Advertisement
ಹೌದು, ಪಟ್ಟಣ ಪ್ರದೇಶದ ಪ್ರತಿ ಬೀದಿ, ಗಲ್ಲಿಗಳ ಪ್ರತಿ ಮನೆಗಳ ಗೇಟ್‌ಗಳ ಮುಂದೆ ನೋ ಪಾರ್ಕಿಂಗ್ ಫಲಕಗಳ ಹಾವಳಿ ಮಿತಿಮೀರಿದೆ. ಎಲ್ಲಿ ಹೋದರೂ ಈ ಕಂಪನಿಗಳ ಬಿಟ್ಟಿ ಜಾಹೀರಾತು ಕಿರಿಕಿರಿಯುಂಟು ಮಾಡುತ್ತಿದೆ. ಗಲ್ಲಿಯಲ್ಲಿ ಸಣ್ಣ ವಾಹನಗಳು ಹೋಗಲೂ ಸಹ ಜಾಗವಿಲ್ಲದಿದ್ದರೂ ಅಲ್ಲಿಯೂ ನೋ ಪಾರ್ಕಿಂಗ್ ಬೋರ್ಡ್ ತಗುಲಿಸಲಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಹಾಕಲಾಗಿದ್ದು, ಎಲ್ಲಿ ವಾಹನ ನಿಲ್ಲಿಸಬೇಕೆಂದು ಸಣ್ಣ ವಾಹನ ಸವಾರರು ತಲೆಕೆಡಿಸಿಕೊಂಡಿದ್ದಾರೆ.
Related Articles
Advertisement
ಅಕ್ರಮ ನಾಮ ಫಲಕ ಅಳವಡಿಕೆ: ಯಾವುದೇ ಅನುಮತಿ ಪಡೆಯದೆ, ಶುಲ್ಕವನ್ನೂ ಪಾವತಿಸದೇ ಅಕ್ರಮವಾಗಿ ನಾಮ ಫಲಕಗಳು ನಗರ ಪ್ರದೇಶದ ಎಲ್ಲೆಡೆ ಕಾಣುತ್ತಿದ್ದರೂ, ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಸುಮ್ಮನಿದ್ದಾರೆ.
ಕೇವಲ ಹೆದ್ದಾರಿಯಲ್ಲಿ ಕಾಣುವ ಫ್ಲೆಕ್ಸ್ ತೆರವು ಮಾಡುವುದಷ್ಟೇ ನಮ್ಮ ಕೆಲಸ ಎಂದುಕೊಂಡಿರುವ ಪರಿಸರ ವಿಭಾಗದ ಅಧಿಕಾರಿಗಳು, ಪಟ್ಟಣದ ಸೌದರ್ಯವನ್ನು ಹಾಳು ಮಾಡುವ ಅನಧಿಕೃತ ಬೋರ್ಡ್‌ಗಳನ್ನು ಏಕೆ ತೆರವುಗೊಳಿಸಿಲ್ಲ. ಅಕ್ರಮವಾಗಿ ಹಾಕಿರುವವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ನಾಗರಿಕರ ಪ್ರಶ್ನೆಯಾಗಿದೆ.
ಅನುಮತಿಯೇ ಪಡೆದಿಲ್ಲ: ಇನ್ನು ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಉದ್ಯಮವಿರಲಿ, ಖಾಸಗಿ ವ್ಯಕ್ತಿಗಳಿರಲಿ ತಮ್ಮ ಸಂಸ್ಥೆಗೆ ಸಂಬಂಧಿಸಿದ ಅಥವಾ ವೈಯಕ್ತಿಕ ಫಲಕಗಳನ್ನು, ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವ ಮುಂಚೆ ಸಂಬಂಧಪಟ್ಟ ನಗರಸಭೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಇಲ್ಲಿ ಆ ನಿಯಮವನ್ನು ಗಾಳಿಗೆ ತೂರಲಾಗಿದೆ. ನೋ ಪಾರ್ಕಿಂಗ್ ಅಥವಾ ಬಸ್ ನಿಲ್ದಾಣದ ಮಾಹಿತಿಯನ್ನು ಹಾಕಲು ಇವರಿಗೆ ಅನುಮತಿ ನೀಡಿದವರು ಯಾರು? ಸಂಬಂಧಪಟ್ಟ ಮನೆಯವರ ಅನುಮತಿ ಪಡೆದಿದ್ದಾರಾ ಅಥವಾ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆದಿದ್ದಾರಾ ಎಂಬುದು ಜಿಜ್ಞಾಸೆ ಮೂಡಿಸಿದೆ.
ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ನಗರದ ಸೌಂದರ್ಯಕ್ಕೆ ಧಕ್ಕೆಯುಂಟುಮಾಡುತ್ತಿರುವ ಫಲಕಗಳನ್ನು ಕೂಡಲೇ ತೆರವುಗೊಳಿಸಬೇಕಿದೆ. ಹಾಗೆಯೇ ಬಿಟ್ಟಿ ಪ್ರಚಾರ ಪಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
● ಎಂ.ಶಿವಮಾದು