Advertisement
ನಾನು ಓದುತ್ತಿದ್ದ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ವಿಷಯಕ್ಕೊಂದರಂತೆ ಸಂಘಗಳು ಇದ್ದವು. ಪ್ರಶಿಕ್ಷಣಾರ್ಥಿಗಳು ತಮ್ಮ ಆಸಕ್ತಿಯ ವಿಷಯದ ಸಂಘಕ್ಕೆ ಸೇರಬಹುದಿತ್ತು. ನನಗೆ ಗಣಿತದಲ್ಲಿ ಆಸಕ್ತಿ ಇದ್ದ ಕಾರಣ, ಗಣಿತ ಸಂಘಕ್ಕೆ ಸೇರಿ ಅದರ ಕಾರ್ಯದರ್ಶಿಯೂ ಆಗಿದ್ದೆ. ಬೇರೆ ಎಲ್ಲ ಸಂಘದ ಉದ್ಘಾಟನೆಗಳು ಸಾಮಾನ್ಯವಾಗಿ ನಡೆದಿದ್ದವು. ಆದರೆ, ನಾನು ಗಣಿತ ಸಂಘವನ್ನು ವಿಭಿನ್ನವಾಗಿ ಉದ್ಘಾಟಿಸುವ ಮೂಲಕ, ಜ್ಯೂನಿಯರ್ ಹುಡುಗಿಯರ ಪಾಲಿಗೆ ಹೀರೋ ಆಗಬೇಕೆಂದು ಲೆಕ್ಕ ಹಾಕಿದೆ!
Related Articles
Advertisement
ನನ್ನ ಐಡಿಯಾವನ್ನು ನನ್ನ ಗೆಳೆಯರು ಕೂಡಾ ಒಪ್ಪಿಕೊಂಡರು. ಎಲ್ಲರೂ ಒಟ್ಟಾಗಿ ಸೇರಿ ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವು. ಮೊದಲಿಗೆ, ನಾವೆಷ್ಟೇ ಪ್ರಯತ್ನಿಸಿದರೂ ಬಟ್ಟೆಯನ್ನು ಬಲೂನಿನೊಳಗೆ ತೂರಿಸಲಾಗಲಿಲ್ಲ. ಏನೇನೋ ಪ್ರಯತ್ನಪಟ್ಟು ಬಟ್ಟೆಯನ್ನು ಬಲೂನಿನೊಳಗೆ ಸೇರಿಸಿದ ಮೇಲೆ ಮತ್ತೂಂದು ಸಮಸ್ಯೆ ಎದುರಾಯ್ತು. ಅದೇನೆಂದರೆ, ಬಲೂನ್ ಒಡೆದ ಕೂಡಲೆ ಬಟ್ಟೆ ಮಡಚಿದ ಸ್ಥಿತಿಯಲ್ಲಿರುತ್ತಿದ್ದುದರಿಂದ ಅಕ್ಷರ ಕಾಣುತ್ತಲೇ ಇರಲಿಲ್ಲ. ಅದನ್ನು ಸರಿ ಮಾಡಲು ವ್ಯರ್ಥ ಪ್ರಯತ್ನ ಮಾಡುತ್ತಾ, ಸಮಯ ಕಳೆದಿದ್ದೇ ತಿಳಿಯಲಿಲ್ಲ. ಗಡಿಯಾರದ ಕಡೆ ನೋಡಿದಾಗಲೇ ಗೊತ್ತಾಗಿದ್ದು, ಸಮಯ ಅದಾಗಲೇ ಬೆಳಗಿನ ಜಾವ ಮೂರು ಎಂದು!
ಒಂದೆಡೆ ನಿದ್ದೆ ಮಂಪರು, ಇನ್ನೊಂದೆಡೆ ಕೈಗೂಡದ ನನ್ನ ಕಾರ್ಯ ಯೋಜನೆ. ಯಾಕಾದ್ರೂ ಸಂಘದ ಕಾರ್ಯದರ್ಶಿ ಆದೆನಪ್ಪಾ ಅನ್ನಿಸಿತು. ಆಗ ಗೆಳೆಯ ತಿಪ್ಪು ಒಂದು ಐಡಿಯಾ ಕೊಟ್ಟ- ಅಕ್ಷರಗಳಿರುವ ಬಟ್ಟೆಯನ್ನು ಗೋಡೆಗೆ ಅಂಟಿಸಿ, ಅದರ ಮೇಲೆ ಬಲೂನು ಕಟ್ಟುವುದು ಅವನ ಐಡಿಯಾ. ನಮಗೂ ಅದು ಸರಿ ಅನ್ನಿಸಿ, ಜೈ ಅಂದು ಮಲಗಿದೆವು.
ಮಾರನೇ ದಿನ ಬೆಳಗ್ಗೆ ಮಾಮೂಲಿಯಂತೆ ತರಗತಿಗಳು ಇದ್ದವು. ಹಾಗಾಗಿ ಬೆಳಗ್ಗೆ 7 ಗಂಟೆಗೇ ಕಾಲೇಜಿಗೆ ಹೋಗಿ, ಬಲೂನು ಕಟ್ಟಿ ಬಂದೆವು. ಸಂಜೆ ಕಾರ್ಯಕ್ರಮ ಶುರು ಆಯಿತು. ನನ್ನದೇ ನಿರೂಪಣೆ ಬೇರೆ. ವೇದಿಕೆಯ ಮೇಲಿದ್ದ ಪ್ರಾಂಶುಪಾಲರ ಕೈಗೆ ಊದುಬತ್ತಿ ಕೊಟ್ಟು, ಬಲೂನು ಒಡೆಯಲು ಸೂಚಿಸಿದೆ. ಇನ್ನೇನು ಕೆಲವೇ ಕ್ಷಣದಲ್ಲಿ ಬಲೂನು ಒಡೆಯುತ್ತದೆ, ಹುಡುಗಿಯರೆಲ್ಲ ಬೆರಗಾಗಿ ನನ್ನನ್ನು ನೋಡುತ್ತಾರೆ ಅಂತ ಕನಸು ಕಾಣುತ್ತಾ ವೇದಿಕೆ ಮೇಲೆ ನಿಂತಿದ್ದೆ. ಪ್ರಿನ್ಸಿಪಾಲರು ಬಲೂನು ಒಡೆದದ್ದೇ ತಡ, ಅದರಲ್ಲಿರುವ ಮಿಂಚೆಲ್ಲಾ ಅವರ ಮೇಲೆ ಬಿತ್ತು. ಗಣಿತ ಮೇಡಂ ಇನ್ನೊಂದು ಬಲೂನು ಒಡೆದಾಗಲೂ ಮಿಂಚು ಹಾರಿತು. ಆದರೆ, ನನ್ನ ಲೆಕ್ಕಾಚಾರದಂತೆ ಅವರ್ಯಾರಿಗೂ ವಿನೂತನ ಉದ್ಘಾಟನಾ ಶೈಲಿ ಇಷ್ಟವಾಗಲಿಲ್ಲ. ಎಷ್ಟೇ ಉಜ್ಜಿದರೂ ಅಳಿಸಲಾಗದ ಮಿಂಚು ಮೈ ಮೇಲೆ ಬಿದ್ದ ಕೋಪಕ್ಕೋ, ಬಲೂನು ಒಡೆದಾಗ ವೇದಿಕೆಯ ತುಂಬೆಲ್ಲಾ ಮಿಂಚು ಹಾರಿ ಗಲೀಜಾಗಿದ್ದಕ್ಕೋ ಪ್ರಾಂಶುಪಾಲರು ಕೆಂಡಾಮಂಡಲರಾದರು. “ಸಾಕು ನಿಲ್ಲಿಸಿ, ಇದೇನಿದು ನಿಮ್ಮ ಹುಚ್ಚಾಟ?’ ಎಂದು ಎಲ್ಲರೆದುರೇ ಕೂಗಿದರು. ದೂರ್ವಾಸ ಮುನಿಯಂತಿದ್ದ ಅವರ ಕೋಪಕ್ಕೆ ಹೆದರಿ, ಉಳಿದ ಬಲೂನುಗಳನ್ನು ಒಡೆಯದೆ ಹಾಗೆ ಇಳಿಸಿದೆವು. ಬಯಸಿದ್ದೊಂದು, ಆಗಿದ್ದೇ ಮತ್ತೂಂದು. ಇಂಗು ತಿಂದ ಮಂಗನಂತಾಗಿತ್ತು ನನ್ನ ಪರಿಸ್ಥಿತಿ. ಎಲ್ಲರೆದುರಿಗೆ ಹೀರೋ ಆಗಬೇಕೆಂದುಕೊಂಡಿದ್ದ ನಾನು ಜೀರೋ ಆಗಿದ್ದನ್ನು ಈಗ ನೆನಪಿಸಿಕೊಂಡರೆ ನಗು ಬರುತ್ತದೆ.
-ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ