Advertisement
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಫೆ.15 ರಂದು ಶ್ರೀ ಸೇವಾಲಾಲ್ ಜಯಂತಿ ಮೆರವಣಿಗೆ ನಡೆಯುತ್ತಿರುವ ಕಾರಣಕ್ಕೆ ಬಂಜಾರಾ ಸಮುದಾಯದ ಯುವಕರು ಮೌಲಾನಾ ಅಬ್ದುಲ್ ಕಲಾಂ ಅಜಾದ್ ವೃತ್ತದಲ್ಲಿರುವ ಆಜಾದ್ ಧ್ವಜಸ್ತಂಭಕ್ಕೆ ಸೇವಾಲಾಲ್ ಭಾವುಟ ಲಗತ್ತಿಸಲು ಮುಂದಾದಾಗ ಕೆಲ ಮುಸ್ಲಿಂ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಸ್ಥಳದಲ್ಲಿದ್ದ ಎರಡು ಗುಂಪಿನ ಯುವಕರ ನಡುವೆ ವಾಗ್ವಾದ ಉಂಟಾಗಿದೆ. ಪರಿಸ್ಥಿತಿ ಬಿಗಡಾಯಿಸುವ ಮುನ್ಸೂಚನೆ ಅರಿತ ಪೊಲೀಸರು ಕ್ರೈಂ ಪಿಎಸ್ಐ ನೇತೃತ್ವದಲ್ಲಿ ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಗುಂಪುಗಳನ್ನು ಚದುರಿಸಿದ್ದಾರೆ. ಸದ್ಯ ಮೌಲಾನಾ ಅಬ್ದುಲ್ ಕಲಾಂ ಅಜಾದ್ ವೃತ್ತದಲ್ಲಿ ವಿಶೇಷ ಪೊಲೀಸ್ ಪಡೆಯ ವಾಹನ ನಿಲುಗಡೆ ಮಾಡಲಾಗಿದೆ. ಪರಿಸ್ಥಿತಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸೇವಾಲಾಲ್ ಜಯಂತಿ ಮೆರವಣಿಗೆ ನಿಮಿತ್ತ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಫೆ.15 ರಂದು ಬೆಳಗ್ಗೆ 6 ಯಿಂದ ಸಂಜೆ 11 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಫೌಝಿಯಾ ತರನುಮ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ.