Advertisement
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಕರಡು ನಿಯಮಕ್ಕೆ ಕೆಲವು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಅಯುಕ್ತ ಎನ್. ಮಂಜುನಾಥ ಪ್ರಸಾದ್, ಶೀಘ್ರದಲ್ಲೇ ಈ ಕರಡು ಬೈಲಾವನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು. ನಂತರ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ತದನಂತರ ಆಕ್ಷೇಪಣೆಗಳಿಗೆ ಆಹ್ವಾನಿಸಲಾಗುತ್ತದೆ. ಆಮೇಲೆ ಮತ್ತೂಮ್ಮೆ ಅನುಮೋದನೆ ಪಡೆದು, ಅಧಿಸೂಚನೆ ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
Related Articles
Advertisement
ವಾಣಿಜ್ಯ ಮಳಿಗೆಗಳ ಹೊರಭಾಗದಲ್ಲಿ ಯಾವುದೇ ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶನ ಮಾಡುವಂತಿಲ್ಲ. ಆ ಅಂಗಡಿಯ ಹೆಸರು ಮತ್ತು ಅಗತ್ಯ ಮಾಹಿತಿಗೆ ಫಲಕ ಸೀಮಿತವಾಗಿರತಕ್ಕದ್ದು ಎಂದು ಮಂಜುನಾಥ ಪ್ರಸಾದ್ ಸ್ಪಷ್ಟಪಡಿಸಿದರು. ನಗರದ ಸೌಂದರ್ಯ, ಪರಿಸರ (ಜಾಹೀರಾತು ಕಾಣಲೆಂದು ಮರಗಳನ್ನು ಕಡಿಯಲಾಗುತ್ತಿತ್ತು) ಮತ್ತು ನಾಗರಿಕರ ಸುರಕ್ಷತೆ. ಈ ಹಿನ್ನೆಲೆಯಲ್ಲಿ ಶಾಶ್ವತವಾಗಿ ನಿಷೇಧಿಸಲಾಗಿದೆ. ಮುಂದಿನ ಬೈಲಾವರೆಗೂ ಈ ನಿಯಮ ಮುಂದುವರಿಯಲಿದೆ ಎಂದು ತಿಳಿಸಿದರು.
ಚಲನ ಚಿತ್ರಗಳಿಗೆ ಅಗತ್ಯ: ಕನ್ನಡ ಚಲನಚಿತ್ರಗಳ ಹಿತದೃಷ್ಟಿಯಿಂದ ನಗರದ ನಿರ್ದಿಷ್ಟ ಜಾಗಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಆ ಜಾಗದ ನಿರ್ವಹಣೆಯನ್ನು ಸ್ವತಃ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ಜಂಟಿಯಾಗಿ ವಹಿಸಿಕೊಳ್ಳಲಿದೆ ಶುಲ್ಕವನ್ನೂ ನೀಡಲಿದೆ ಎಂದು ಸಭೆಯಲ್ಲಿ ಶಾಸಕ ಮುನಿರತ್ನ ತಿಳಿಸಿದರು. ಈ ಬಗ್ಗೆ ಪಾಲಿಕೆ ಆಯುಕ್ತರು ನ್ಯಾಯಾಲಯದ ಗಮನಕ್ಕೆ ತರಬೇಕು. ಕನ್ನಡ ಚಲನಚಿತ್ರಗಳ ಅಭಿವೃದ್ಧಿಗಾಗಿ ಇದು ಅಗತ್ಯವಾಗಿದೆ ಎಂದು ಗಮನ ಸೆಳೆದರು.
ಪಾಲಿಕೆಗೂ ಪಾಲು ಬೇಕು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣ, “ನಮ್ಮ ಮೆಟ್ರೋ’ ಮಾರ್ಗದುದ್ದಕ್ಕೂ ಕಂಬಗಳ ಮೇಲೆ ಜಾಹೀರಾತು ಅಳವಡಿಸಲಾಗಿದ್ದು, ಇದರಲ್ಲಿ ಬರುವ ಆದಾಯದಲ್ಲಿ ಪಾಲಿಕೆಗೂ ಪಾಲು ನೀಡಬೇಕು ಎಂಬ ಒತ್ತಾಯ ಬಿಬಿಎಂಪಿ ಸಭೆಯಲ್ಲಿ ಕೇಳಿಬಂತು. “ಒಂದು ವೇಳೆ ವಿಮಾನ ನಿಲ್ದಾಣದ ಆವರಣದಲ್ಲಿ ಹಾಕಲಾದ ಹೋರ್ಡಿಂಗ್‌ಗಳು ಪಾಲಿಕೆಗೆ ಸಂಬಂಧ ಇಲ್ಲ’ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ ವಾದಿಸುವುದಾದರೆ, ಅದಕ್ಕೆ ಸಂಪರ್ಕ ರಸ್ತೆ ಬಿಬಿಎಂಪಿಗೆ ಸೇರಿದೆ.
ಆದ್ದರಿಂದ ರಸ್ತೆ ತೆರಿಗೆ ವಿಧಿಸಲು ಸೂಚಿಸಬೇಕು. ಅದೇ ರೀತಿ, ಮೆಟ್ರೋ ಮಾರ್ಗದಲ್ಲಿ ಈ ಮೊದಲು ವಿದ್ಯುತ್ ಕಂಬಗಳಿದ್ದವು. ಅದರ ಮೇಲೆ ಹೋರ್ಡಿಂಗ್‌ಗಳನ್ನು ಹಾಕಲಾಗಿತ್ತು. ಇದರಿಂದ ಪಾಲಿಕೆಗೆ ಆದಾಯ ಬರುತ್ತಿತ್ತು. ಈಗ ಆ ಜಾಗದಲ್ಲಿ ವಾಣಿಜ್ಯ ಮಳಿಗೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಬಿಎಂಆರ್‌ಸಿ ಸಾಕಷ್ಟು ಆದಾಯ ಗಳಿಸುತ್ತಿದೆ. ಬಿಬಿಎಂಪಿಗೆ ಅದರ ಪಾಲು ಸಿಗುತ್ತಿಲ. ಈ ಬಗ್ಗೆಯೂ ಚಿಂತನೆ ನಡೆಸಬೇಕು ಎಂದು ಸಲಹೆ ಮಾಡಿದರು.
ಯಾವುದು ನಿಷಿದ್ಧ?: ವಾಣಿಜ್ಯ ಹೋರ್ಡಿಂಗ್‌ಗಳು, ಎಲೆಕ್ಟ್ರಾನಿಕ್ ಜಾಹೀರಾತು ಪ್ರದರ್ಶನ, ನಿರಂತರ ಸಂದೇಶ ಪ್ರಸಾರ ಮಾಡುವುದು, ಧ್ವನಿವರ್ಧಕದ ಮೂಲಕ ಬಿತ್ತರಿಸುವುದು, ಬಲೂನುಗಳ ಮೂಲಕ ಜಾಹೀರಾತು ಪ್ರದರ್ಶನ.
ಯಾವುದಕ್ಕೆ ಅವಕಾಶ?: ಸಾರ್ವಜನಿಕರಿಗೆ ಸಂಬಂಧಿಸಿದ ಮಾಹಿತಿ, ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವ ಜಾಹೀರಾತು ಪ್ರದರ್ಶನ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಬಿತ್ತರಿಸಲು ಅವಕಾಶ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿನ ಜಾಹೀರಾತು ಪ್ರದರ್ಶನಗಳು (ಸ್ಕೈವಾಕ್, ಸಾರ್ವಜನಿಕ ಶೌಚಾಲಯ, ಬಸ್ ಶೆಲ್ಟರ್‌ಗಳ ಮೇಲೆ ಮಾತ್ರ).