ಬೆಂಗಳೂರು: ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳನ್ನು ಬುಡಸಮೇತ ತೆರವುಗೊಳಿಸುವುದಾಗಿ ತಿಳಿಸಿದ್ದ ಮೇಯರ್ ಆರ್.ಸಂಪತ್‌ರಾಜ್ ಅವರು, ಶುಕ್ರವಾರದಿಂದ ಆರಂಭವಾದ ಕಾರ್ಯಾಚರಣೆಗೆ ಕೇವಲ ಗೋಡೆಗಳ ಮೇಲಿನ ಭಿತ್ತಿಪತ್ರಗಳ ತೆರವಿಗೆ ಸೀಮಿತವಾಗಿದ್ದರು.
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪಾಲಿಕೆಯಲ್ಲಿರುವ ಎಲ್ಲ ಅನಧಿಕೃತ ಜಾಹೀರಾತು ಫಲಕಗಳನ್ನು ಬುಡಸಮೇತವಾಗಿ ತೆರವುಗೊಳಿಸುವುದಾಗಿ ಘೋಷಣೆಸಿದ್ದ ಅವರು, ಶುಕ್ರವಾರದ ಕಾರ್ಯಾಚರಣೆಯಲ್ಲಿ ಒಂದೇ ಒಂದು ಫಲಕವನ್ನು ತೆರವುಗೊಳಿಸುವ ಗೋಜಿಗೆ ಹೋಗಲಿಲ್ಲ. ಕೇವಲ ಗೋಡೆಗಳ ಮೇಲೆ ಅಂಟಿಸಿದ್ದ ಭಿತ್ತಿಪತ್ರಗಳು, ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ತೆರವುಗೊಳಿಸಿದರು.
ಮಿನರ್ವ ವೃತ್ತದಲ್ಲಿ ಗೋಡೆಗಳ ಮೇಲಿನ ಭಿತ್ತಿಪತ್ರಗಳನ್ನು ತೆರವುಗೊಳಿಸುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಿದ ಅವರು, ಗೋಡೆಗೆ ಬಣ್ಣ ಬಳಿದು, ಕೇವಲ ಅರ್ಧ ಗಂಟೆಯಲ್ಲಿಯೇ ಕಾರ್ಯಾಚರಣೆ ಮುಗಿಯಿತು ಎನ್ನುವಂತೆ ಹೊರಟು ಹೋದರು.
ಗೋಡೆಗಳ ಮೇಲೆ ಅಂಟಿಸಿದ್ದ ಭಿತ್ತಿ ಪತ್ರಗಳು, ಮರಗಳು, ವಿದ್ಯುತ್ ಕಂಬಗಳ ಮೇಲೆ ಅಂಟಿಸಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಮರಗಳು ಹಾಗೂ ವಿದ್ಯುತ್ ಕಂಬಗಳ ಮೇಲೆ ಪೋಸ್ಟರ್ ಅಂಟಿಸುವುದು ಮತ್ತು ಫ್ಲೆಕ್ಸ್‌ಗಳನ್ನು ಅಳವಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಆದರೆ, ಸಮೀಪವಿದ್ದ ಜಾಹೀರಾತು ಫಲಕವನ್ನು ಬುಡಸಮೇತವಾಗಿ ತೆರವುಗೊಳಿಸುವ ಆದೇಶ ನೀಡಲಿಲ್ಲ. ಇದರಿಂದ ಅಧಿಕಾರಿಗಳು ಕೇವಲ ಬ್ಯಾನರ್, ಬಂಟಿಂಗ್ಸ್ ಹಾಗೂ ಭಿತ್ತಿಪತ್ರಗಳ ತೆರವಿಗೆ ಕಾರ್ಯಾಚರಣೆಯನ್ನು ಸೀಮಿತಗೊಳಿಸಿದರು.
ನಗರದಲ್ಲಿರುವ ಅಕ್ರಮ ಜಾಹೀರಾತು ಫಲಕಗಳ ಪಟ್ಟಿ ಮಾಡಿ ಕೂಡಲೇ ತೆರವುಗೊಳಿಸುವಂತೆ ತಿಳಿಸಿದ ಮೇಯರ್, ಹೈಕೋರ್ಟ್ ಆದೇಶದಂತೆ ಅನಧಿಕೃತವಾಗಿ ಫಲಕಗಳನ್ನು ಅಳವಡಿಸುವ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಉಪಮೇಯರ್ ಪದ್ಮಾವತಿ, ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಇದ್ದರು. ಕಾರ್ಯಾಚರಣೆಯ ಅಂಗವಾಗಿ ನಗರದ ವಿವಿಧ ಭಾಗಗಳಲ್ಲಿ ಪಾಲಿಕೆಯ ಸಿಬ್ಬಂದಿ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವು ಕಾರ್ಯದಲ್ಲಿ ತೊಡಗಿಕೊಂಡಿದ್ದರು.