ಮುಂಬಯಿ: ಪಾದದ ಗಾಯದಿಂದಾಗಿ ಹಿರಿಯ ಆಟಗಾರಗ ಮೊಯಿನ್ ಅಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಇನ್ನೂ ಕೆಲವು ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಇಂಗ್ಲೆಂಡಿನ ಆಲ್‌ರೌಂಡರ್ ಆಗಿರುವ ಮೊಯಿನ್ ಅಲಿ ವಾರದೊಳಗೆ ಗಾಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ಶನಿವಾರ ನಡೆದ ತಂಡದ ಅಭ್ಯಾಸದ ವೇಳೆ ಮೊಯಿನ್ ಅಲಿ ಗಾಯಗೊಂಡಿದ್ದರು. ಇದರಿಂದಾಗಿ ಸೋಮವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಈ ಪಂದ್ಯದಲ್ಲಿ ಚೆನ್ನೈ 11 ರನ್ನುಗಳಿಂದ ಸೋಲನ್ನು ಕಂಡಿದೆ. ಅವರು ಎಪ್ರಿಲ್ 17ರಂದು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಪರ ಆಡಿದ್ದರು.
ಅವರ ಪಾದ ಟ್ವಿಸ್ಟ್ ಆಗಿದೆ. ಎಕ್ಸ್‌ರೆಯಲ್ಲಿ ಯಾವುದೇ ಮುರಿತ ಆಗಿರುವುದು ಕಂಡು ಬಂದಿಲ್ಲ. ಆದರೆ ಗಾಯದಿಂದ ಚೇತರಿಸಿಕೊಳ್ಳಲು ಏಳು ದಿನಗಳ ಅಗತ್ಯವಿದೆ. ಮುರಿತ ಆಗದ ಕಾರಣ ಅವರು ಬೇಗ ಚೇತರಿಸಿಕೊಳ್ಳಬಹುದು ಎಂದು ಫ್ಲೆಮಿಂಗ್ ತಿಳಿಸಿದರು.
ಮೊಯಿನ್ ಅಲಿ ಅವರು ಚೆನ್ನೈ ತಂಡದ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರ ಉತ್ತಮ ನೆರವಿನಿಂದ ಚೆನ್ನೈ ಕಳೆದ ವರ್ಷ ಪ್ರಶಸ್ತಿ ಗೆದ್ದಿತ್ತು. ಆದರೆ ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಅವರು ಬ್ಯಾಟಿಂಗ್, ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 48 ರನ್ ಸಹಿತ ಅವರು ಇಷ್ಟರವರೆಗೆ ಈ ಋತುವಿನಲ್ಲಿ ಕೇವಲ 87 ರನ್ ಗಳಿಸಿದ್ದಾರೆ. ಒಟ್ಟಾರೆ 8 ಓವರ್ ಎಸೆದಿದ್ದು 68 ರನ್ ಬಿಟ್ಟುಕೊಟ್ಟಿದ್ದಾರೆ. ವಿಕೆಟ್ ಪಡೆಯಲು ವಿಫಲರಾಗಿದ್ದಾರೆ.
ಚೆನ್ನೈಗೆ ಗಾಯದ ಸಮಸ್ಯೆ
ಚೆನ್ನೈ ತಂಡವು ಈ ಋತುವಿನಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ದೀಪಕ್ ಚಹರ್ ಮತ್ತು ಆ್ಯಡಂ ಮಿಲ್ನೆ ಈಗಾಗಲೇ ಗಾಯದ ಸಮಸ್ಯೆಯಿಂದ ಕೂಟದಿಂದ ಹೊರಬಿದ್ದಿದ್ದಾರೆ. ಸೋಮವಾರ ಅಂಬಾಟಿ ರಾಯುಡು ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದು ಚಿಕಿತ್ಸೆ ಪಡೆಯಬೇಕಾದ ಅಗತ್ಯವಿದೆ.