Advertisement

ಫ್ಲೆಕ್ಸ್‌-ಗುಟ್ಕಾ-ಪ್ಲಾಸ್ಟಿಕ್‌ ನಿಷೇಧಕ್ಕೆ ಅಸ್ತು

12:22 PM Aug 01, 2017 | Team Udayavani |

ಧಾರವಾಡ: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ ನಿಷೇಧ, ಗುಟಕಾ ನಿಷೇಧ, ಪಾರ್ಕಿಂಗ್‌ ಮತ್ತು ಹಾಕರ್ ವ್ಯಾಪಾರಿಗಳಿಂದ ಹಣ ವಸೂಲಿ ನಿಷೇಧ, ಪ್ಲಾಸ್ಟಿಕ್‌ ನಿಷೇಧಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

Advertisement

ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಈ ನಿರ್ಧಾರ ಪ್ರಕಟಿಸಿ, ಒಂದು ವೇಳೆ ಕಾನೂನಿಗೆ ಗೌರವ ತೋರದೆ ಹೋದರೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಪಾಲಿಕೆ ಆಯುಕ್ತರಿಗೆ ಅಧಿಕಾರ ನೀಡಿರುವುದಾಗಿ ತಿಳಿಸಿದರು. 

ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಗಳ ಬಗ್ಗೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ ಪ್ರಸ್ತಾಪಿಸಿ, ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ತಮ್ಮ ತಮ್ಮ ಪ್ಲೆಕ್ಸ್‌ಗಳನ್ನು ಹಾಕುತ್ತಿದ್ದಾರೆ. ಅನಧಿಕೃತವಾಗಿ ಇದೊಂದು ದೊಡ್ಡ ಮಾμಯಾದಂತಾಗಿದೆ. 

ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ವಿನಯ್‌, ನಾಳೆಯಿಂದಲೇ ಅವಳಿನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳನ್ನು ಹಾಕದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಿಯಮ ಮೀರಿ ಹಾಕಿದರೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು.

ಕೇಸ್‌ ಹಾಕಲು ಪಾಲಿಕೆ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಯಾವುದೇ ಒತ್ತಡಕ್ಕೂ ಮಣಿಯದೆ ಇದನ್ನು ಜಾರಿಗೊಳಿಸಿ. ರಾಜಕಾರಣಿಗಳು ಮಾತ್ರವಲ್ಲ, ಸಂಘ-ಸಂಸ್ಥೆ, ಧಾರ್ಮಿಕ ವಿಚಾರಗಳು ಸೇರಿದಂತೆ ಯಾವುದಕ್ಕೂ ಅವಕಾಶ ಕೊಡಬೇಡಿ ಎಂದು ಹೇಳಿದರು.  

Advertisement

ಗುಟಕಾ-ಪ್ಲಾಸ್ಟಿಕ್‌ಗೂ ಕೋಕ್‌: ಗುಟಕಾ ನಿಷೇಧ ವಿಚಾರ ಪ್ರಸ್ತಾಪವಾದಾಗ ವಿಪ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ದಾವಣಗೆರೆಯಿಂದ ಪ್ರತಿದಿನ ಅವಳಿ ನಗರಕ್ಕೆ 5 ಲಾರಿ ಗುಟಕಾ ಬರುತ್ತದೆ. ಅದನ್ನು ತಿಂದು ಯುವಕರ ಆರೋಗ್ಯ ಹದಗೆಡುವುದಷ್ಟೇ ಅಲ್ಲ, ಸ್ವತ್ಛತೆ ಕೂಡ ಹಾಳಾಗುತ್ತಿದೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು. 

ಇದಕ್ಕೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಕೂಡ ಸಾಥ್‌ ನೀಡಿ, ಪ್ಲಾಸ್ಟಿಕ್‌ ನಿಷೇಧ ಆಗಿದೆಯೇ ? ಹಂದಿಗಳ ದರ್ಬಾರು ನಿಂತಿದೆಯೇ? ಎಂದು ಪ್ರಶ್ನಿಸಿದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಮತ್ತೆ ಅಧಿಕಾರಿಗಳ ಗಮನ ಸೆಳೆದು, ಒಂದು ವಾರದಲ್ಲಿ ಗುಟಕಾ ಮತ್ತು ಪ್ಲಾಸ್ಟಿಕ್‌ ನಿಷೇಧಕ್ಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  

ರಸ್ತೆ ಅಗೆತ 10 ದಿನ ಬಂದ್‌: ಒಂದೆಡೆ ಉತ್ತಮ ರಸ್ತೆಗಳನ್ನು ಮಾಡುತ್ತಿದ್ದಂತೆ ಬೇರೆ ಬೇರೆ ಕೆಲಸಗಳಿಗಾಗಿ ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಎಲ್ಲೆಂದರಲ್ಲಿ ರಸ್ತೆ ಅಗೆಯಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಪಾಲಿಕೆಯಿಂದ ಅನುಮತಿ ಪಡೆದವರು ಮಾತ್ರ ರಸ್ತೆ ಅಗೆತ ಮಾಡಬೇಕು. ಇದನ್ನು ಜಾರಿಗೊಳಿಸಲು ಸದ್ಯಕ್ಕೆ 10 ದಿನ ರಸ್ತೆ ಅಗೆತ ಬಂದ್‌ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಅಧಿಕಾರಿಗಳಿಗೆ ಆದೇಶ ನೀಡಿದರು.  

ಹಂದಿ-ಬಿಡಾಡಿ ದನ ಕಾರ್ಯಾಚರಣೆ: ಹಂದಿ ಹಾವಳಿ ಕುರಿತ ವಿಚಾರ ಪ್ರಸ್ತಾಪವಾದಾಗ ಸಭೆಯಲ್ಲಿದ್ದ ಎಲ್ಲ ಮುಖಂಡರು, ಪಾಲಿಕೆ ಸದಸ್ಯರು ಹಂದಿಗಳ ನಿರ್ಮೂಲನೆಗೆ ಒಪ್ಪಿಗೆ ಸೂಚಿಸಿದರು. ಯಾವುದೇ ಒತ್ತಡಕ್ಕೂ ಮಣಿಯದೆ ಅವಳಿ ನಗರದಲ್ಲಿ ಮಾತ್ರವಲ್ಲ, ಸುತ್ತಲಿನ ಹಳ್ಳಿಗಳಲ್ಲಿರುವ ಹಂದಿಗಳನ್ನೂ ನಿರ್ಮೂಲನೆ ಮಾಡಬೇಕು. ಜೊತೆಗೆ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ, ಬಿಡಾಡಿ ದನಗಳನ್ನು ದೂರದ ಜಿಲ್ಲೆಗಳ ಗೋಶಾಲೆಗಳಿಗೆ ಕಳುಹಿಸುವಂತೆ ಸಚಿವ ವಿನಯ್‌ ಅಧಿಕಾರಿಗಳಿಗೆ ಸೂಚಿಸಿದರು. 

ನವಲಗುಂದ ಬೈಪಾಸ್‌: ನವಲಗುಂದ ಪಟ್ಟಣದಲ್ಲಿ ಹಾದುಹೋಗುವ ಹೆದ್ದಾರಿ ಚಿಕ್ಕದಾಗಿದ್ದು, ಇದರ ಅಗಲೀಕರಣ ಮತ್ತು ಪ್ರತ್ಯೇಕ ಬೈಪಾಸ್‌ ರಸ್ತೆ ನಿರ್ಮಿಸುವ ಕುರಿತು ಸಚಿವ ವಿನಯ್‌ ಸಭೆಯಲ್ಲಿ ಪ್ರಸ್ತಾಪಿಸಿದರು. 76 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆರೆಯ ಕಾಮಗಾರಿಯನ್ನು ವೇಗಗೊಳಿಸುವಂತೆ ಶಾಸಕ ಎನ್‌.ಎಚ್‌. ಕೋನರಡ್ಡಿ ಆಗ್ರಹಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next