Advertisement

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ಆರಂಭವಾಗಿದ್ದು ಇಟಲಿಯಲ್ಲಿ

10:43 PM Apr 07, 2020 | mahesh |

ಮಣಿಪಾಲ: ಎಪ್ರಿಲ್‌ 5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲ ಭಾರತೀಯರು ಮನೆಯ ಲೈಟ್‌ ಆರಿಸಿ, ಮನೆಯಿಂದ ಹೊರಗೆ ಅಥವಾ ಬಾಲ್ಕನಿಗೆ ಬಂದು ಮೊಬೈಲ್‌ ಟಾರ್ಚ್‌ ಅಥವಾ ಮೇಣದ ಬತ್ತಿ ಹಿಡಿದರು. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಬೆಳಕನ್ನು ತೋರಿಸಿ, ದೇಶದಲ್ಲಿ ಯಾರೂ ಒಂಟಿಯಲ್ಲ. ಕೋವಿಡ್-19 ವೈರಸ್‌ನ ಮಟ್ಟ ಹಾಕಲು ದೇಶದ 130 ಕೋಟಿ ಜನರು ಒಂದೇ ಸಂಕಲ್ಪ ತೊಟ್ಟರು. ಈ ಸಂಬಂಧ ಪ್ರಧಾನಿ ಮೋದಿಯವರು ಮೊಂಬತ್ತಿ, ದೀಪ ಬೆಳಗುವುದರಿಂದ ಮನಸ್ಸು ಜಾಗೃತವಾಗುತ್ತದೆ. ಹೋರಾಡಲು ಶಕ್ತಿ ಬರುತ್ತದೆ ಎಂದು ಕರೆ ನೀಡಿದ್ದರು.

Advertisement

ಹಾಗೆಂದು ಈ ಯೋಚನೆ ಹುಟ್ಟಿದ್ದು ಸಾಮಾಜಿಕ ಪ್ರತ್ಯೇಕತೆಯಿಂದ ಹೊರಬಂದು ಒಗ್ಗಟ್ಟನ್ನು ಸಾರಲು. ಮಾರ್ಚ್‌ ತಿಂಗಳಲ್ಲೇ ಇಟಲಿಯ ಜನ ಈ ಕೆಲಸ ಮಾಡಿದ್ದರು. ಮಾರ್ಚ್‌ 15ರಂದು ಮನೆಯ ಲೈಟ್‌ ಗಳನ್ನು ಆಫ್‌ ಮಾಡಿ, ಬಾಲ್ಕನಿಗೆ ಬಂದು ಕೈಯಲ್ಲಿ ಕ್ಯಾಂಡಲ್‌ ಗಳನ್ನು ಹಿಡಿದು ಇಟಲಿಯನ್ನರು ಕೋವಿಡ್‌-19 ತಡೆಗಟ್ಟಲು ಒಟ್ಟಾಗಿ ಪ್ರಯತ್ನಿಸಿದ್ದರು.

ಇಟಲಿಯಲ್ಲಿ ಹೇಗೆ ನಡೆದಿತ್ತು?
ಇಟಲಿಯ ಮನೆಗಳ ಅಪಾರ್ಟ್‌ಮೆಂಟ್‌ಗಳ, ಬಾಗಿಲ ಹೊರಗೆ ನಿಂತು ಅಥವ ಬಾಲ್ಕನಿಯ ಮೇಲೆ ತೆರಳಿ ದೀಪ ಬೆಳಗಿಸಲಾಯಿತು. ಜನರು ತಮ್ಮ ವಾಸಸ್ಥಾನದ ವಿದ್ಯುತ್‌ ದೀಪಗಳನ್ನು ಆರಿಸಿ, ಕೈಯಲ್ಲಿ ದೀಪಗಳು, ಮೊಬೈಲ್‌ ಫೋನ್‌ಗಳು, ಟಾರ್ಚ್‌ಗಳು ಮತ್ತು ಮೇಣದಬತ್ತಿಗಳನ್ನು ಹಿಡಿದು ನಿಲ್ಲಲು ಸೂಚಿಸಲಾಗಿತ್ತು. ಇದನ್ನು ಫ್ಲಾಷ್‌ಮಾಬ್‌ ಆಫ್‌ ಲೈಟ್ಸ್’ ಎಂದು ಕರೆಯಲಾಗುತ್ತದೆ.

ಅಮೆರಿಕದಲ್ಲಿ ಮಾರ್ಚ್‌ ಕ್ರಿಸ್ಮಸ್‌
ಕೊರೊನಾ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕ ಜನರು ತಮ್ಮ ಮನೆಗಳಲ್ಲಿ ಕ್ರಿಸ್ಮಸ್‌ ದೀಪಗಳನ್ನು ಹಚ್ಚಿದ್ದರು. ತಮ್ಮ ಮನೆಯ ಮುಂಭಾಗ ಬೆಳಕನ್ನು ಹಚ್ಚಿ ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು.

ದುಬಾೖಯಲ್ಲೂ ನಡೆದಿತ್ತು
ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾದ ದುಬಾೖಯ ಬುರ್ಜ್‌ ಖಲೀಫಾ ಮಾರ್ಚ್‌ 16ರಂದು ಬಣ್ಣದ ವಿದ್ಯುತ್‌ ದೀಪಗಳಿಂದ ತುಂಬಿತ್ತು. ಕೋವಿಡ್-19 ಪಿಡಿತ ಇಟಲಿಗೆ ಈ ಮೂಲಕ ಯುಎಇ ಶಕ್ತಿ ತುಂಬಿತ್ತು. ಇಟಾಲಿಯನ್‌ ಧ್ವಜ ಬಣ್ಣಗಳು ಮತ್ತು ಇಟಾಲಿಯನ್‌ ಭಾಷೆಯಲ್ಲಿ “ನಾವು ನಿಮ್ಮೊಂದಿಗೆ ಇದ್ದೇವೆ’ ಎಂಬ ಸಂದೇಶವನ್ನು (ಸಿಯಾಮೊ ಕಾನ್‌ ವೊಯ್‌) ಗೋಪುರದ ಮುಂಭಾಗದಲ್ಲಿರುವ ಅತಿದೊಡ್ಡ ಎಲ್‌ಇಡಿ ಪರದೆಯಲ್ಲಿ ಪ್ರಸಾರ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next