Advertisement
“ಹುಲಿರಾಯ’ ಚಿತ್ರ ನಿಮಗೆ ಇಷ್ಟವಾಗೋದೇ ಅದರ ಕೆಲವು ಸೂಕ್ಷ್ಮಅಂಶಗಳಿಂದ. ಅತ್ತ ಕಡೆ ಕಾಡು, ಇತ್ತ ಕಡೆ ಸಿಟಿ ಈ ಎರಡು ಅಂಶಗಳನ್ನಿಟ್ಟುಕೊಂಡು ಸಾಗುವ ಸಿನಿಮಾದಲ್ಲಿ ಎರಡು ಬದುಕುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅರವಿಂದ್ ಕೌಶಿಕ್. ಆ ಮಟ್ಟಿಗೆ “ಹುಲಿರಾಯ’ ಕಮರ್ಷಿಯಲ್ ಅಂಶಗಳನ್ನು ಮೈಗೆ ಮೆತ್ತಿಕೊಳ್ಳದೆಯೂ ಮಜಾ ಕೊಡುತ್ತಾ ಸಾಗುತ್ತದೆ.
Related Articles
Advertisement
ಚಿತ್ರದ ಮೊದಲರ್ಧ ನಾಯಕನ ಹಿನ್ನೆಲೆ, ಪರಿಸರ ಸೊಬಗು, ಆತ ಸಿಟಿಗೆ ಬರುವ ಅಂಶಗಳಲ್ಲಿ ಮುಗಿದು ಹೋಗುತ್ತದೆ. ಇಲ್ಲಿನ ನಿರೂಪಣೆ ಕೂಡಾ ವೇಗದಿಂದ ಕೂಡಿದೆ. ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳೋದು ಸೆಕೆಂಡ್‌ಹಾಫ್ನಲ್ಲಿ. ಇಲ್ಲಿ ನಾಯಕನ ಉದ್ದೇಶ ಅನಾವರಣಗೊಳ್ಳುತ್ತಾ ಹೋಗುತ್ತದೆ. ಇಲ್ಲಿ ಬರುವ ಕ್ಯೂಟ್ ಲವ್‌ಸ್ಟೋರಿ, ಸಣ್ಣದೊಂದು ಚೇಸಿಂಗ್, ತಣ್ಣಗೆ ಬಂದು ಹೋಗುವ ಭೂಗತಲೋಕ … ಹೀಗೆ ಎಲ್ಲವೂ ಇಲ್ಲಿ ಬಂದು ಹೋಗುತ್ತದೆ ಮತ್ತು ಕಥೆಗೆ ಪೂರಕವಾಗಿದೆ.
ಮೊದಲರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದ ವೇಗ ಕಡಿಮೆ. ಇಲ್ಲಿನ ಒಂದೆರಡು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ಕೂಡಾ ನಿರ್ದೇಶಕರಿಗಿತ್ತು.ಮೊದಲೇ ಹೇಳಿದಂತೆ ಇದು ಕಾಡಿನ ಹಿನ್ನೆಲೆಯಲ್ಲಿ ನಡೆಯುವ ಸಿನಿಮಾ. ಅದಕ್ಕೆ ಪೂರಕವಾಗಿ ಇಡೀ ಕಾಡನ್ನು ಅಲ್ಲಿ ಸೊಬಗನ್ನು ತುಂಬಾ ಸುಂದರವಾಗಿ ಕಟ್ಟಿಕೊಡಲಾಗಿದೆ. “ಹುಲಿರಾಯ’ ಚಿತ್ರದ ಮೂಲಕ ಕನ್ನಡಕ್ಕೆ ಬಾಲು ನಾಗೇಂದ್ರ ಎಂಬ ಒಳ್ಳೆಯ ನಟ ಸಿಕ್ಕಿದ್ದಾರೆ ಎಂದರೆ ತಪ್ಪಾಗಲಾರದು.
“ಹುಲಿರಾಯ’ನ ಸುರೇಶ ಪಾತ್ರದಲ್ಲಿ ಬಾಲು ನಾಗೇಂದ್ರನ ಬಿಟ್ಟು ಮತ್ತೂಬ್ಬರನ್ನು ಕಲ್ಪಿಸಿಕೊಳ್ಳೋದು ಕಷ್ಟ. ಅಷ್ಟರ ಮಟ್ಟಿಗೆ ಬಾಲು ಪಾತ್ರವನ್ನು ಆವರಿಸಿಕೊಂಡಿದ್ದಾರೆ. ರಗಡ್ ಲುಕ್, ಮುಗ್ಧತನ, ಹಳ್ಳಿ ಪ್ರೀತಿ, ಸಿಟಿ ಅಲರ್ಜಿ, ಡೈರೆಕ್ಟ್ ಹಿಟ್ ಲವ್ … ಹೀಗೆ ಪ್ರತಿ ಸನ್ನಿವೇಶಗಳಲ್ಲೂ ಬಾಲು ನಾಗೇಂದ್ರ ಇಷ್ಟವಾಗುತ್ತಾರೆ. ನಾಯಕಿಯರಲ್ಲಿ ಚಿರಶ್ರೀ ಹಾಗೆ ಬಂದು ಹೀಗೆ ಹೋದರೆ, ದಿವ್ಯಾ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಚಿತ್ರದ ಹಾಡುಗಳು ಹಾಗೂ ಅದನ್ನು ಚಿತ್ರೀಕರಿಸಿರುವ ರೀತಿ ಇಷ್ಟವಾಗುತ್ತದೆ. ಮುಖ್ಯವಾಗಿ ಛಾಯಾಗ್ರಾಹಕ ರವಿ, “ಹುಲಿರಾಯ’ನನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರ: ಹುಲಿರಾಯನಿರ್ಮಾಣ: ನಾಗೇಶ್ ಕೋಗಿಲು
ನಿರ್ದೇಶನ: ಅರವಿಂದ್ ಕೌಶಿಕ್
ತಾರಾಗಣ: ಬಾಲು ನಾಗೇಂದ್ರ, ಚಿರಶ್ರೀ, ದಿವ್ಯಾ ಮತ್ತಿತರರು. * ರವಿಪ್ರಕಾಶ್ ರೈ