ದಾವಣಗೆರೆ: ಬಿಸಿ ಬಿಸಿ ಪರೋಟ, ಬಿಳಿ ಹೋಳಿಗೆ, ಮೆಂತೆ ರೈಸ್, ಜಪಾನಿ ದಾಲ್, ರಾಗಿ ಜ್ಯೂಸ್…. ಹೀಗೆ ದೇಶಿಯ ಖಾದ್ಯದಿಂದ ವಿದೇಶಿ ತಿಂಡಿ ತಿನಿಸುಗಳು ಕಾಲೇಜಿನ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಹಾರ ಮೇಳದಲ್ಲಿ ಘಮಘಮಿಸಿದವು.
ಎಸ್‌ಎಸ್ ಬಡಾವಣೆಯ ಎ ಬ್ಲಾಕ್‌ನ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಬಿ.ಎಸ್.ಸಿ. ಫುಡ್ ಫೆಸ್ಟ್ -2018ರ ಮೇಳ ಈ ವೈಶಿಷ್ಟಪೂರ್ಣ ತಿನಿಸುಗಳಿಗೆ ವೇದಿಕೆ ಒದಗಿಸಿತ್ತು. ಅಂತಿಮ ಬಿಸಿಎ ವಿದ್ಯಾರ್ಥಿಗಳ ತಂಡ ಸಮೋಸ, ಮೆಂತೆ ರೈಸ್, ಪರೋಟಾ ಕರಿ, ಶ್ಯಾವಿಗೆ ಖೀರು ತಯಾರಿಸಿ, ಮಾರಾಟ ಮಾಡಿದರೆ, ದ್ವಿತೀಯ ಬಿ.ಕಾಂ ವಿನು, ಅಜಯ್ ತಂಡ ತಯಾರಿಸಿದ್ದ ಫುಲ್ಕಾ, ಕ್ರಂಬಲ್ ಕೋನ್, ಫ್ರೂಟಿ ಬ್ರಿಸ್, ಮಸಾಲ ಬುಲ್ಪ್ ವಿದೇಶಿ ತಿನಿಸುಗಳು ಗಮನ ಸೆಳೆದವು.
ಪ್ರಥಮ ಬಿ.ಕಾಂ ವಿದ್ಯಾರ್ಥಿಗಳ ತಂಡ ಸಿದ್ಧಪಡಿಸಿದ ಮೆಂತೆ ಚಪಾತಿ, ಪಾಲಕ್ ಪನೀರ್, ಹಾರ್ಲಿಕ್ಸ್ ಬರ್ಫಿ, ವೆಜ್ ರೋಲರ್, ವೆಜ್ ಬಿರಿಯಾನಿ ಹೀಗೆ ಬಗೆಬಗೆಯ ತಿಂಡಿ ತಿನಿಸುಗಳಲ್ಲಿ ಕೆಲವನ್ನು ವಿದ್ಯಾರ್ಥಿಗಳು ತಾವೇ ಸ್ವಯಂ ತಯಾರಿಸಿದರೆ ಇನ್ನೂ ಕೆಲವನ್ನು ಕ್ಯಾಟರಿಂಗ್ ಮೂಲಕ ತರಿಸಿ ಮೇಳದಲ್ಲಿ ಹೋಟೆಲ್ ಉದ್ಯಮದ ಅನುಭವ ಪಡೆದರು.
ಬಿಎಸ್‌ಸಿ ಪ್ರಥಮ, ದ್ವಿತೀಯ ಹಾಗೂ ಅಂತಿಮ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಈ ಆಹಾರ ಮೇಳದಲ್ಲಿ ಒಬ್ಬರು ಮಾರ್ಗದರ್ಶಕರು ಹಾಗೂ ತರಗತಿವಾರು ವಿದ್ಯಾರ್ಥಿಗಳ ತಂಡ ರಚಿಸಲಾಗಿತ್ತು. ಒಂದೊಂದು ಸ್ಟಾಲ್ ಕೂಡ ಶಿಸ್ತುಬದ್ಧವಾಗಿ ಹಾಕಿಕೊಂಡು ಎಲ್ಲಾ ರೀತಿಯ ತಿನಿಸುಗಳನ್ನು ಜೋಡಿಸಿ, ಗ್ರಾಹಕರಿಗೆ ಪರಿಚಯಿಸಿ, ಮಾರಾಟ ಮಾಡಿದರು.
ವಿದ್ಯಾರ್ಥಿಗಳು ಕಲರ್‌ಫುಲ್ ಉಡುಗೆ ತೊಟ್ಟು ಉತ್ಸಾಹದಿಂದ ಆಹಾರ ಮೇಳದಲ್ಲಿ ಭಾಗವಹಿಸಿದ್ದು, ಆವರಣದ ತುಂಬೆಲ್ಲಾ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಮಳೆರಾಯ ಕೊಂಚ ಅಡ್ಡಿ ಉಂಟು ಮಾಡಿದರೂ ಆಹಾರ ಮೇಳ ಯಶಸ್ವಿಯಾಯಿತು.ಫುಡ್ ಫೆಸ್ಟ್-2018ಕ್ಕೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್ ಚಾಲನೆ ನೀಡಿದರು. ಪ್ರಾಂಶುಪಾಲ ಷಣ್ಮುಖಸ್ವಾಮಿ, ಅಥಣಿ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್, ಕಾಲೇಜಿನ ಸದಸ್ಯರಾದ ಅಥಣಿ ಪ್ರಶಾಂತ್, ಸುಗಂಧರಾಜ್ ಶೆಟ್ರಾ, ದೀಪಾ ಶಿವಕುಮಾರ್, ಕಾರ್ಯದರ್ಶಿ ಎಂ.ಎಸ್. ನಿಜಾನಂದ್, ಪ್ರಾಧ್ಯಾಪಕರಾದ ಗುರು, ಸಂತೋಷ್, ಲೋಕೇಶ್, ಈಶ್ವರ್, ಸತೀಶ್ ಮತ್ತಿತರಿದ್ದರು.
ವ್ಯವಹಾರಿಕ ಜ್ಞಾನ
ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿದ್ದು, ಆಹಾರ ಮೇಳದ ಮೂಲಕ ಅವರಲ್ಲಿ ವ್ಯಾಪಾರದ ಅನುಭವ ಹಾಗೂ ಮಾರುಕಟ್ಟೆ ಜ್ಞಾನವನ್ನು ಪ್ರಾಯೋಗಿಕವಾಗಿ ಬಿತ್ತುವ ಉತ್ತಮ ಕಾರ್ಯ ಇದಾಗಿದೆ. ಈ ರೀತಿಯ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ. ಇದಕ್ಕೆ ನಮ್ಮ ಸಹಕಾರದ ಜೊತೆಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರಕುತ್ತಿದೆ.
ಬಿ.ಸಿ. ಶಿವಕುಮಾರ್, ಬಿಎಸ್‌ಸಿ ಕಾಲೇಜು ಅಧ್ಯಕ್ಷರು.
ಕಲಿತದ್ದು ಪ್ರಯೋಜನ….
ನಿತ್ಯ ಮನೆಯಲ್ಲಿ ತಾಯಿ, ಅಕ್ಕನ ಜೊತೆ ಕೂಡಿ ಅಡುಗೆ ಮಾಡುವುದನ್ನು ಕಲಿತಿದ್ದೆ. ಆ ಅನುಭವ ಆಹಾರ ಮೇಳಕ್ಕೆ ಅನುಕೂಲವಾಯಿತು. ಅಲ್ಲದೇ ನಮ್ಮಲ್ಲಿ ವ್ಯಾಪಾರದ ಬಗ್ಗೆ ಅರಿವು ಮೂಡಿಸಿದ್ದು ಹಾಗೂ ಕಾಲೇಜಿನಲ್ಲಿ ಅಡುಗೆ ಮಾಡಿದ್ದು ಮತ್ತಷ್ಟು ಸಂತೋಷ ಉಂಟುಮಾಡಿದೆ.
ಸಿಂಧು, ಅಂತಿಮ ಬಿಸಿಎ ವಿದ್ಯಾರ್ಥಿನಿ.