Advertisement

ಫಿಕ್ಸೆಡ್‌ ಡೆಪಾಸಿಟ್‌

07:48 PM Nov 24, 2019 | Sriram |

ಅವಧಿ, ನಿಗದಿತ ಠೇವಣಿ (ಟರ್ಮ್ ಡೆಪಾಸಿಟ್‌)ಯಿಂದ ಕಾಲಕಾಲಕ್ಕೆ ಉದಾಹರಣೆಗೆ ತಿಂಗಳು, ಮೂರು ತಿಂಗಳು, ವಾರ್ಷಿಕ ಬಡ್ಡಿ ಬರುವಲ್ಲಿ ಈ ಠೇವಣಿಯನ್ನು ಫಿಕ್ಸೆಡ್‌ ಡೆಪಾಸಿಟ್‌ ಎಂಬುದಾಗಿ ಕರೆಯುತ್ತಾರೆ. ಬಡ್ಡಿಯ ಹಣದಿಂದಲೇ ಜೀವನ ಸಾಗಿಸುವವರಿಗೆ, ಈ ಠೇವಣಿ ಬಹು ಉಪಯುಕ್ತವಾಗಿದೆ. ಈ ಠೇವಣಿಯನ್ನು ಕನಿಷ್ಠ 15 ದಿವಸಗಳು ಹಾಗೂ ಗರಿಷ್ಠ 10 ವರ್ಷಗಳ ಅವಧಿಗೆ ಮಾಡಬಹುದಾಗಿದೆ. ಈ ಖಾತೆಯನ್ನು ವೈಯಕ್ತಿಕವಾಗಿ, ಜಂಟಿಯಾಗಿ ಕೂಡಾ ಮಾಡಬಹುದು. ಎಲ್ಲಾ ವರ್ಗದ ಜನರು, ಸಂಸ್ಥೆಗಳು, ಈ ಖಾತೆಯನ್ನು ತೆರೆಯಬಹುದು. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಎಷ್ಟು ಬೇಕಾದರೂ ಎಫ್.ಡಿ ಖಾತೆಯನ್ನು ಹೊಂದಬಹುದು. ಕಾಲಕಾಲಕ್ಕೆ ಬರುವ ಬಡ್ಡಿಯನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಳ್ಳಬಹುದು ಅಥವಾ ನಗದಾಗಿ ಪಡೆಯಬಹುದು.

Advertisement

ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದದೆ ಕೂಡಾ ಎಫ್.ಡಿ ಮಾಡಬಹುದು ಹಾಗೂ ಖಾತೆದಾರ ಬೇರೊಂದು ಬ್ಯಾಂಕಿನಲ್ಲಿ ಖಾತೆ ಹೊಂದಿದಲ್ಲಿ ಠೇವಣಿ ಇರಿಸಿದ ಬ್ಯಾಂಕು ಖಾತೆದಾರರು ಬಯಸುವ ಬೇರೆ ಬ್ಯಾಂಕಿನ ಉಳಿತಾಯ ಖಾತೆಗೆ ಆರ್‌.ಟಿ.ಜಿ.ಎಸ್‌- ನೆಫ್ಟ್ ಮುಖಾಂತರ ಹಣ ಜಮಾ ಮಾಡುತ್ತಾರೆ.ಈ ಸೇವೆ ಶುಲ್ಕರಹಿತವಾಗಿದೆ. ಎಫ್.ಡಿ ಅವಧಿ ಮುಗಿದು, ಅದೇ ಠೇವಣಿಯನ್ನು ಮುಂದುವರಿಸಲು ಆಟೋ ರಿನೀವಲ್‌ ಕೂಡಾ ಮಾಡುವ ಸೌಲಭ್ಯವಿರುತ್ತದೆ. ಹೀಗೆ ಮಾಡಲು ಠೇವಣಿದಾರ ಬ್ಯಾಂಕಿಗೆ ಬರುವ ಅವಶ್ಯಕತೆ ಇರುವುದಿಲ್ಲ. ಈ ಠೇವಣಿಗೆ ನಾಮನಿರ್ದೇಶನ ಸೌಲಭ್ಯವಿದೆ. ಆದರೆ, ಒಂದು ಠೇವಣಿಗೆ ಒಬ್ಬರನ್ನೇ ನಾಮನಿರ್ದೇಶನ ಮಾಡಬಹುದು.

ಠೇವಣಿಯನ್ನು ವಿಂಗಡಿಸಿ ಇಟ್ಟಲ್ಲಿ, ಜೀವನದಲ್ಲಿ ಏನಾದರೂ ತೊಂದರೆಯಾದಾಗ, ಆಗತ್ಯ ಬಿದ್ದಲ್ಲಿ ಯಾವುದಾದರೊಂದು ಠೇವಣಿಯನ್ನು ಅವಧಿಗೆ ಮುನ್ನ ಪಡೆದು, ಉಳಿದ ಠೇವಣಿ ಹಾಗೆಯೇ ಮುಂದುವರಿಸಬಹುದು. ಠೇವಣಿಯ ಮೇಲೆ ಶೇ.90ರಷ್ಟು ಸಾಲ ಪಡೆಯಬಹುದಾದರೂ, ನೀವು ಪಡೆಯುವ ಬಡ್ಡಿಗಿಂತ ಠೇವಣಿ ಸಾಲದ ಬಡ್ಡಿ ಹೆಚ್ಚಿರುವುದರಿಂದ, ವಿಂಗಡಿಸಿಟ್ಟ ಯಾವುದಾದರೊಂದು ಠೇವಣಿಯನ್ನು ಅವಧಿಗೆ ಮುನ್ನ ಪಡೆಯುವುದೇ ಲೇಸು. ಉಳಿತಾಯ ಖಾತೆಯಲ್ಲಿ ಹಣ ಜಮಾ ಆಗುತ್ತಿದ್ದು, ಕಾಲಕಾಲಕ್ಕೆ ಜಮಾ ಆಗುವ ಒಂದು ಭಾಗವನ್ನು ಎಫ್.ಡಿ.ಗೆ ವರ್ಗಾಯಿಸಲು ಬ್ಯಾಂಕಿಗೆ ಮುಂದಾಗಿ ಸ್ಟಾಂಡಿಂಗ್‌ ಇನ್‌ಸ್ಟ್ರಕ್ಷನ್‌ ಕೊಡಬಹುದು. ಹೀಗೆ ಮಾಡಿದಲ್ಲಿ ನಿಮ್ಮ ಹಣಕ್ಕೆ ಹೆಚ್ಚಿನ ಬಡ್ಡಿ ಬಂದಂತಾಗುತ್ತದೆ. ಜೊತೆಗೆ ಬೇಡವಾದ ಖರ್ಚಿಗೆ ಕಡಿವಾಣ ಹಾಕಿದಂತಾಗುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.

ವಿ.ಸೂ.: ಬಡ್ಡಿಯ ಹಣದಿಂದಲೇ ಜೀವಿಸುವವರು ಎಫ್.ಡಿ. ಮೇಲೆ ಪ್ರತೀ ತಿಂಗಳು ಬಡ್ಡಿ ಬಯಸುವುದು ಸಹಜ. ಆದರೆ, ಈ ಮಾರ್ಗದಲ್ಲಿ ನಿಗದಿತ ಬಡ್ಡಿಗಿಂತ ಬ್ಯಾಂಕುಗಳಲ್ಲಿ ಸ್ವಲ್ಪ ಕಡಿಮೆ ಬಡ್ಡಿ ಕೊಡುತ್ತಾರೆ.ಇದನ್ನು ಡಿಸ್ಕೌಂಟೆಡ್‌ ರೇಟ್‌ ಆಫ್ ಇಂಟರೆಸ್ಟ್‌ (Discounted rate of interest) ಎಂಬುದಾಗಿ ಕರೆಯುತ್ತಾರೆ. ಇದರ ಬದಲು, ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯುವುದೇ ಲೇಸು. ಹೀಗೆ ಮೂರು ತಿಂಗಳ ನಂತರ ಪಡೆಯುವ ಬಡ್ಡಿಯನ್ನು ಉಳಿತಾಯ ಖಾತೆಯಲ್ಲಿ ಜಮಾ ಇರಿಸಿ, ಮುಂದೆ ಅದೇ ಮೊತ್ತದಿಂದ ಪ್ರತೀ ತಿಂಗಳು, ಮುಂದಿನ ಮೂರು ತಿಂಗಳಲ್ಲಿ ಬಡ್ಡಿ ಪಡೆಯಬಹುದು. ಅಷ್ಟರಲ್ಲಿ ಮತ್ತೆ ಮೂರು ತಿಂಗಳ ಬಡ್ಡಿ ಜಮಾ ಆಗುತ್ತದೆ. ಮೊದಲ ಮೂರು ತಿಂಗಳು ಮಾತ್ರ ಬಡ್ಡಿ ಪಡೆಯಲು ಕಾಯಬೇಕಾದರೂ, ಮುಂದಿನ ಅವಧಿಯಲ್ಲಿ ಬಡ್ಡಿಯಲ್ಲಿ ಯಾವ ಕಡಿತ ಇಲ್ಲದೆಯೇ ಪಡೆಯಬಹುದು ಹಾಗೂ ಇದರಿಂದ ಖಾತೆದಾರರ ಉದ್ದೇಶ ಸಫ‌ಲವಾಗುತ್ತದೆ. ಜೊತೆಗೆ ಗರಿಷ್ಠ ಹಾಗೂ ಸಂಪೂರ್ಣ ಬಡ್ಡಿ ಪಡೆದಂತಾಗುತ್ತದೆ.

– ಯು. ಪುರಾಣಿಕ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next