ರಾಮನಗರ: ರಾಷ್ಟ್ರೀಯ ಹೆದ್ದಾರಿ 275ರ ಎಕ್ಸ್ ಪ್ರೆಸ್ ವೇನಲ್ಲಿ ನಡೆಯುತ್ತಿರುವ ನಿರಂತರ ಅಪಘಾತದ ಬಗ್ಗೆ ಕಿಡಿಕಾರಿದ ಸಂಸದ ಡಿ.ಕೆ.ಸುರೇಶ್, ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತ ತಪ್ಪಿಸಿ, ಇಲ್ಲವೇ ಹೆದ್ದಾರಿ ಬಂದ್ ಮಾಡಿ ಎಂದು ಖಡಕ್ ಸೂಚನೆ ನೀಡಿದರು.
ಹೆದ್ದಾರಿಯಲ್ಲಿ ಅಪಘಾತದ ಶತಕ ದಾಟಿದ್ದು, ಈ ಬಗ್ಗೆ ಉದಯವಾಣಿ ವರದಿ ವರದಿ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿದ್ದ ದಿಶಾ ಸಮಿತಿ ಸಭೆಯಲ್ಲಿ ಅಪಘಾತಗಳಿಗೆ ಸಂಬಂಧಿಸಿದಂತೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಅವರು, ಮಾರ್ಚ್ ನಲ್ಲಿ ಉದ್ಘಾಟನೆಯಾದ ರಸ್ತೆಯಲ್ಲಿ 105 ಮಂದಿ ಸಾವಿಗೀಡಾಗಿದ್ದಾರ. ಅಪೂರ್ಣ ಕಾಮಗಾರಿಯನ್ನು ಮಾಡಿ ಟೋಲ್ ಹಣ ಸಂಗ್ರಹಕ್ಕಾಗಿ ವಾಹನ ತಿರುಗಾಡಲು ಬಿಟ್ಟು ಜನರ ಜೀವ ಬಲಿ ಪಡೆಯುತ್ತಿದ್ದೀರಿ. ಇದೊಂದು ಡೆತ್ ಸ್ಪಾಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:Adipurush ಬಿಡುಗಡೆ ಬೆನ್ನಲ್ಲೇ ಶಾರುಖ್ ‘ಸ್ವದೇಸ್’ ರಾಮಾಯಣದ ದೃಶ್ಯ ವೈರಲ್
ಬ್ಲಾಕ್ ಸ್ಫಾಟ್ ಯಾಕೆ ಗುರುತಿಸಿಲ್ಲ: ಹೆದ್ದಾರಿಯಲ್ಲಿ ಬ್ಲಾಕ್ ಸ್ಫಾಟ್ ಗುರುತಿಸಿ ಎಂದು ಪ್ರಾಧಿಕಾರಕ್ಕೆ ನಾನು ಮೊದಲ ದಿನವೇ ಸೂಚಿಸಿದ್ದೆ. ಆದರೆ ಯಾಕೆ ಗುರುತಿಸಿಲ್ಲ ಎಂದು ಪ್ರಶ್ನಿಸಿದ ಅವರು, ಮುಂದಿನ ವಾರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿರಸ್ತೆ ಸುರಕ್ಷತಾ ಸಭೆ ಕರೆಯಲಿದ್ದು ಸಭೆಗೆ ಅಗತ್ಯ ಮಾಹಿತಿಯೊಂದಿಗೆ ಬನ್ನಿ ಎಂದರು.
ಕ್ಷಮೆ ಕೋರಿದ ಪಿಡಿ: ಬೆಂ-ಮೈ ಹೆದ್ದಾರಿಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಕ್ಕೆ ಸಂಬಂಧಿಸಿದಂತೆ ಎನ್ ಎಚ್ ಯೋಜನಾ ನಿರ್ದೇಶಕರು ಕ್ಷಮೆ ಕೋರಿದರು. ಈ ಸಂಬಂಧ ಪೊಲೀಸ್ ಇಲಾಖೆ ಜೊತೆ ಸಹ ಚರ್ಚಿಸಿದ್ದು ಸೂಕ್ತ ಸಲಹೆ ನೀಡುವಂತೆ ಕೇಳಿದ್ದೇವೆ. ಸಮಸ್ಯೆ ಪರಿಹರಿಸುತ್ತೇವೆ ಎಂದರು.
ದಿನಾ ಒಬ್ಬೊಬ್ಬರು ಸಾಯುತ್ತಿದ್ದಾರೆ. ನೀವು ಯಾವಾಗ ಕ್ರಮ ಕೈಗೊಳ್ಳುತ್ತೀರಿ. ಟೋಲ್ ವಸೂಲಿಗಾಗಿ ರಸ್ತೆಯಲ್ಲಿ ಜನರನ್ನು ಬಲಿಕೊಡಿವುದು ಬೇಡ ಸರಿಮಾಡದೇ ಇದ್ದರೆ ರಸ್ತೆ ಬಂದ್ ಮಾಡಿ ಎಂದು ಎಚ್ಚರಿಕೆ ನೀಡಿದರು.