Advertisement

ವಸತಿ ರಹಿತ ಬಡವರಿಗೆ ಫ್ಲ್ಯಾಟ್‌; ಲಾಟರಿ ಮೂಲಕ ಹಂಚಿಕೆ

10:44 AM Jan 17, 2018 | Team Udayavani |

ಮಹಾನಗರ: ನಗರದಲ್ಲಿ ವಸತಿ ರಹಿತ ಬಡವರಿಗೆ ಇದೇ ಮೊದಲ ಬಾರಿಗೆ ಫ್ಲ್ಯಾಟ್‌ಗಳನ್ನು ಕೇಂದ್ರ/ರಾಜ್ಯ ಸರಕಾರ,
ಮಂಗಳೂರು ಪಾಲಿಕೆ ಹಾಗೂ ಫಲಾನುಭವಿಗಳ ಮೊತ್ತದಿಂದ ನಿರ್ಮಿಸಿ ಕೊಡಲು ನಿರ್ಧರಿಸಲಾಗಿದ್ದು, ಲಾಟರಿ ಮೂಲಕ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಮಂಗಳವಾರ ಪುರಭವನದಲ್ಲಿ ನಡೆಯಿತು.

Advertisement

ಯೋಜನೆಯ ಮೊದಲ ಹಂತವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರಾಶ್ರಯ ಸಮಿತಿ ಆಶ್ರಯದಲ್ಲಿ
ಶಕ್ತಿನಗರ ಸಮೀಪದ ರಾಜೀವನಗರದ 10 ಎಕ್ರೆ ಪ್ರದೇಶದಲ್ಲಿ ಜಿ+3 ಮಾದರಿಯಲ್ಲಿ (ನೆಲಮಹಡಿ ಹಾಗೂ 3 ಮಹಡಿಗಳ ಅಪಾರ್ಟ್‌ಮೆಂಟ್‌) ಸುಮಾರು 930 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇವರ ಪೈಕಿ ಯಾರಿಗೆ ಯಾವ ಫ್ಲ್ಯಾಟ್‌ನ, ಯಾವ ಬ್ಲಾಕ್‌ನಲ್ಲಿ ಮನೆ ಎಂಬುದನ್ನು ಲಾಟರಿ ಎತ್ತಿ ಹಂಚಿಕೆ ಮಾಡಲಾಯಿತು. ಜಿ+3 ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಲ್ಲಿ 28 ಅಂಗವಿಕಲ ಫಲಾನುಭವಿಗಳಿಗೆ ಈಗಾಗಲೇ ನೆಲಹಂತದ ಮನೆಗಳನ್ನು ಮೀಸಲಾಗಿರಿಸಲಾಗಿದೆ. ಉಳಿಕೆ ಮನೆಗಳನ್ನು ಆಯ್ಕೆಗೊಂಡ ಫಲಾನುಭವಿಗಳಿಗೆ ವಿತರಿಸಲಾಯಿತು.

ಈಗಾಗಲೇ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಮೋದನೆ ನೀಡಿದೆ. ಪ್ರತಿಯೊಂದು ಫ್ಲ್ಯಾಟ್‌ನ ನಿರ್ಮಾಣ ವೆಚ್ಚ 5 ಲಕ್ಷ ರೂ.ಗಳಾಗಿದ್ದು, ಈ ಯೋಜನೆಗೆ ಅವಶ್ಯವಿರುವ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರಕಾರ, ಮಹಾನಗರಪಾಲಿಕೆ ನಿಧಿ, ಫಲಾನುಭವಿಗಳ ವಂತಿಗೆ ಹಾಗೂ ಫಲಾನುಭವಿಗಳ ಬ್ಯಾಂಕ್‌ ಸಾಲದಿಂದ ಹೊಂದಿಸಲಾಗುತ್ತದೆ. ಫಲಾನುಭವಿಗಳು ಬ್ಯಾಂಕ್‌ ಸಾಲ ಪಡೆಯಲು ಅವರಿಗೆ ಹಂಚಿಕೆ ಮಾಡುವ ನಿರ್ದಿಷ್ಟ ಫ್ಲ್ಯಾಟ್‌ ಸಂಖ್ಯೆ ಅಗತ್ಯವಾಗಿ ಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ನಗರಾಶ್ರಯ ಸಮಿತಿ ಆಶ್ರಯದಲ್ಲಿ ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಲಾಟರಿ ಮೂಲಕ ಆಯ್ಕೆ ಮಾಡಿ, ಹಂಚಿಕೆ ಮಾಡಲಾಯಿತು. ಫ್ಲ್ಯಾಟ್‌ ಸಂಖ್ಯೆ ಹಂಚಿಕೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಯೋಜನೆಯಲ್ಲಿ ಫಲಾನುಭವಿಗಳು ಬ್ಯಾಂಕ್‌ ಸಾಲ ಪಡೆಯಲು ಅವರಿಗೆ ಹಂಚಿಕೆ ಮಾಡಲಾಗುವ ನಿರ್ದಿಷ್ಟ ಫ್ಲ್ಯಾಟ್‌ ಸಂಖ್ಯೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಗರಾಶ್ರಯ ಸಮಿತಿಯಲ್ಲಿ ಈಗಾಗಲೇ ಆಯ್ಕೆಯಾಗಿರುವ ಎಲ್ಲ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲ್ಯಾಟ್‌ಗಳನ್ನು ಹಂಚಲು ಪೂರಕವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಬಹುಕಾಲದ ಬೇಡಿಕೆ ಈಡೇರಿಕೆ: ಲೋಬೋ
ಶಾಸಕ ಜೆ.ಆರ್‌.ಲೋಬೋ ಮಾತನಾಡಿ, ಮಂಗಳೂರಿನಲ್ಲಿ ಮನೆಗಳಿಗಾಗಿ ವಸತಿ ರಹಿತರಿಂದ ಸಾಕಷ್ಟು ಬೇಡಿಕೆಯಿದ್ದು, ನಗರ ವ್ಯಾಪ್ತಿಯಲ್ಲಿ ಜಾಗದ ಸಮಸ್ಯೆಯಿಂದ ವಸತಿ ಯೋಜನೆಗೆ ತೀವ್ರ ಅಡ್ಡಿಯಾಗಿತ್ತು. ಆದರೆ ಅಪಾರ್ಟ್‌ಮೆಂಟ್‌ಗಳ ಮಾದರಿಯಲ್ಲಿ ಮನೆ ನಿರ್ಮಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮನೆ ನಿರ್ಮಿಸಬಹುದಲ್ಲದೇ, ಜಾಗದ
ಸಮಸ್ಯೆಗೂ ಪರಿಹಾರ ದೊರಕುವುದನ್ನು ಮನಗಂಡು ಮನಪಾ ಅಪಾರ್ಟ್‌ಮೆಂಟ್‌ ಗಳ ಮಾದರಿಯಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆ ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿತ್ತು. ಇದಕ್ಕೆ ಸರಕಾರದ ಅನುಮೋದನೆಯೂ ದೊರಕಿದ್ದು, ಮಹಾನಗರದಲ್ಲಿ ವಸತಿ ರಹಿತ ಬಡವರ ಸ್ವಂತ ಮನೆ ಹೊಂದುವ ದೀರ್ಘ‌ಕಾಲದ ಕನಸು ಈಡೇರುವ ಹಂತಕ್ಕೆ ಬಂದಿದೆ ಎಂದರು.

ಸೋಲಾರ್‌ ಅಳವಡಿಕೆಗೆ ಕ್ರಮ: ಐವನ್‌
ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮಾತನಾಡಿ, ಫಲಾನುಭವಿಗಳು ಬ್ಯಾಂಕ್‌ ಸಾಲಕ್ಕೆ
ಬರುವಾಗ ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಲೀಡ್‌ ಬ್ಯಾಂಕ್‌ನವರು ಎಚ್ಚರಿಕೆ ವಹಿಸಬೇಕು ಹಾಗೂ ಎಲ್ಲ ಮನೆಗಳಿಗೆ ಸೋಲಾರ್‌ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸೂಚಿಸಲಾಗುವುದು ಎಂದರು.

Advertisement

ಮೇಯರ್‌ ಕವಿತಾ ಸನಿಲ್‌, ಮನಪಾ ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ, ವಿಪಕ್ಷ ನಾಯಕ ಗಣೇಶ್‌ ಹೊಸಬೆಟ್ಟು, ಮಾಜಿ ಮೇಯರ್‌ ಹರಿನಾಥ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಬಿತಾ ಮಿಸ್ಕಿತ್‌, ಅಬ್ದುಲ್‌ ರವೂಫ್‌, ನಾಗವೇಣಿ, ಪ್ರಮುಖರಾದ ಪ್ರವೀಣ್‌, ಉಮೇಶ್‌ ದಂಡಕೇರಿ, ಮಹಮ್ಮದ್‌ ನವಾಝ್, ಲಕ್ಷ್ಮೀ, ಬ್ಯಾಪ್ಟಿಸ್ಟ್‌, ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌ ಮುಂತಾದವರು ಉಪಸ್ಥಿತರಿದ್ದರು. ಜಂಟಿ ಆಯುಕ್ತ ಗೋಕುಲ್‌ದಾಸ್‌ ನಾಯಕ್‌ ಸ್ವಾಗತಿಸಿದರು. ರೋಹಿತ್‌ ಉಳ್ಳಾಲ್‌ ನಿರೂಪಿಸಿದರು.

16 ತಿಂಗಳೊಳಗೆ ಅಪಾರ್ಟ್‌ಮೆಂಟ್‌ ಪೂರ್ಣ
ನಂತೂರಿನಿಂದ 4 ಕಿ.ಮೀ. ದೂರದ ಶಕ್ತಿನಗರದ ಪದವು ಗ್ರಾಮದ 10 ಎಕ್ರೆ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣವಾಗಲಿದೆ. ಇದರಲ್ಲಿ 0.91 ಎಕ್ರೆ ಭೂಮಿಯಲ್ಲಿ ಮೂಲಸೌಕರ್ಯ ಹಾಗೂ 1.36 ಎಕ್ರೆ ಪ್ರದೇಶದಲ್ಲಿ ಪಾರ್ಕ್‌
ಸೇರಿದಂತೆ ಇತರ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಒಟ್ಟು 4 ಮಹಡಿಗಳ 48 ಬ್ಲಾಕ್‌ಗಳಲ್ಲಿ 930 ಮನೆ ನಿರ್ಮಾಣ
ವಾಗಲಿದೆ. ಫೆಬ್ರವರಿ ಅಂತ್ಯದಲ್ಲಿ ಇದರ ಶಿಲಾನ್ಯಾಸವನ್ನು ಮುಖ್ಯಮಂತ್ರಿಗಳ ಮೂಲಕ ನಡೆಸಲು ಇಚ್ಛಿಸಿದ್ದು, 16
ತಿಂಗಳ ಒಳಗೆ ಫ್ಲ್ಯಾಟ್‌ ನಿರ್ಮಾಣ ಪೂರ್ಣಗೊಳ್ಳಲಿದೆ. ಮುಂದೆ ಒಂದೂವರೆ ವರ್ಷದೊಳಗೆ 1500 ಮನೆಗಳ
ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. 5 ಲಕ್ಷ ರೂ. ಮನೆ ನಿರ್ಮಾಣಕ್ಕೆ ವೆಚ್ಚವಾದರೆ, ಉಳಿದ ಎಲ್ಲ ಸೌಕರ್ಯಗಳು ಸೇರಿದಂತೆ ಒಟ್ಟು 10ರಿಂದ 15 ಲಕ್ಷ ರೂ.ಗಳ ಆಸ್ತಿಯು ಸರಕಾರವು ಫಲಾನುಭವಿಗಳಿಗೆ ನೀಡಿದಂತಾಗುತ್ತದೆ ಎಂದು ಶಾಸಕ ಜೆ.ಆರ್‌.ಲೋಬೋ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next