗೆ ತೆರಳುವ ಹಾಗೂ ಬೆಂಗಳೂರಿನಿಂದ ಕಲಬುರಗಿಗೆ ಬರುವ ವಿಮಾನ ಸಂಚಾರ ಸೋಮವಾರ ದಿಢೀರ್ ರದ್ದಾಗಿದ್ದರಿಂದ ಪ್ರಯಾಣಿಕರು ಪರದಾಡಿದರು.
ಸ್ಟಾರ್‌ಏರ್ ವಿಮಾನವು ಮಧ್ಯಾಹ್ನ 1.30ಕ್ಕೆ ಇಲ್ಲಿನ ವಿಮಾನ ನಿಲ್ದಾಣ ಬೆಂಗಳೂರಿಗೆ ತೆರಳಬೇಕಿತ್ತು. ಅದೇ ರೀತಿ ಮಧ್ಯಾಹ್ನ ಸಹ ಬೆಂಗಳೂರಿನಿಂದ ಬರಬೇಕಿದ್ದ ವಿಮಾನ ಸಹ ಬಾರದೇ ಇರುವುದರಿಂದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದು ವಾಪಸ್ಸಾದರು.
ತಿರುಪತಿಯಿಂದ ಬಂದ ಸ್ಟಾರ್‌ಏರ್ ವಿಮಾನ ಮಧ್ಯಾಹ್ನ 1.30ಕ್ಕೆ ಇಲ್ಲಿಂದ ಬೆಂಗಳೂರಿಗೆ ತೆರಳಲು ಹೊರಟಿತ್ತು. ಪ್ರಯಾಣಿಕರೆಲ್ಲರೂ ವಿಮಾನದೊಳಗೆ ಕುಳಿತ್ತಿದ್ದರು. ಇನ್ನೇನು ವಿಮಾನ ಮೇಲಕ್ಕೆ ಹಾರಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಮೇಲೇರಲಿಲ್ಲ. ಹೀಗಾಗಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು.
ಇನ್ನು ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ಬರಬೇಕಿದ್ದ ಏರ್ ಅಲೈನ್ಸ್ ವಿಮಾನ ಸಂಚಾರ ರದ್ದಾಗಿರುವ ಕುರಿತಾಗಿ ಮೊದಲೇ ಮಾಹಿತಿ ನೀಡದೆ ಇರುವುದರಿಂದ ಪ್ರಯಾಣಿಕರು ನಿಲ್ದಾಣಕ್ಕೆ ಬಂದು ಸ್ವಲ್ಪ ಹೊತ್ತು ಕಾಯ್ದ ನಂತರ ವಿಮಾನ ಬರುವುದಿಲ್ಲ ಎಂಬ ಮಾಹಿತಿ ಹೊರ ಬಂತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು, ಏನಾದರೂ ತೊಂದರೆ ಇದ್ದಲ್ಲಿ ಮೊದಲೇ ತಿಳಿಸಬೇಕಿತ್ತು. ನಿಲ್ದಾಣಕ್ಕೆ ಬಂದ ನಂತರ ತಡವಾಗಿದ್ದನ್ನು ಪ್ರಶ್ನಿಸಿದಾಗ ರದ್ದತಿ ವಿಷಯ ತಿಳಿಸುತ್ತೀರಾ ಎಂದು ಅಸಮಾಧಾನ ಹೊರ ಹಾಕಿದರು.
ಏರ್ ಅಲೈನ್ಸ್ ವಿಮಾನವು ತಿಂಗಳಲ್ಲೇ ಈಗ ವಿಮಾನ ಸಂಚಾರ ರದ್ದಾಗಿರುವುದು ಇದು ಮೂರನೇ ಬಾರಿ. ಹೀಗೆ ಮಾಡಿದರೆ ಪ್ರಯಾಣಿಕರು ಸಂಚರಿಸಲು ಹಿಂದೇಟು ಹಾಕುವ ಸಾಧ್ಯತೆಗಳು ಹೆಚ್ಚಿವೆ ಎಂದು ನಿರ್ದೇಶಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರ ಸಲಹಾ ಸಮಿತಿ ಸದಸ್ಯ ನರಸಿಂಹ ಮೆಂಡನ್ ತಿಳಿಸಿದ್ದಾರೆ.