Advertisement

ಕಾಂಗ್ರೆಸ್‌ನಿಂದ ಸದ್ಯ ಫಿಕ್ಸ್‌; ಬಿಜೆಪಿಯ ಮೂವರು!

05:34 PM Feb 28, 2018 | Team Udayavani |

ಕಾಪು: ತಾಲೂಕಾಗಿ ಪರಿವರ್ತನೆಗೊಂಡಿರುವ ಕಾಪು ಕ್ಷೇತ್ರದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದಲೂ ಚುನಾವಣೆಗೆ ಭರ್ಜರಿ ತಾಲೀಮು ಪ್ರಾರಂಭ ಗೊಂಡಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ವಿನಯ ಕುಮಾರ್‌ ಸೊರಕೆಗೆ ಟಿಕೆಟ್‌ ಬಹುತೇಕ ಖಚಿತ, ಬಿಜೆಪಿಯಿಂದ ಮೂವರು ಆಕಾಂಕ್ಷಿಗಳ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಜೆಡಿಎಸ್‌ ಕಾದು ನೋಡುವ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ.

Advertisement

ಬಿಜೆಪಿಯಿಂದ ಮೂವರು ಆಕಾಂಕ್ಷಿಗಳು ಸೊರಕೆ ವಿರುದ್ಧ ಯಾರನ್ನು ನಿಲ್ಲಿಸಿದರೆ ಪಕ್ಷದ ಗೆಲುವಿಗೆ ಪೂರಕ ಎಂಬ ಬಗ್ಗೆ ಬಿಜೆಪಿ ಸಮೀಕ್ಷೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಕಾಪು ಕ್ಷೇತ್ರ
ಪ್ರಭಾರಿ ಸುರೇಶ್‌ ಪಿ. ಶೆಟ್ಟಿ ಗುರ್ಮೆ ಮತ್ತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ ಟಿಕೆಟ್‌ ಆಕಾಂಕ್ಷಿಗಳು. 

ಸೊರಕೆ ಕಳೆದ ಚುನಾವಣೆಯಲ್ಲಿ ಕಾಪುವಿನಲ್ಲಿ ಮತ್ತೆ ರಾಜಕೀಯ ಪುನರ್ಜನ್ಮ ಪಡೆದರು. ಶಾಸಕತ್ವದ ಅವಧಿಯಲ್ಲಿ 3 ವರ್ಷ ನಗರಾಭಿವೃದ್ಧಿ ಸಚಿವರಾಗಿದ್ದರು. ಲಾಲಾಜಿ ಆರ್‌. ಮೆಂಡನ್‌ ಎರಡು ಬಾರಿ ಕಮಲವನ್ನು ಅರಳಿಸಿದ್ದರು. 2013ರಲ್ಲಿ ಕಡಿಮೆ ಅಂತರಗಳ ಮತಗಳಿಂದ ಸೋತಿದ್ದರು. ತನ್ನ ಶಾಸಕತ್ವದ ಅವಧಿಯಲ್ಲಿ ನೂರಾರು ಕೋ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆಸಿ ಜನಾದರಣೆ ಹೊಂದಿದ್ದಾರೆ. ಈಗ ಚುನಾವಣೆಗೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. 

ಗುರ್ಮೆ ಸುರೇಶ್‌ ಪಿ. ಶೆಟ್ಟಿ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಧುಮುಕಿದವರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ತನಗೆ ಟಿಕೆಟ್‌ ಕೊಡುವುದೆಂದು ಭಾವಿಸಿದ್ದರು. ಕೊನೇ ಕ್ಷಣದಲ್ಲಿ ಟಿಕೆಟ್‌ ನಿರಾಕರಿಸಿದ ಕಾರಣ ನಿರಾಶರಾಗಿ ಬಿಜೆಪಿ ಸೇರಿದ್ದರು. ಸಮಾಜ
ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇವರು ಕಳೆದ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮತ್ತು ಕಾಪು ಕ್ಷೇತ್ರ ಪ್ರಭಾರಿ ಹುದ್ದೆ ನಿಭಾಯಿಸುತ್ತಿದ್ದಾರೆ. ಅವರೊಬ್ಬ ಪ್ರಬಲ ಟಿಕೆಟ್‌ ಆಕಾಂಕ್ಷಿ.

ಯಶಪಾಲ್‌ ಸುವರ್ಣ ಮೊಗವೀರ ಸಮುದಾಯದ ಯುವ ನಾಯಕ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 3 ಬಾರಿ ಉಡುಪಿ ನಗರಸಭಾ ಸದಸ್ಯರಾಗಿ, ದ. ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಷನ್‌ ಅಧ್ಯಕ್ಷರಾಗಿ, ಎನ್‌ಎಂಪಿಟಿ ಬಂದರಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಘ ಪರಿವಾರದೊಂದಿಗೆ ಸಕ್ರಿಯರು, ಯುವಕರೊಂದಿಗೆ ಆತ್ಮೀಯ ಸಂಬಂಧ ಇರಿಸಿ
ಕೊಂಡು ಸ್ಪರ್ಧೆಗೆ ತುದಿಗಾಲಿ ನಲ್ಲಿದ್ದಾರೆ. 

Advertisement

ಜೆಡಿಎಸ್‌ ಪೈಪೋಟಿ 
2013ರಲ್ಲಿ ವಸಂತ ವಿ. ಸಾಲ್ಯಾನ್‌ ಅವರನ್ನು ಕಣಕ್ಕಿಳಿಸಿ ಪೈಪೋಟಿ ನೀಡಿದ್ದ ಜೆಡಿಎಸ್‌ ಈ ಬಾರಿ ಕೊನೆಯ ಕ್ಷಣದವರೆಗೂ ಕಾದು ನೋಡುವ ತಂತ್ರ ಗಾರಿಕೆ ಅನುಸರಿಸುವ ಸಾಧ್ಯತೆಯಿದೆ. ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಕಾಪುವಿನವರೇ ಆಗಿದ್ದು, ಸ್ವತಃ 
ಕಣಕ್ಕಿಳಿಯುವ ಸಾಧ್ಯತೆಯಿದೆ. ಇದೇವೇಳೆ ಅದು ಅಲ್ಪಸಂಖ್ಯಾಕ ಮತಗಳನ್ನೇ ನೆಚ್ಚಿ ಕೊಂಡಿರುವುದೂ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಭಾವ ಬೀರಲಿದೆ. ಜೆಡಿಎಸ್‌ ಕಾಪು ಬ್ಲಾಕ್‌ ಅಧ್ಯಕ್ಷ ಸುಧಾಕರ ಶೆಟ್ಟಿ ಅವರೂ ಟಿಕೆಟ್‌ ಆಕಾಂಕ್ಷಿಯೇ.

ಕಾಂಗ್ರೆಸ್‌ ಪರ ಸಿದ್ದು ; ಬಿಜೆಪಿ ಪರ ಯಡ್ಡಿ
ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧನಾ ಸಮಾವೇಶದ ನೆಪದಲ್ಲಿ ಪಕ್ಷದ ಅಭ್ಯರ್ಥಿ ವಿನಯಕುಮಾರ್‌ ಸೊರಕೆ ಪರವಾಗಿ ಬಹಿರಂಗವಾಗಿ ಭಾಷಣ ಮಾಡಿದ್ದರು. ಕಾಪುವಿನಲ್ಲಿ ಪಕ್ಷದ ಅಭ್ಯರ್ಥಿ ವಿನಯಕುಮಾರ್‌ ಸೊರಕೆಯವರೇ ಎಂಬುದಾಗಿ ಘೋಷಣೆ ಮಾಡಿದ್ದಾರೆ. ಅಭ್ಯರ್ಥಿಯಾಗುವುದಕ್ಕೆ ಪೂರಕವಾಗಿ ಸೊರಕೆ ನೂತನ ಕಾಪು ತಾಲೂಕಿಗೆ ಬೇಕು ಬೇಕಾದುದನ್ನೆಲ್ಲ ತಂದು ಸುರಿಯುತ್ತಿದ್ದಾರೆ. ಇತ್ತ ಬಿಜೆಪಿ ಪರ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆ ಬಹಿರಂಗ ಸಮಾವೇಶ ನಡೆಸಿದೆ. ಎರಡೂ ಸಮಾವೇಶಗಳು ಒಂದಕ್ಕೊಂದು ಪರ್ಯಾಯ ಸಮಾವೇಶಗಳಂತೆ ಭಾಸವಾಗಿದ್ದು, ಕಾರ್ಯಕರ್ತರು ಕೂಡ ಅದನ್ನು ಚುನಾವಣಾ ಪೂರ್ವ ತಾಲೀಮು ಎಂದೇ ತಿಳಿದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next