Advertisement

ಫ್ಲಾಟ್‌ ಆಸೆ ತೋರಿಸಿ 100 ಕೋಟಿ ವಂಚನೆ

06:41 AM Jan 04, 2019 | |

ಬೆಂಗಳೂರು: ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲಾಟ್‌ ಕೊಡಿಸುವುದಾಗಿ ಸಾವಿರಾರು ಜನರಿಂದ 100 ಕೋಟಿ ರೂ.ಗಿಂತಲೂ ಹೆಚ್ಚು ಹಣ ಪಡೆದು ವಂಚಿಸಿದ ಮಂಗಳೂರು ಮೂಲದ ಅವಿನಾಶ್‌ ಪ್ರಭು ಎಂಬಾತನನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ಹಲವು ವರ್ಷಗಳಿಂದ ಫ್ಲಾಟ್‌ಕೊಡಿಸುವುದಾಗಿ ಆಸೆ ತೋರಿಸಿ ಹಣ ಸಂಗ್ರಹಿಸಿದ್ದ ಆರೋಪಿ ಸ್ಕೈಲೈನ್‌ ಕನ್‌ಸ್ಟ್ರಕ್ಷನ್‌ ಹೌಸಿಂಗ್‌ ಪ್ರೈ.ಲಿನ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್‌ ಪ್ರಭು, ಬೆಂಗಳೂರಿನ ವಿವಿಧ ಭಾಗಗಳಲ್ಲಿ 11 “ಕಲ್ಮನೆ ಕಾಫಿ ಔಟ್‌ಲೆಟ್‌’ಗಳು, ಬೆಂಗಳೂರು, ಮಂಗಳೂರು, ಚೆನೈ, ಕನಕಪುರ ಸೇರಿ ನಗರದ ಹಲವು ಭಾಗಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಜಮೀನು ಖರೀದಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಆರೋಪಿ ಅವಿನಾಶ್‌ ಪ್ರಭು, ಫ್ಲಾಟ್‌ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಕ್ರಿಸ್ಟೋಫ‌ರ್‌ ರೀಗಲ್‌ ಎಂಬುವವರು ದೂರು ನೀಡಿದ್ದರು. ಈ ಕುರಿತು ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ವರ್ಗಾವಣೆಯಾದ ಬಳಿಕ ತನಿಖೆ ಚುರುಕುಗೊಳಿಸಿದ ಸಿಸಿಬಿ ಡಿಸಿಪಿ ಗಿರೀಶ್‌ ನೇತೃತ್ವದ ತಂಡ, ಆರೋಪಿ ಅವಿನಾಶ್‌ ಪ್ರಭುನನ್ನು ಬಂಧಿಸಿದೆ.

ಜತೆಗೆ, ಆತನ ಬಳಿಯಿದ್ದ ಒಂದು ರೇಂಜ್‌ ರೋವರ್‌, ಅಡಿ ಹಾಗೂ ಇನೋವಾ ಕಾರನ್ನು ಜಪ್ತಿ ಮಾಡಿಕೊಂಡಿದೆ. ತಲೆ ಮರೆಸಿಕೊಂಡಿರುವ ಆತನ ಸಹೋದರ ಧೀರಜ್‌ ಪ್ರಭು ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

28 ಎಕರೆ ಜಮೀನು ಖರೀದಿ: ಆರೋಪಿ ಅವಿನಾಶ್‌ ಹಾಗೂ ಆತನ ಸಹೋದರ  ಕೆ.ನಾರಾಯಣಪುರ ಬಳಿ ಸ್ಕೈಲೈನ್‌ ಔರಾ, ಹೊರಮಾವುನಲ್ಲಿ ಸ್ಕೈಲೈನ್‌ ರಿಟ್ರೀಟ್‌, ಹೆಣ್ಣೂರು ಮುಖ್ಯರಸ್ತೆಯ ಸ್ಕೈಲೈನ್‌ ಅಕೇಶಿಯಾ,  ರೆಸ್ಟ್‌ ಹೌಸ್‌ ರಸ್ತೆಯ ಸ್ಕೈಲೈನ್‌ ಲ್ಲಾ ಮಾರಿಯಾ, ಯಲಹಂಕ ಬಳಿ ಸ್ಕೈಲೈನ್‌ ವಾಟರ್‌ ಫ್ರಂಟ್‌-78 ಮಂಗಳೂರಿನಲ್ಲಿ ಸ್ಕೈಲೈನ್‌ ಬ್ಲೂಬೇರಿ, ಮತ್ತು ಬೆಸ್ಟ್‌ ಹೌಸ್‌ ಹೆಸರುಗಳಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿ  ಫ್ಲ್ಯಾಟ್‌ ನೀಡುವುದಾಗಿ ತಿಳಿಸಿ ಇದುವರೆಗೂ 200ಕ್ಕೂ ಅಧಿಕ ಮಂದಿಯಿಂದ 100 ಕೋಟಿ.ರೂಗಳಿಗೂ ಅಧಿಕ ಹಣ ಸಂಗ್ರಹಿಸಿದ್ದಾರೆ.

Advertisement

ಜನರಿಂದ ಸಂಗ್ರಹಿಸಿದ ಹಣದಲ್ಲಿ ಕೆಂಗೇರಿಯಲ್ಲಿ 5 ಎಕರೆ, ಅಲ್ಲಾಳಸಂದ್ರ ಬಳಿ 3 ಎಕರೆ, ಹೆಣ್ಣೂರು ಬಳಿ 3 ಎಕರೆ, ಕನಕಪುರ ಬಳಿ 7 ಎಕರೆ, ಮಂಗಳೂರಿನಲ್ಲಿ 8.5 ಎಕರೆ, ಚೆನ್ನೈನ ನೆಲ್ಸನ್‌ ಮಾಣಿಕ್ಯಂ ರಸೆಯಲ್ಲಿ ಅರ್ಧ ಎಕರೆ ಸೇರಿದಂತೆ ಬೆಂಗಳೂರು ಹಾಗೂ ಹೊರ ರಾಜ್ಯಗಳಲ್ಲಿ ಆರೋಪಿಯು ಜಮೀನು ಖರೀದಿಸಿದ್ದಾನೆ. ಜತೆಗೆ ಬೆಂಗಳೂರಿನ 11 ಕಡೆ ಇರುವ ಕ್ಮಲನೆ ಕಾಫಿ ಲೇಔಟ್‌ಗಳಲ್ಲಿ ಹಣ ಹೂಡಿಕೆ ಮಾಡಿರುವುದು ತನಿಖೆ ವೇಳೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ

ವಂಚನೆ ಹೇಗೆ?: ಸ್ಕೈಲೈನ್‌ ಔರಾ ಸೇರಿ ವಿವಿಧ ಕನ್‌ಸ್ಟ್ರಕ್ಷನ್‌ ಕಂಪನಿಗಳ ಹೆಸರಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣ ಮಾಡಿ ಫ್ಲಾಟ್‌ ನೀಡುವುದಾಗಿ ಜನರಿಗೆ ಹೇಳುತ್ತಿದ್ದ ಆರೋಪಿತ ಸಹೋದರರು, ಜನರಿಂದ ಫ್ಲಾಟ್‌ಗೆ ನೀಡಬೇಕಾಗಿರುವ ಮೊತ್ತದ ಶೇ.90ರಷ್ಟ ಹಣವನ್ನು ಮುಂಗಡವಾಗಿ ಪಡೆಯುತ್ತಿದ್ದರು. ಅದಕ್ಕೆ ಪ್ರತಿಯಾಗಿ ಅಪಾರ್ಟ್‌ಮೆಂಟ್‌ ನಿರ್ಮಾಣ ಕಾಮಗಾರಿಯನ್ನು ತೋರಿಸುತ್ತಿದ್ದರು.

ಇದಾದ ಬಳಿಕ ನಿಯಮಗಳನ್ನು ಉಲ್ಲಂ ಸಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಕಾನೂನು ತೊಡಕುಗಳು ಉಂಟಾಗುವುಂತೆ ನೋಡಿಕೊಳ್ಳುತ್ತಿದ್ದರು. ಬಳಿಕ ಹಣ ನೀಡಿದವರು ಫ್ಲಾಟ್‌ ನೀಡುವಂತೆ ಕೇಳಿದರೆ, ಕಾನೂನು ತೊಡಕುಗಳ ಬಗ್ಗೆ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಹಣ ವಾಪಾಸ್‌ ನೀಡುವಂತೆ ಕೇಳಿದರೂ ನೆಪಗಳನ್ನು ಹೇಳುತ್ತಿದ್ದರು. ಇದೇ ಮಾದರಿಯಲ್ಲಿ ಸಂಗ್ರಹಿಸಿದ ಹಣವನ್ನು ಜಮೀನು ಖರೀದಿಗೆ ತೊಡಗಿಸುತ್ತಿದ್ದರು. ಹಲವು ವರ್ಷಗಳಿಂದ ಇದೇ ಮಾದರಿಯ ವಂಚನೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮೋಸ ಹೋದವರು ದೂರು ನೀಡಬಹುದು: ಆರೋಪಿಗಳ ವಿರುದ್ಧ ಸದ್ಯ ಇಬ್ಬರು ದೂರು ನೀಡಿದ್ದು, ತನಿಖೆ ಮುಂದುವರಿಸಲಾಗಿದೆ. ಆರೋಪಿಗಳು ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ವಂಚನೆಗೊಳಗಾದವರು ಸಿಸಿಬಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next